News Karnataka Kannada
Monday, April 29 2024
ಬೆಂಗಳೂರು

ಮುಕ್ತ ವಿವಿಯಲ್ಲಿನ ಅಕ್ರಮದ ವಿರುದ್ಧ ಕ್ರಮದ ಭರವಸೆ

Ksou
Photo Credit :

ಬೆಂಗಳೂರು : ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ವಿಶ್ವವಿದ್ಯಾಲಯದ ರಕ್ಷಣೆಗೆ ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭರವಸೆ ನೀಡಿದ್ದಾರೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ. ಚಂಬಿ ಪುರಾಣಿಕ್ ಅವರು ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ರಾಜ್ಯದ ಪ್ರಪ್ರಥಮ ಪ್ರಜೆ ರಾಜ್ಯಪಾಲರನ್ನು ಭೇಟಿಯಾಗಿ ಗೌರವಿಸಿ, ವಿವಿಯ ಅಕ್ರಮಗಳಿಗೆ ಸಂಬಂಧಿಸಿದಂತೆ 33 ಪುಟಗಳ ದೂರು ಸಲ್ಲಿಸಿದರು.

ರಾಜ್ಯಪಾಲರ ಭೇಟಿ ಕುರಿತು ಮಾಹಿತಿ ನೀಡಿರುವ ವಿಶ್ರಾಂತ ಕುಲಪತಿ ಮತ್ತು ನಿವೃತ್ತ ಡೀನ್ ಅವರು,  ರಾಜ್ಯಪಾಲರು ಸುಮಾರು 15 ನಿಮಿಷಗಳ ಕಾಲ ನಮ್ಮ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದರು. ನಾವು ವಿಶ್ವವಿದ್ಯಾಲಯ ಇತ್ತೀಚಿನ ವರ್ಷಗಳಲ್ಲಿ ಹೇಗೆ ಅಧಃಾಪತನದತ್ತ ಸಾಗುತ್ತಿದೆ ಎಂಬುದನ್ನು ಎಳೆ ಎಳೆಯಾಗಿ ವಿವರಿಸಿದ್ದೇವೆ. ವಿಶೇಷವಾಗಿ ಕುಲಪತಿ ಡಾ. ಎಸ್. ವಿದ್ಯಾಶಂಕರ್ ಅವರ ಅವೈಜ್ಞಾನಿಕ ತೀರ್ಮಾನಗಳು, ಭ್ರಷ್ಟಾಚಾರಕ್ಕೆ ಕಾರಣವಾಗುವ ಹಾಗೂ ಅಗತ್ಯವೇ ಇಲ್ಲದ ಕಟ್ಟಡ ಕಾಮಗಾರಿಗಳಿಂದ ವಿಶ್ವವಿದ್ಯಾಲಯದ ನಿಧಿ ನೀರಿನಂತೆ ಕರಗುತ್ತಿದೆ. ಕೆಲವೇ ವರ್ಷಗಳಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಶೈಕ್ಷಣಿಕ ಅಭಿವೃದ್ಧಿ ಹೊರತಾಗಿ ವೆಚ್ಚ ಮಾಡಲಾಗಿದೆ. ಕರ್ನಾಟಕ ಮುಕ್ತ ವಿವಿ ಶೈಕ್ಷಣಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆ ಮಾದರಿಯಲ್ಲಿ ನಿರ್ಮಾಣ ಕಾಮಗಾರಿ ವಿಭಾಗವಾಗಿ ಪರಿವರ್ತನೆಯಾಗಿದೆ ಎಂದು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ.

ಕೆಲವೇ ವರ್ಷಗಳ ಹಿಂದೆ ಈ ವಿಶ್ವವಿದ್ಯಾಲಯ ದೇಶದ ಅತ್ಯಂತ ಪ್ರತಿಷ್ಠಿತ ವಿವಿಯಾಗಿತ್ತು. ಇದೀಗ ನಶಿಸುವ ಹಂತಕ್ಕೆ ತಲುಪಿದೆ. ಇದು ಹೀಗೆ ಮುಂದುವರೆದರೆ ಕೆಲವೇ ಸಮಯದಲ್ಲಿ ವಿಶ್ವವಿದ್ಯಾಲಯದ ಮರಣೋತ್ತರ ಪರೀಕ್ಷೆ ನಡೆಸುವ ಪರಿಸ್ಥಿತಿ ಎದುರಾಗಲಿದೆ. ನೀವು ಈ ವಿವಿಯ ಕುಲಾಧಿಪತಿಯಾಗಿದ್ದು, ನಿಮ್ಮ ಕಾಲದಲ್ಲಿ ಈ ಸಂಸ್ಥೆ ಮತ್ತೆ ತನ್ನ ಗತ ವೈಭವಕ್ಕೆ ಮರಳುವಂತೆ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹೊಸ ಹೊಸ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿತ್ತು. ಆದರೆ ಆರ್ಥಿಕ ವೆಚ್ಚದ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆಸಕ್ತರಾಗಿದ್ದಾರೆ. ವಿಸ್ತರಣಾ ಕೇಂದ್ರಗಳನ್ನು ನಿರ್ಮಿಸುವ ಕೆಲಸದಲ್ಲಿ ಕುಲಪತಿ ಅವರು ತೊಡಗಿದ್ದಾರೆ. ಮುಕ್ತ ವಿವಿ ಗೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುವುದಿಲ್ಲ. ಹೀಗಿರುವಾಗ ಕಟ್ಟಡಗಳು, ಹೆಚ್ಚಿನ ಮೂಲ ಸೌಕರ್ಯದ ಅಗತ್ಯವಿಲ್ಲ ವಿವಿಯಲ್ಲಿ ಈಗಾಗಲೇ 20 ಕ್ಕೂ ಹೆಚ್ಚು ವಿಸ್ತರಣಾ ಕೇಂದ್ರಗಳಿವೆ.

ಈ ಪೈಕಿ ಕೆಲವು ಕೇಂದ್ರಗಳು ಮುಚ್ಚಿವೆ. ಹೀಗಿದ್ದರೂ  ಧಾರವಾಡ, ಕಲಬುರಗಿ ಸೇರಿ ಮೂರು ಕಡೆಗಳಲ್ಲಿ ಪ್ರಾದೇಶಿಕ ಕೇಂದ್ರಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಮಾಗಡಿ ಬಳಿ ಸಂಸ್ಕೃತ ವಿವಿಗಾಗಿ ವಿಸ್ತರಣಾ ಕೇಂದ್ರದ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದೆವು. ರಾಜ್ಯಪಾಲರು ಸಂಸ್ಕೃತ ವಿವಿಗೆ ಕಟ್ಟಡ ನಿರ್ಮಿಸಿದರೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಆಗ ನಾವು ಇದು ವಿವಿ ಕಾಯ್ದೆಗೆ ವಿರುದ್ಧವಾದ ನಡೆ. ಕಟ್ಟಡ ನಿರ್ಮಾಣ ಮಾಡಲೇಬೇಕು ಎನ್ನುವುದಿದ್ದರೆ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿರುವುದಾಗಿ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ. ಚಂಬಿ ಪುರಾಣಿಕ್ ತಿಳಿಸಿದ್ದಾರೆ.

ನಾವು ರಾಜ್ಯಪಾಲರಿಗೆ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಕುಲಾಧಿಪತಿಯವರು ನಮಗೆ ಸ್ಪಷ್ಟವಾದ ಭರವಸೆ ನೀಡಿದ್ದಾರೆ. ಹಾಗೊಂದು ವೇಳೆ ವಿವಿ ರಕ್ಷಣೆ ಸಾಧ್ಯವಾಗದಿದ್ದರೆ ನಾವು ಮುಂದಿನ ದಿನಗಳಲ್ಲಿ ಕಾನೂನಿನ ಹೋರಾಟಕ್ಕೆ ಇಳಿಯುತ್ತೇವೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು