ಹುಬ್ಬಳ್ಳಿ: ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ, ಬೆಳಗಾವಿ ಟಿಕೆಟ್ ಸಿಕ್ಕೇ ಸಿಗುತ್ತೆ, ನಾಳೆ ಅಥವಾ ನಾಡಿದ್ದು ಲಿಸ್ಟ್ ಬಿಡುಗಡೆಯಾಗುತ್ತದೆ ಎಂದು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರನ್ನು ನಾನು ಭೇಟಿಯಾಗಿದ್ದೇನೆ. ಬೆಳಗಾವಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಜೊತೆಯೂ ಚರ್ಚಿಸಿದ್ದೇನೆ. ಬಿಜೆಪಿ ಸ್ಥಳೀಯ ನಾಯಕರು ಜೊತೆಯ ಸಮಾಲೋಚನೆ ಮಾಡಿದ್ದೇನೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇನೆ. ಪ್ರಧಾನಿ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಆ ಸಭೆಯಲ್ಲಿ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗುತ್ತದೆ. ಹೈಕಮಾಂಡ್ ನಾಯಕರಿಗೆ ಚರ್ಚಿಸಿದಾಗ ಸಕಾರಾತ್ಮಕ ಸ್ಪಂದನ ಸಿಕ್ಕಿದೆ ಎಂದರು.
ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋ ವಿಶ್ವಾಸವಿದೆ. ನಾಳೆ ಅಥವಾ ನಾಡಿದ್ದು ಟಿಕೆಟ್ ಫೈನಲ್ ಆಗುತ್ತದೆ. ಪ್ರಭಾಕರ ಕೋರೆ, ಕವಟಗಿ ಮಠ ಮೊದಲಾದವರ ಜೊತೆ ಚರ್ಚಿಸಿದ್ದೇನೆ. ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡೋಣ ಅಂತ ತೀರ್ಮಾನಿಸಿದ್ದೇವೆ.