News Karnataka Kannada
Friday, May 03 2024
ಬೆಂಗಳೂರು ನಗರ

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಸರಳ ಗಣರಾಜ್ಯೋತ್ಸವ ಆಚರಣೆ

Cm Bommai
Photo Credit :

ಬೆಂಗಳೂರು(ಜ.25) : ಕೋವಿಡ್‌ 19 ಹಿನ್ನೆಲೆಯಲ್ಲಿ ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಜ.26ರಂದು ಸರಳವಾಗಿ 73ನೇ ಗಣರಾಜ್ಯೋತ್ಸವ ಆಯೋಜಿಸಲಾಗುತ್ತಿದ್ದು, ಈ ಬಾರಿಯೂ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸದಿರಲು ನಿರ್ಧರಿಸಲಾಗಿದೆ. ಸೋಮವಾರ ಗಣರಾಜ್ಯೋತ್ಸವ ಆಚರಣೆ ಸಿದ್ಧತೆಗಳನ್ನು ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ. ಪಂತ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ ಈ ವಿಷಯ ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಸುದ್ದಿಗಾರರೊಂದಿಗೆ ಮಾತನಾಡಿ, ಜ.26ರಂದು ಬೆಳಗ್ಗೆ 9ಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜ್ವಾರೋಹಣ ನೆರವೇರಿಸಲಿದ್ದಾರೆ. ಭದ್ರತಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.

ರಕ್ಷಣಾ ತುಕಡಿಗಳಿಂದ ಪಥಸಂಚಲನ:
ಕೆಎಸ್‌ಆರ್‌ಪಿ, ಸಿಆರ್‌ಪಿಎಫ್‌, ಬಿಎಸ್‌ಎಫ್‌, ಸಿಎಆರ್‌, ಕೆಎಸ್‌ಐಎಸ್‌ಎಫ್‌, ಸಂಚಾರಿ ಪೊಲೀಸರು, ಮಹಿಳಾ ಪೊಲೀಸರು, ಗೃಹ ರಕ್ಷಕ ದಳ, ಟ್ರಾಫಿಕ್‌ ವಾರ್ಡನ್‌, ಅಗ್ನಿಶಾಮಕ ದಳದ ಸಿಬ್ಬಂದಿ, ಶ್ವಾನ ದಳ ಮತ್ತು ಬ್ಯಾಂಡ್‌ನ ಒಟ್ಟು 21 ತುಕಡಿಗಳಲ್ಲಿ ಸುಮಾರು 500 ಮಂದಿ ಕವಾಯತ್ತಿನಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ಗಣರಾಜ್ಯೋತ್ಸವ ಅಂಗವಾಗಿ ಮಾಣೆಕ್‌ ಷಾ ಮೈದಾನದಲ್ಲಿ ಸೂಕ್ತ ಬಂದೋಬಸ್‌ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ 60 ಸಿಸಿ ಕ್ಯಾಮೆರಾ ಹಾಗೂ 2 ಬ್ಯಾಗೇಜ್‌ ಸ್ಕಾಯನರ್‌ ಮತ್ತು ವ್ಯವಸ್ಥಿತ ಸಂಚಾರ ನಿಯಂತ್ರಣ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾವುದೇ ಆಕಸ್ಮಿಕ ವಿಪತ್ತು ಸಂಭವಿಸಿದ್ದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯವಿರುವಷ್ಟುಆಂಬುಲೆನ್ಸ್‌ಗಳು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ. ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಿ ಸಾಕಷ್ಟುಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

200 ಗಣ್ಯರಿಗೆ ಮಾತ್ರ ಅವಕಾಶ:
ಕೋವಿಡ್‌ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮಗಳನ್ನು ವೀಕ್ಷಿಸಲು ಕೇವಲ 200 ಗಣ್ಯರಿಗೆ ಮಾತ್ರ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆಹ್ವಾನಿತರು ಕಡ್ಡಾಯವಾಗಿ ಮುಖಗವುಸು ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

ಭದ್ರತೆಗಾಗಿ 1400 ಪೊಲೀಸ್‌
ಜ.26ರ ಗಣರಾಜ್ಯೋತ್ಸವ ದಿನದಂದು ಕಹಿ ಘಟನೆಗಳು ನಡೆಯದಂತೆ ಪೊಲೀಸ್‌ ಭದ್ರತೆ ನೀಡಲಾಗುತ್ತದೆ. ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಒಟ್ಟು 16 ಪೊಲೀಸ್‌ ತುಕಡಿಗಳು, 5 ವಾದ್ಯ ವೃಂದ, 2 ಶ್ವಾನ ದಳ, 4 ಕ್ಯೂಆರ್‌ಡಿ, 2 ಆರ್‌ಐವಿ, 6 ಅಶ್ವ ತಂಡಗಳು ಪರೇಡ್‌ನಲ್ಲಿ ಭಾಗಿಯಾಗಲಿವೆ ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ. ಪಂತ್‌ ತಿಳಿಸಿದರು.

ಒಟ್ಟು 29 ಅಧಿಕಾರಿಗಳು, 464 ಸಿಬ್ಬಂದಿ ಕವಾಯಿತಿನಲ್ಲಿ ಭಾಗಿಯಾಗುತ್ತಾರೆ. ಪರೇಡ್‌ ಸುತ್ತಲೂ ಭದ್ರತೆಗೆ 11 ಡಿಸಿಪಿ, 20 ಎಸಿಪಿ, 60 ಪೊಲೀಸ್‌ ಇನ್ಸ್‌ಪೆಕ್ಟರ್‌, 125 ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಒಟ್ಟು 1,400 ಜನ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದರು.

ಇದೇ ಮೊದಲ ಬಾರಿಗೆ ಆಂಧ್ರಪ್ರದೇಶದ ಪೊಲೀಸರು ಕವಾಯತಿನಲ್ಲಿ ಭಾಗಿಯಾಗಲಿದ್ದಾರೆ. ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು. ಇನ್ನು ಸೋಮವಾರ ಪಥಸಂಚಲನದಲ್ಲಿ ಪಾಲ್ಗೊಳ್ಳುವ ರಕ್ಷಣಾ ಸಿಬ್ಬಂದಿ ಕೊರೋನಾ ಪರೀಕ್ಷೆಗಾಗಿ ಸ್ವಾಯಬ್‌ ಸಂಗ್ರಹಿಸಲಾಯಿತು.

ಪೇರೆಡ್‌ ತಾಲೀಮು…

ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ರಕ್ಷಣಾ ಪಡೆಗಳ ಸಿಬ್ಬಂದಿ ಶುಕ್ರವಾರ ತಾಲೀಮು ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು