News Karnataka Kannada
Sunday, May 05 2024
ಬೆಂಗಳೂರು

ಕೃಷ್ಣಾ ಮೇಲ್ದಂಡೆ-3 ಸಾಕಾರಕ್ಕೆ ಬದ್ಧ : ಗೋವಿಂದ ಕಾರಜೋಳ

Govinda Karajola
Photo Credit :

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ, ಸಾಕಾರಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅದೇರೀತಿ ಅಂತರ ರಾಜ್ಯ ನದೀ ನೀರಿನ ಹಂಚಿಕೆಯಲ್ಲಿ ಕರ್ನಾಟಕದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ಎಲ್ಲಾ ಕ್ರಮಕೈಗೊಳ್ಳುವುದಾಗಿ ಮಾನ್ಯ ಜಲ ಸಂಪನ್ಮೂಲ ಸಚಿವ ಶ್ರೀ ಗೋವಿಂದ ಎಂ. ಕಾರಜೋಳರವರು ಇಂದು ವಿಧಾನ ಪರಿಷತ್ತಿನಲ್ಲಿ ಘೋಷಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ವಿಧಾನಪರಿಷತ್ತಿನಲ್ಲಿ ಇಂದು ವಿರೋಧ ಪಕ್ಷದ ನಾಯಕ ಶ್ರೀ ಎಸ್.ಆರ್.ಪಾಟೀಲ್ ಮತ್ತು ಇತರರು ಪ್ರಸ್ತಾಪಿಸಿದ ಅಲ್ಪ ಕಾಲಾವಧಿ ಚರ್ಚೆಗೆ ಉತ್ತರ ನೀಡುತ್ತಾ ತಿಳಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ 3ರಡಿ 2013ರಿಂದ ಇಲ್ಲಿಯವರೆಗೆ ಮಾಡಲಾದ ವೆಚ್ಚದ ವಿವರಗಳನ್ನು ನೀಡಿದ ಸಚಿವರು 2013 ರಿಂದ 2018ರವರೆಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 7728.80 ಕೋಟಿ ರೂಪಾಯಿ ಮಾತ್ರ ವೆಚ್ಚ ಮಾಡಲಾಗಿದೆ. 2018 ರಿಂದ 2019ರ ಜುಲೈವರೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 1295.50 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಜುಲೈ 2019ರಿಂದ ಪ್ರಸಕ್ತ ಸರ್ಕಾರದ ಅವಧಿಯಲ್ಲಿ 3326.70 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಸಚಿವರು ವಿವರಗಳನ್ನು ನೀಡಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಒಂದು ಸವಾಲಾಗಿದೆ. ಏಕೆಂದರೆ ಇಲ್ಲಿ ಬಹುದೊಡ್ಡ ಪ್ರಮಾಣದ ಭೂಸ್ವಾಧೀನವಾಗಬೇಕಾಗಿದೆ. 2013ರ ಹೊಸ ಭೂಸ್ವಾಧೀನ ಕಾಯಿದೆಯಿಂದ ಭೂಸ್ವಾಧೀನದ ದರ ಹೆಚ್ಚಾಗಿದೆ. 1,34,000 ಎಕರೆ ಭೂಮಿ ಭೂಸ್ವಾಧೀನವಾಗಬೇಕಾಗಿದೆ. ಇದರಿಂದಾಗಿ ಒಟ್ಟು 78,000 ಕೋಟಿ ರೂಪಾಯಿಗಳ ಒಟ್ಟು ವೆಚ್ಚವಾಗಲಿದೆ ಎಂದು ತಿಳಿಸಿದರು. ಬ್ರಿಟೀಷರ ಕಾಲದಿಂದಲೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೋರಾಟ ಪ್ರಾರಂಭವಾಗಿದ್ದು ಅಂದು ನಮ್ಮ ರಾಜ್ಯದಿಂದ ಮುಂಬೈ ಸರ್ಕಾರದಲ್ಲಿ ಶಾಸಕರಾಗಿದ್ದ ಬಾಬು ಹುಜರೆಯವರು ಸಹ ಹೋರಾಟ ಮಾಡಿ ಜೈಲಿಗೆ ಹೋದವರು. ಮುಂಬೈ ಪ್ರಾಂತದ ಅಧಿಕಾರದ ಸಂದರ್ಭದಲ್ಲಿಯೇ ಕೊಯ್ನಾ ಅಣೆಕಟ್ಟು ಕಟ್ಟಿ 37 ಟಿ.ಎಂ.ಸಿ.ಯಷ್ಟು ನೀರನ್ನು ತಾಳಿಕೋಟಿವರೆಗೆ ತರಲು ಯೋಜನೆ ರೂಪಿಸಲಾಗಿತ್ತು. ಅಷ್ಟರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾಗಿ ಮೈಸೂರು ಮತ್ತು ಮುಂಬೈ ಸರ್ಕಾರಗಳು ರಚನೆಯಾದವು. ಆಗ ಮುಂಬೈ ಪ್ರಾಂತದ ಸರ್ಕಾರ 2 ಕೋಟಿ ರೂಪಾಯಿಗಳನ್ನು ಮೈಸೂರು ಸರ್ಕಾರ ನೀಡಿದರೆ ನೀರಾವರಿ ಯೋಜನೆ ಕಾರ್ಯಗತಗೊಳಿಸುವುದಾಗಿ ತಿಳಿಸಿತ್ತು. ಆದರೆ ಮೈಸೂರು ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಒಂದು ವೇಳೆ ಒಪ್ಪಿದ್ದರೆ 40 ವರ್ಷಗಳ ಹಿಂದೆಯೇ ಅಖಂಡ ವಿಜಯಪುರ ಜಿಲ್ಲೆಯು ನೀರಾವರಿಯ ಸೌಲಭ್ಯ ಪಡೆಯುತ್ತಿತ್ತು ಎಂದು ಸಚಿವರು ಹಲವಾರು ವಿಷಯಗಳನ್ನು ಸದನದ ಗಮನಕ್ಕೆ ತಂದರು.

ಅದಾದ ಮೇಲೆ 1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾಗಾಂಧಿಯವರನ್ನು ಬಂಗಾರದಲ್ಲಿ ತುಲಾಭಾರ ಮಾಡಿದರೂ ಸಹ 52 ಕೋಟಿ ರೂಪಾಯಿ ವೆಚ್ಚದ ಅಂದಿನ ಆಲಮಟ್ಟಿ ಅಣೆಕಟ್ಟೆಯ ಕಾರ್ಯ ತ್ವರಿತಗತಿಯಿಂದ ಸಾಗಲಿಲ್ಲ.
ಅಂತರರಾಜ್ಯ ಜಲವಿವಾದಗಳ ಕಾಯಿದೆಯನ್ವಯ ರಚಿತವಾಗಿದ್ದ ಕೃಷ್ಣಾ ನ್ಯಾಯಾಧಿಕರಣ-2 (ಬ್ರಿಜೇಷ್ ಕುಮಾರ್ ಆಯೋಗ) ತನ್ನ ಅಂತಿಮ ಐತೀರ್ಪನ್ನು 2010ರಲ್ಲಿ ನೀಡಿದ ಮೇಲೆ 2011-12ರಲ್ಲಿಯೇ ಒಂದು ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಿ 130 ಟಿ.ಎಂ.ಸಿ. ನೀರನ್ನು ಬಳಕೆ ಮಾಡಿಕೊಳ್ಳಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಆದಾದ ನಂತರ ಹೆಚ್ಚು ಪ್ರಗತಿ ಆಗಲೇ ಇಲ್ಲ. ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವ ಸಂದರ್ಭದಲ್ಲಿ ಒಬ್ಬರೇಒಬ್ಬರು ಸಂತ್ರಸ್ತರು ಉಳಿಯಬಾರದು ಎಂಬ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಕಳೆದ ಹಲವಾರು ವರ್ಷಗಳಲ್ಲಿ ಯಾವುದೇ ಪ್ರಗತಿ ಸಾಧಿಸಲಾಗಿಲ್ಲದಿರುವುದರಿಂದ ನಮ್ಮ ಸರ್ಕಾರದ ಜವಾಬ್ದಾರಿ ದ್ವಿಗುಣವಾಗಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ರೂಪಾಯಿ ಖರ್ಚುಮಾಡುವುದಾಗಿ ಅಂದಿನ ನೀರಾವರಿ ಸಚಿವರು ಘೋಷಿಸಿದ್ದರು. ಆದರೆ ಾ ಸರ್ಕಾರದ ಅವಧಿಯಲ್ಲಿ ಕೇವಲ 7,728.80 ಕೋಟಿ ರೂಪಾಯಿಗಳನ್ನು ಮಾತ್ರ ವೆಚ್ಚ ಮಾಡಲಾಗಿದೆ ಎಂದು ಸಚಿವರು ಸದನದ ಗಮನಕ್ಕೆ ತಂದರು.
ಎತ್ತಿನಹೊಳೆ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದ ಸದಸ್ಯರ ಪ್ರಶ್ನೆಗಳಿಗೆ ಉತ್ತರವಾಗಿ ಎತ್ತಿನಹೊಳೆ ಯೋಜನೆಯ ವಿವರಗಳನ್ನು ಒದಗಿಸಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ಅಡೆತಡೆಗಳೆಲ್ಲಾ ನಿವಾರಣೆಯಾಗುತ್ತಿದ್ದು, ಭೈರಗೊಂಡು ಜಲಾಶಯದ ನಿರ್ಮಾಣದ ಭೂಸ್ವಾಧೀನ ಪ್ರಕ್ರಿಯೆಗೆ ಏಕರೂಪದ ಪರಿಹಾರ ನೀಡಲು ಸಾಧ್ಯವಿಲ್ಲ. ಆದ್ದರಿಂದ ಕೆಲವು ಬದಲಾವಣೆಗಳನ್ನು ಅನಿವಾರ್ಯವಾಗಿದೆಯೆಂದು ಸಚಿವರು ಸದನದ ಗಮನಕ್ಕೆ ತಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು