News Karnataka Kannada
Saturday, May 04 2024
ಬಳ್ಳಾರಿ

ಸೆ.17ರಂದು ಬಳ್ಳಾರಿ ಜಿಲ್ಲೆಯಲ್ಲಿ 1.50 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ

Vaccine 17072021
Photo Credit :

ಬಳ್ಳಾರಿ: ಇಡೀ ರಾಜ್ಯದಲ್ಲಿ ಇದೇ ಸೆ.17ರಂದು ಬೃಹತ್ ಪ್ರಮಾಣದ ಕೋವಿಡ್ ಲಸಿಕಾ ನೀಡಿಕೆ ಕಾರ್ಯಕ್ರಮ ಆಂದೋಲನ ರೂಪದಲ್ಲಿ ನಡೆಯುತ್ತಿದ್ದು,ಅಂದು ಬಳ್ಳಾರಿ ಜಿಲ್ಲೆಯಲ್ಲಿ 1.50 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದ್ದು,ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.
ಮಂಗಳವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ ಅವರು ವಿಡಿಯೋ ಕಾನ್ಪರೆನ್ಸ್ ನಡೆಸಿ ಸೆ.17ರಂದು ಕೋವಿಡ್ ಲಸಿಕೆ ನೀಡಿಕೆಗೆ ಸಂಬಂಧಿಸಿದಂತೆ ಹಾಕಿಕೊಂಡಿರುವ ಗುರಿ ಸಾಧಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವ ಸಿದ್ಧತೆಗಳನ್ನು ಮಾಡಬೇಕು ಎಂಬುದರ ನಿರ್ದೇಶನ ನೀಡಿದ್ದು,ಅದರಂತೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

550 ವ್ಯಾಕ್ಸಿನೇಶನ್ ತಂಡಗಳ ರಚನೆ: ನಿಗದಿಪಡಿಸಿಕೊಂಡಿರುವ ಗುರಿ ಸಾಧಿಸುವ ನಿಟ್ಟಿನಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 550 ವ್ಯಾಕ್ಸಿನೇಶನ್ ತಂಡಗಳನ್ನು ರಚಿಸಲಾಗಿದ್ದು,ಪ್ರತಿಯೊಂದು ತಂಡಗಳಲ್ಲಿ ವ್ಯಾಕ್ಸಿನೇಟರ್, ಡಾಟಾ ಎಂಟ್ರಿ ಅಪರೇಟರ್ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳಿರಲಿದ್ದಾರೆ. ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೆ.17ರಂದು ನಡೆಯುವ ಲಸಿಕಾ ಕಾರ್ಯಕ್ರಮದ ಮೇಲೆ ವಿಶೇಷ ಗಮನಹರಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಎಲ್ಲ ತಾಲೂಕುಗಳಲ್ಲಿ ಕಂದಾಯ ಇಲಾಖೆ,ನಗರ ಸ್ಥಳೀಯ ಸಂಸ್ಥೆ, ತಾಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‍ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬೃಹತ್ ಲಸಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜನರು ಸಹ ಮುಂದೆ ಬಂದು ಲಸಿಕೆ ಪಡೆದುಕೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

8.50ಲಕ್ಷ ಲಸಿಕೆ ಪಡೆಯುವುದು ಬಾಕಿ: ಜ.16ರಿಂದ ಈ ಕೋವಿಡ್ ಲಸಿಕೆ ನೀಡಿಕೆ ಪ್ರಕ್ರಿಯೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಆರಂಭವಾಗಿದ್ದು, 18 ವರ್ಷ ಮೇಲ್ಪಟ್ಟ 21.50ಲಕ್ಷ ಜನಸಂಖ್ಯೆಯಲ್ಲಿ ಇದುವರೆಗೆ ಜಿಲ್ಲೆಯಲ್ಲಿ 12.50 ಲಕ್ಷ ಜನರು ಲಸಿಕೆ(ಮೊದಲ ಡೋಸ್ ಮತ್ತು ಎರಡನೇ ಡೋಸ್ ಸೇರಿ)ಪಡೆದುಕೊಂಡಿದ್ದು,ಶೇ.59ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ 8.50 ಲಕ್ಷ ಜನರು ಮೊದಲ ಡೋಸ್ ಸಹ ಪಡೆದುಕೊಂಡಿಲ್ಲ. ಅವರಿಗೆ ಲಸಿಕೆ ನೀಡಲು ಈ ವಿಶೇಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.

ರಾಜ್ಯದಲ್ಲಿ ಈ ಲಸಿಕಾ ಪ್ರಕ್ರಿಯೆ ನೋಡಿದರೇ ನಮ್ಮ ಜಿಲ್ಲೆಯಲ್ಲಿ ಸ್ವಲ್ಪ ನಿಧಾನಗತಿಯಲ್ಲಿದೆ ಎಂದು ಹೇಳಿದ ಜಿಲ್ಲಾಧಿಕಾರಿ ಮಾಲಪಾಟಿ ಅವರು ಕೋವಿಡ್ 3ನೇ ಅಲೆ ಬಂದ್ರೇ ನಮ್ಮ ಜಿಲ್ಲೆಗೆ ಅಪಾಯ ಕೂಡ ಜಾಸ್ತಿ ಇದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಜನರು, ಗ್ರಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು,ತಾಪಂ ಮತ್ತು ಜಿಪಂ ಸದಸ್ಯರು, ಶಾಸಕರು,ಸಂಸದರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಮುಂದೆ ಬಂದು ಈ ಲಸಿಕಾ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ತಾವು ಲಸಿಕೆ ಹಾಕಿಸಿಕೊಂಡಿರುತ್ತೀರಿ;ತಾವು ಹಾಕಿಕೊಂಡರಾಯ್ತು ಅಂತ ಅಂದುಕೊಳ್ಳದೇ ತಮ್ಮ ಅಕ್ಕಪಕ್ಕದ ಮನೆಯಲ್ಲಿ ಲಸಿಕೆ ಹಾಕಿಸಿಕೊಳ್ಳದವರ ಮನವೋಲಿಸಿ ಅವರನ್ನು ಲಸಿಕಾಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಲ್ಲಿ ಲಸಿಕಾ ಕೇಂದ್ರಗಳನ್ನು ಮಾಡಲಾಗಿದೆ ಎಂಬುದರ ವಿವರವನ್ನು ಸ್ವಚ್ಛಭಾರತ ಮಿಶನ್‍ನ ಕಸ ಸಂಗ್ರಹಣಾ ವಾಹನಗಳ ಮೂಲಕ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡಂಗೂರ ಸಾರುವ ಮೂಲಕ ಮತ್ತು ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಲಸಿಕಾ ನೀಡಿಕೆ ಕಾರ್ಯ ಸೆ.17ರಂದು ಬೆಳಗ್ಗೆ 6.30ರಿಂದ ಸಂಜೆ 7ರವರೆಗೆ ನಡೆಯಲಿದ್ದು,ಲಸಿಕೆ ಪಡೆಯದವರು ಅಂದು ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು; ಈ ಮೂಲಕ 3ನೇ ಅಲೆ ತಡೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು