ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬೆಂಬಲಿಸಿ ರಾಜ್ಯದ ವಿವಿಧ ಮಠಾಧೀಶರ ಸಮಾವೇಶ ಆರಂಭವಾಗಿದೆ. ಈ ಸಮಾವೇಶದಲ್ಲಿ ವಿವಿಧ ಮಠಗಳ ೫೦೦ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದಾರೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ತೀರ್ಮಾನ ಕೈಗೊಳ್ಳದಂತೆ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ತರುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ.
ಈ ಸಮಾವೇಶವು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ತಿಪಟೂರಿನ ರುದ್ರಮುನಿ ಸ್ವಾಮೀಜಿ ಮತ್ತು ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದೆ.
ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಬಿಜೆಪಿ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ಬೆಂಬಲ ಕಳೆದುಕೊಳ್ಳುತ್ತದೆ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶ.