News Karnataka Kannada
Monday, May 20 2024
ಹುಬ್ಬಳ್ಳಿ-ಧಾರವಾಡ

ಧಾರವಾಡ ಪೇಡಾ; ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ- ಗಮನ ಸೆಳೆದ ಟ್ಯಾಗ್‍ಲೈನ್

Dharwad Peda; Dharwad breed buffalo, our pride- tagline that caught the attention
Photo Credit : News Kannada

ಧಾರವಾಡ: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಅ.24 ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‍ಲೈನ್ ಹೊಂದಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ದೇಶ ವಿದೇಶಿಯರ ಗಮನ ಸೆಳೆದಿದೆ.

ಪ್ರಸಕ್ತ ಸಾಲಿನ ಜಂಬೂಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು.

ಇವುಗಳಲ್ಲಿ ಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಡಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು. ಮತ್ತು ಸ್ತಬ್ಧಚಿತ್ರಕ್ಕೆ ನೀಡಿದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‍ಲೈನ್ ನೋಡುಗರನ್ನು ಆಕರ್ಷಿಸಿತು. ಸುಮಾರು 7 ಕಿ.ಮೀ. ಉದ್ದದ ಜಂಬೂಸವಾರಿ ಮೆರವಣಿಗೆಯಲ್ಲಿ ಧಾರವಾಡ ಪೇಡೆಯ ರೂಪಕ ಹೊತ್ತ ಸ್ತಬ್ಧಚಿತ್ರವು ಮೆರವಣಿಗೆಯುದ್ದಕ್ಕೂ ನೆರೆದ ಜನರ ಗಮನ ಸೆಳೆಯಿತು.

ಜಿಲ್ಲಾ ಪಂಚಾಯತಿಯ ಸುಮಾರು 7.80 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಈ ಸ್ತಬ್ಧಚಿತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ನೀಡಿದ್ದ ಪರಿಕಲ್ಪನೆ ಹಾಗೂ ವಿಷಯ ವಸ್ತುವಿನ ಆಧಾರದ ಮೇಲೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈ ಕುಸುರಿ ಕಲಾವಿದ ಶಶಿಧರ ಗರಗ ಅವರು ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ಸತತ 12 ದಿನಗಳ ಕಾಲ ತಮ್ಮ ಕೈ ಕಲಾ ಚಳಕದಲ್ಲಿ ನಿರ್ಮಿಸಿದ್ದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಎ.ಎ. ತಹಶೀಲ್ದಾರ ಮತ್ತು ಹುಬ್ಬಳ್ಳಿಯ ಕೈಗಾರಿಕಾ ವಿಸ್ತರಣಾ ಅಧಿಕಾರಿ ಶಿವಾನಂದ ಕಮ್ಮಾರ ಅವರ ಮಾರ್ಗದರ್ಶನದಲ್ಲಿ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು.

ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪಿ.ಓ.ಪಿ., ಬಿದಿರು, ಬೊಂಬು, ಫ್ಲೈವುಡ್, ಥರ್ಮಾಕೊಲ್ ಮತ್ತು ಪೇಂಟ್ ಬಳಸಿ ಕಲಾವಿದ ತಮ್ಮ ಕೈಯಿಂದ ಸ್ವತಃ ತಯಾರಿಸಿದ್ದರು. ಇದರಲ್ಲಿ ಯಾವುದೇ ಕೃತಕ ರೂಪಕ, ವಸ್ತುಗಳನ್ನು ಬಳಸಿರಲಿಲ್ಲ.

ಸ್ತಬ್ಧಚಿತ್ರದ ಆಯ್ಕೆ ಸಮಿತಿ ಪ್ರತಿನಿತ್ಯ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಿಗಾವಹಿಸುತ್ತದೆ. ಪ್ರಶಸ್ತಿ ಆಯ್ಕೆಗೆ ಸ್ತಬ್ಧಚಿತ್ರಕ್ಕೆ ಬಳಸಿದ ಕೈ ಕಲೆ, ಪರಿಕಲ್ಪನೆ (ಥೀಮ್) ಮತ್ತು ರೂಪಿಸಿದ ಆಕೃತಿಗಳು ಸೇರಿ ಒಟ್ಟಾರೆ ರೂಪಕ ಗಣನೆಗೆ ಬರುತ್ತದೆ. ಸಾಹಿತ್ಯ, ಸಂಸ್ಕೃತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಖುಷಿ ತಂದಿದೆ. ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಸ್ತಬ್ದಚಿತ್ರದ ನಿರೂಪಣೆ:
“ಧಾರವಾಡ ಪೇಡಾ – ಧಾರವಾಡಿ ತಳಿ ಎಮ್ಮೆ; ನಮ್ಮ ಹೆಮ್ಮೆ” : ಧಾರವಾಡ ಪೇಡಾ ಉತ್ಪಾದನೆಯನ್ನು 19 ನೇ ಶತಮಾನದಲ್ಲಿ ಪ್ರಾರಂಭಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಮೂಲತಃ ಠಾಕೂರ್ ಮನೆತನದವರು ಉತ್ತರ ಪ್ರದೇಶದ ಉನ್ನಾವೊದಿಂದ ಧಾರವಾಡಕ್ಕೆ ವಲಸೆ ಬಂದು ಪೇಡಾವನ್ನು ತಯಾರಿಸಲು ಪ್ರಾರಂಭಿಸಿದರು. ಇದು ಸುಮಾರು 175 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅಂದಿನಿಂದ ಇಂದಿನವರೆಗೂ ಠಾಕೂರ ಮನೆತನದವರು ಧಾರವಾಡದಲ್ಲಿ ನೆಲೆಸಿ, ಪೇಡಾ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಈಗ ಸಾಕಷ್ಟು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪೇಡಾ ಉತ್ಪಾದನೆಯಲ್ಲಿ ತೊಡಗಿದ್ದು, ದಿನಂಪ್ರತಿ ಸುಮಾರು 5 ಟನ್ ಪೇಡಾ ಉತ್ಪಾದನೆ ಮಾಡಿ ಮಾರಾಟ ಮಾಡಲಾಗುತ್ತಿವೆ.

ಧಾರವಾಡ ಪೇಡಾವು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಾರುಕಟ್ಟೆಯನ್ನು ಹೊಂದಿದ್ದು, ಹಬ್ಬ ಮತ್ತು ಇತರ ವಿಶೇಷ ದಿನಗಳಲ್ಲಿ ವಿಶೇಷ ಸಿಹಿ ತಿಂಡಿಯಾಗಿ ಸ್ಥಾನವನ್ನು ಪಡೆದುಕೊಂಡಿದೆ.

ಪೇಡಾ ತಯಾರಿಕೆಗಾಗಿ ಧಾರವಾಡ ಪೇಡಾ ಜಿಐ ಟ್ಯಾಗನ್ನು ಹೊಂದಿದ್ದು, ಧಾರವಾಡ ದೇಸಿ ತಳಿ ಎಮ್ಮೆಗೆ ರಾಷ್ಟ್ರೀಯ ಮನ್ನಣೆ ದೊರೆಕಿದೆ. ಈ ಪ್ರಾಮುಖ್ಯತೆ ಪಡೆದ ರಾಜ್ಯದ ಮೊದಲ ಸ್ಥಳೀಯ ಎಮ್ಮೆಯ ತಳಿ ಇದಾಗಿದೆ. ಈ ಮೂಲಕ ಸ್ಥಳೀಯವಾಗಿ ಧಾರವಾಡಿ ತಳಿ ಎಮ್ಮೆ ಎಂದೇ ಕರೆಯಲ್ಪಡುವ ದೇಸೀಯ ತಳಿಯ ಹಾಲಿನಿಂದ ತಯಾರಿಸಿದ ಖೊವಾ (ಖವಾ) ಮತ್ತು ಸಕ್ಕರೆಯಿಂದ ತಯಾರಿಸುವ ಪೇಡಾ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಮತ್ತು ಆರೋಗ್ಯ ವೃದ್ಧಿಗಾಗಿ ಇದು ಅಗಾಧವಾದ ಕ್ಯಾಲ್ಸಿಯಂ ಕಣಜವಾಗಿದೆ.

ಧಾರವಾಡ ಪೇಡಾ 1912 ರಲ್ಲಿ ಲಾರ್ಡ್ ವಿಲಿಂಗ್ಟನ್ ಮೆಡಲ್, 1999 ರಲ್ಲಿ ಕರ್ನಾಟಕ ಸರ್ಕಾರ ಪ್ರಶಸ್ತಿ, 2001 ರಲ್ಲಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, 2002 ರಲ್ಲಿ ರಾಜೀವ ಗಾಂಧಿ ಎಕ್ಸಲೆನ್ಸಿ ಪ್ರಶಸ್ತಿ ಪಡೆದಿದೆ.

ಧಾರವಾಡ ಜಿಲ್ಲೆಯು ಅರೆಮಲೆನಾಡು ಪ್ರದೇಶವಾಗಿರುವರಿಂದ ಇಲ್ಲಿನ ಜನರು ಕೃಷಿಯೊಂದಿಗೆ ಹೈನುಗಾರಿಕೆ ವೃತ್ತಿಗೂ ಪ್ರಾಮುಖ್ಯತೆ ನೀಡುತ್ತಾರೆ. ದಿನನಿತ್ಯ ಪೇಡಾ ಉತ್ಪಾದನಾ ಚಟುವಟಿಕೆಯಲ್ಲಿ ಗೌಳಿ ಜನಾಂಗದ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವುದರೊಂದಿಗೆ ಪೇಡಾ ತಯಾರಿಕೆಯು ಧಾರವಾಡ ಜಿಲ್ಲೆಯ ಹೆಮ್ಮೆಯ ಕಿರೀಟವಾಗಿದೆ.

ಈ ವಿಷಯ ವಸ್ತುವನ್ನು ಪ್ರಸ್ತುತಪಡಿಸುವ ಸ್ತಬ್ಧಚಿತ್ರವನ್ನು ಈ ಸಲದ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯ ಮೆರವಣಿಗೆಯಲ್ಲಿ ಪ್ರದರ್ಶಿಸಲಾಯಿತು. ಸ್ತಬ್ಧಚಿತ್ರದ ಕಲೆ, ಥೀಮ್, ರೂಪಕ ಪ್ರಸ್ತುತಿ ಪರಿಗಣಿಸಿ, ಪ್ರಥಮ ಬಹುಮಾನ ನೀಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು