ಬೆಂಗಳೂರು: ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಜೇಮ್ಸ್ ಸಮಾಜದ ಮೇಲೆ ಬೆಳಕು ಚೆಲ್ಲುವಂತಾಗಲಿ ಎಂದು ಹೇಳಿದರು.
ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ‘ಜೇಮ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ ಮಾಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಜೇಮ್ಸ್ ಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯಿತಿ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಪುನೀತ್ ಜನಪರ ಕಾಳಜಿ, ಸೇವೆಯನ್ನು ಮರೆಯಲು ಸಾಧ್ಯವಿಲ್ಲ, ಮಾನವೀಯತೆ ದೃಷ್ಟಿಯಿಂದ ಬಹಳ ಎತ್ತರದಲ್ಲಿದ್ದರು. ಕನ್ನಡಿಗರ ಪಾಲಿನ ಮಾಣಿಕ್ಯವಾಗಿದ್ದರು. ಅವರ ಜೇಮ್ಸ್ ಚಿತ್ರ ಸಮಾಜದಲ್ಲಿ ಬೆಳಕು ಮೂಡಿಸುವ ಚಿತ್ರವಾಗಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.