ಬೆಂಗಳೂರು: ‘ಬಿಜೆಪಿ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಲಿದ್ದಾನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ತನಕ ವಿರಮಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವ ಭಾಗದಲ್ಲಿ ಓಡಾಡಿ ಬಲಪಡಿಸುತ್ತೇನೆ. ಸಾಕಷ್ಟು ಜನ ಬಿಜೆಪಿ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷವನ್ನು ಸೇರುತ್ತಿದ್ದಾರೆ. ಪರಿಶಿಷ್ಟರು ಮತ್ತು ಹಿಂದುಳಿದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಕರೆ ತರುವ ಕೆಲಸ ಆಗಬೇಕು’ ಎಂದು ತಿಳಿಸಿದ್ದಾರೆ.
ಗಣೇಶ ಹಬ್ಬದ ಬಳಿಕ ಬಿ.ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.