ಬೆಳಗಾವಿ: ಜಿಲ್ಲೆಯ ಬೆಳವಟ್ಟಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬುದ್ಧಿಮಾಂದ್ಯ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರ ಎಸಗಿ, ಗರ್ಭಿಣಿಯನ್ನಾಗಿಸಿದ್ದಾನೆ.
ತಾಯಿ ಇಲ್ಲದ ಮಾನಸಿಕ ಅಸ್ವಸ್ಥ ಮಗಳ ಮೇಲೆ ಮನೆಯಲ್ಲಿ ಆಕೆಯ ತಂದೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಆಕೆ ಗರ್ಭಿಣಿಯಾಗಿರುವ ಬಗ್ಗೆ ಸ್ಥಳೀಯರಿಂದ ಅನುಮಾನ ವ್ಯಕ್ತವಾದ ಬಳಿಕ ಗ್ರಾಮದ ಆಶಾ ಕಾರ್ಯಕರ್ತೆಯರ ಮೂಲಕ ತಪಾಸಣೆ ನಡೆಸಿದಾಗ ಗರ್ಭಿಣಿಯಾಗಿರುವ ಮಾಹಿತಿ ದೃಢಪಟ್ಟಿದೆ.
ಸರ್ಕಾರೇತರ ಸಂಸ್ಥೆಯೊಂದು 2023ರ ಫೆಬ್ರವರಿ ತಿಂಗಳಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಬುದ್ಧಿಮಾಂದ್ಯೆಯ ತಂದೆ ಮೇಲೆ ಅನುಮಾನಗೊಂಡು ತಂದೆ ಹಾಗೂ ಆಕೆಗೆ ಜನಿಸಿದ ಮಗುವಿನ ಡಿಎನ್ಎ ಪರೀಕ್ಷಿಸಿದ ಬಳಿಕ ಆತನೇ ಮಗುವಿನ ತಂದೆ ಎನ್ನುವುದು ದೃಢಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಅವರು, ಬುದ್ಧಿಮಾಂದ್ಯೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಎನ್.ಜಿ.ಒ ದೂರು ನೀಡಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆಕೆಯ ತಂದೆಯೇ ಕೃತ್ಯ ಎಸಗಿರುವುದು ತಿಳಿದು ಬಂದಿದೆ ಎಂದು ಹೇಳಿದರು.