News Karnataka Kannada
Saturday, May 18 2024
ಹುಬ್ಬಳ್ಳಿ-ಧಾರವಾಡ

ಆಯೋಗದ ನಿಯಮ ಉಲ್ಲಂಘಿಸಿದಲ್ಲಿ ಪ್ರಜಾಪ್ರತಿನಿಧಿ ವಿರುದ್ಧ ಕ್ರಮ ಖಚಿತ : ಡಿಸಿ

ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣಾ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ಹಾಗೂ ನಿಷೇಧಿಸಲಾಗಿರುವ ವಿಷಯಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅವುಗಳನ್ನು ಚಾಚು ತಪ್ಪದೇ ಪಾಲಿಸಬೇಕೆಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
Photo Credit : NewsKarnataka

ಧಾರವಾಡ : ಚುನಾವಣಾ ಆಯೋಗವು ಮೇ. 5, 2024 ರ ಸಾಯಂಕಾಲ 6 ಗಂಟೆಯಿಂದ ಮತದಾನ ದಿನವಾದ ಮೇ. 07, 2024ರಂದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣಾ ಅಭ್ಯರ್ಥಿಗಳು ಪಾಲಿಸಬೇಕಾದ ನಿಯಮಾವಳಿಗಳನ್ನು ಹಾಗೂ ನಿಷೇಧಿಸಲಾಗಿರುವ ವಿಷಯಗಳ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಅವುಗಳನ್ನು ಚಾಚು ತಪ್ಪದೇ ಪಾಲಿಸಬೇಕೆಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಅವರು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ, 11-ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಸಾಮಾನ್ಯ ವೀಕ್ಷಕರು, ಚುನಾವಣಾ ಲೆಕ್ಕವೀಕ್ಷಕರು, ಪೊಲೀಸ ವೀಕ್ಷಕರ ಉಪಸ್ಥಿತಿಯಲ್ಲಿ ಎಲ್ಲ ಚುನಾವಣಾ ಅಭ್ಯರ್ಥಿಗಳ, ರಾಜಕೀಯ ಪಕ್ಷಗಳ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗವು ಮತದಾನವನ್ನು ಶಾಂತಿಯುತವಾಗಿ, ನಿರ್ಭಯ, ಮುಕ್ತ ಮತ್ತು ಪಾರದರ್ಶಕವಾಗಿ ಜರುಗಿಸಲು ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರಸ್ನೇಹಿ ವಾತಾವರಣ ರೂಪಿಸಲು ವಿವಿಧ ಕ್ರಮಗಳನ್ನು ವಿಧಿಸಿದೆ. ಅದರಲ್ಲಿ ಮತದಾನ ಮುಕ್ತಾಯವಾಗುವ ಪೂರ್ವದ 72 ಮತ್ತು 48 ಗಂಟೆಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸಬೇಕಾದ ನಿಯಮಗಳು ಮುಖ್ಯವಾಗಿವೆ. ಈ ಸೂಚಿತ 72 ಮತ್ತು 48 ಗಂಟೆಗಳ ಅವಧಿಯಲ್ಲಿ ಜರುಗುವ ರಾಜಕೀಯ ಕಾರ್ಯಚಟುವಟಿಕೆಗಳನ್ನು ನಿಗಾವಹಿಸಲು ಹೆಚ್ಚುವರಿ ತಪಾಸಣಾ ತಂಡಗಳನ್ನು ರಚಿಸಲಾಗಿದ್ದು, ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣ ಚುನಾವಣಾ ಆಯೋಗದ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ ಅನುಸಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಈ ಕುರಿತು ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ಮಾದರಿ ನೀತಿ ಸಂಹಿತೆ ನಿಗಾ ತಂಡಗಳು, ಎಫ್.ಎಸ್.ಟಿ, ಎಸ್.ಎಸ್.ಟಿ ತಂಡಗಳು ರಾಜಕೀಯ ಚಟುವಟಿಕೆಗಳ ಹಾಗೂ ಚುನಾವಣಾ ನಿಯಮಗಳ ಉಲ್ಲಂಘನೆ ಬಗ್ಗೆ ತೀವ್ರವಾಗಿ ನಿರಂತರ ನಿಗಾವಹಿಸಬೇಕೆಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಮುಖ್ಯವಾಗಿ, ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸಲು ಅನುಮತಿಸಲಾಗುವುದಿಲ್ಲ. ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ, ಆ ಪ್ರಚಾರವನ್ನು ಉತ್ತೇಜಿಸಲು ರಾಜಕೀಯ ಪಕ್ಷಗಳು ಚುನಾವಣಾ ಕ್ಷೇತ್ರದ ಹೊರಗಿನಿಂದಲೂ ತಮ್ಮ ಬೆಂಬಲಿಗರನ್ನು ಸಜ್ಜುಗೊಳಿಸುತ್ತವೆ. ಚುನಾವಣಾ ಪ್ರಚಾರದ ಅವಧಿ ಮುಗಿದ ನಂತರ, ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ಪ್ರಚಾರ ನಡೆಸುವಂತಿಲ್ಲ. ಮತ್ತು ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಇದ್ದ ರಾಜಕೀಯ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು, ಕ್ಷೇತ್ರದ ಹೊರಗಿನಿಂದ ಕರೆತಂದಿರುವ ಕಾರ್ಯಕರ್ತರು, ಮೆರವಣಿಗೆಯ ಪದಾಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರ ಆಗಿರದಿದ್ದಲ್ಲಿ ಅವರೆಲ್ಲರೂ ಜಿಲ್ಲೆಯಿಂದ ಹೊರಹೋಗಬೇಕು.

ಚುನಾವಣಾ ಪ್ರಚಾರದ ನಂತರ ಅವರ ನಿರಂತರ ಉಪಸ್ಥಿತಿಯು ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನದ ವಾತಾವರಣವು ಹಾಳುಗೆಡಬಹುದಾದ್ದರಿಂದ ಕ್ಷೇತ್ರದಲ್ಲಿ ಉಳಿಯುವುದನ್ನು ಆಯೋಗದ ನಿಯಮಗಳ ಪ್ರಕಾರ ನಿರ್ಬಂಧಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಪ್ರಜಾ ಪ್ರತಿನಿಧಿ ಕಾಯ್ದೆಯ ಪರಿಚ್ಛೇದ 126(1)(ಬಿ) ಪ್ರಕಾರ ಮತದಾನ ಪೂರ್ಣಗೊಳ್ಳುವ 48 ಗಂಟೆ ಪೂರ್ವದಲ್ಲಿ ಯಾವುದೇ ವ್ಯಕ್ತಿ ಯಾವುದೇ ಮತದಾನದ ಪ್ರದೇಶದಲ್ಲಿ ಸಿನಿಮಾಟೋಗ್ರಾಫ್, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸಲು ಅವಕಾಶವಿಲ್ಲ. ಇದನ್ನು ಚುನಾವಣಾ ಆಯೋಗ ನಿರ್ಬಂಧಿಸಿದ್ದು, ಉಲ್ಲಂಘಿಸಿದಲ್ಲಿ ನಿಯಮಾವಳಿ ಪ್ರಕಾರ ಕ್ರಮ ಜರುಗಿಸುವದಾಗಿ ಅವರು ತಿಳಿಸಿದರು.

ಮುದ್ರಣ ಮಾಧ್ಯಮಕ್ಕಾಗಿ ರಾಜಕೀಯ ಜಾಹೀರಾತಿನ ಪೂರ್ವ-ಪ್ರಮಾಣೀಕರಣ: ರಾಜ್ಯ ಅಥವಾ ಜಿಲ್ಲಾ ಎಂಸಿಎಂಸಿಯ ಪೂರ್ವ-ಪ್ರಮಾಣೀಕರಣವಿಲ್ಲದೆ ಯಾವುದೇ ರಾಜಕೀಯ ಜಾಹೀರಾತುಗಳನ್ನು ಎಲ್ಲಾ ಹಂತದಲ್ಲಿ ಹಾಗೂ ಮತದಾನದ ದಿನ ಮತ್ತು ಚುನಾವಣಾ ಪೂರ್ವ ದಿನದಂದು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಅವಕಾಶವಿಲ್ಲ.

ಚುನಾವಣೆಯ ಕೊನೆಯ ಹಂತದಲ್ಲಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ಮುದ್ರಣ ಮಾಧ್ಯಮದ ಮೂಲಕ ಯಾವುದೇ ಅಪರಾಧ ಅಥವಾ ತಪ್ಪುದಾರಿಗೆಳೆಯುವ ರಾಜಕೀಯ ಜಾಹೀರಾತುಗಳನ್ನು ತಪ್ಪಿಸಲು ಈ ನಿಯಮ ಮಾಡಲಾಗಿದೆ. ಪ್ರತಿ ಸಾಮಾನ್ಯ ಲೋಕಸಭೆ ಚುನಾವಣೆಗೂ ಮುನ್ನ ಆಯೋಗವು ಈ ನಿಟ್ಟಿನಲ್ಲಿ ಸೂಚನೆಯನ್ನು ನೀಡುತ್ತದೆ ಎಂದು ಅವರು ತಿಳಿಸಿದರು.

ಕ್ರಿಮಿನಲ್ ಪೂರ್ವವರ್ತನೆಯ ಪ್ರಕಟಣೆ: ಪತ್ರಿಕೆ ಮತ್ತು ಟಿವಿಯಲ್ಲಿ ಅಭ್ಯರ್ಥಿಯು ಅಪರಾಧಿಕ ಪ್ರಕರಣಗಳನ್ನು ಹೊಂದಿದ್ದಲ್ಲಿ ಸಿ-1 ಸ್ವರೂಪದಲ್ಲಿ ಮತ್ತು ರಾಜಕೀಯ ಪಕ್ಷಗಳು ಸಿ-2 ಸ್ವರೂಪದಲ್ಲಿ ಕ್ರಿಮಿನಲ್ ಪೂರ್ವವರ್ತನೆಯ ಪ್ರಕಟಣೆಯನ್ನು ಮತದಾನದಿನದ ಎರಡು ದಿನಗಳ ಮೊದಲು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಅವರು ತಿಳಿಸಿದರು.

ಮತದಾನದ ದಿನದಂದು, ಮತಗಟ್ಟೆಗಳ ಒಳಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಬಾರದು. ಮತಗಟ್ಟೆಗಳ ಒಳಗೆ ಧೂಮಪಾನ ಮಾಡಲು ಯಾರಿಗೂ ಅವಕಾಶ ನೀಡಬಾರದು. ಮತ್ತು ಮತಗಟ್ಟೆಯೊಳಗೆ ಮೊಬೈಲ್ ಫೋನ್ ಅನುಮತಿಸಲಾಗುವುದಿಲ್ಲ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಇಲೆಕ್ಷನ್ ಬೂತ್ ಸ್ಥಾಪನೆಗೆ ನಿಬಂಧನೆಗಳು: ಅಭ್ಯರ್ಥಿಗಳು ಮತಗಟ್ಟೆಯ 200ಮೀ ಪ್ರದೇಶ ವ್ಯಾಪ್ತಿಯ ಹೊರಗಡೆ ನಿಯಮಾನುಸಾರ ಅನುಮತಿ ಪಡೆದು, ತಮ್ಮ ಎಲೆಕ್ಷನ್ ಬೂತ್‍ಗಳನ್ನು ಸ್ಥಾಪಿಸಬಹುದು.

ಇಲೆಕ್ಷನ್ ಬೂತ್ ಗಳನ್ನು ಸ್ಥಾಪಿಸಲು ಇಚ್ಚಿಸಿದಲ್ಲಿ ಸ್ಥಳೀಯ ಸಂಸ್ಥೆಗಳ ನಿರಾಕ್ಷೇಪಣಾ ಪತ್ರಪಡೆದು ಸಂಬಂಧಿಸಿದ ಸಹಾಯಕ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಮತದಾನ ಕೇಂದ್ರದ ಆವರಣದ 200 ಮೀಟರ್ ಪರಿಧಿಯ ಹೊರೆ ಸ್ಥಾಪಿಸಲು ಇಚ್ಚಿಸುವ ಪ್ರತಿಯೊಂದು ಬೂತ್‍ಗಳಲ್ಲಿ ಒಂದು ಮೇಜು ಮತ್ತು ಎರಡು ಕುರ್ಚಿಗಳನ್ನು ಮಾತ್ರ ಒದಗಿಸಬೇಕು ಮತ್ತು 10 X 10 ಅಡಿಗಳಿಗಿಂತ ಹೆಚ್ಚು ಅಳತೆಯಿಲ್ಲದ ಛತ್ರಿ ಅಥವಾ ಸಣ್ಣ ಟೆಂಟ್ ಅನ್ನು ಒದಗಿಸಬೇಕು. ಪಕ್ಷದ ಚಿಹ್ನೆಗಳು, ಛಾಯಾಚಿತ್ರಗಳೊಂದಿಗೆ ಇಂದು ಬ್ಯಾನರ್ ಅನ್ನು ಅಳವಡಿಸಲು ಅನುಮತಿಸಲಾಗಿದೆ. ಅಲ್ಲಿ ಬಳಸುವ ಬ್ಯಾನರ್ ಗಾತ್ರವು 4 X 8 ಅಡಿ ಅಳತೆ ಮೀರಬಾರದು ಎಂದು ಅವರು ತಿಳಿಸಿದರು. ಅಭ್ಯರ್ಥಿಗಳು ಅಭ್ಯರ್ಥಿಯ ಭಾವಚಿತ್ರ ಹಾಗೂ ಚಿಹ್ನೆಯನ್ನು ಒಳಗೊಂಡಿರುವ ವೊಟರ್ ಸ್ಲಿಪ್‍ಗಳನ್ನು ಬಳಸುವದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಮತಗಟ್ಟೆಯಲ್ಲಿ ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ ಪ್ರಚಾರ ನಿಷೇಧ: ಯಾವುದೇ ವ್ಯಕ್ತಿ, ಯಾವುದೇ ಮತಗಟ್ಟೆಯಲ್ಲಿ ಮತದಾನ ದಿನದಂದು ಮತದಾನ ಕೇಂದ್ರದ ಒಳಗೆ ಅಥವಾ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತಗಳ ಪ್ರಚಾರ ಅಥವಾ ಯಾವುದೇ ಮತದಾರರ ಮತವನ್ನು ಕೇಳುವುದು ಅಥವಾ ಯಾವುದೇ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕದಂತೆ ಯಾವುದೇ ಮತದಾರರ ಮನವೊಲಿಸುವುದು ಅಥವಾ ಚುನಾವಣೆಯಲ್ಲಿ ಮತ ಚಲಾಯಿಸದಂತೆ ಯಾವುದೇ ಮತದಾರರ ಮನವೊಲಿಸುವುದು ಅಥವಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸೂಚನೆ ಅಥವಾ ಚಿಹ್ನೆಯನ್ನು ಪ್ರದರ್ಶಿಸುವುದು ನಿಬರ್ಂಧಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಮತದಾನದ ದಿನದಂದು ಅಭ್ಯರ್ಥಿಗಳು ಬಳಸುವ ವಾಹನಗಳ ಕುರಿತು ಮಾರ್ಗಸೂಚಿಗಳು: ಚುನಾವಣಾ ಉದ್ದೇಶಕ್ಕಾಗಿ ವಾಹನಗಳ ಬಳಕೆಯನ್ನು ಮತದಾನ ದಿನದಂದು ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಲು ಅಭ್ಯರ್ಥಿ ಮತ್ತು ಅವರ ಏಜಂಟ್‍ಗೆ ತಲಾ ಒಂದು ವಾಹನ ಮತ್ತು ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ ಒಂದು ವಾಹನ ಅಂದರೆ ಒಬ್ಬ ಅಭ್ಯರ್ಥಿಯ ಪರವಾಗಿ ಒಟ್ಟು 10 ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಸಮಯಕ್ಕಿಂತ 48 ಗಂಟೆಗಳ ಅವಧಿಯಲ್ಲಿ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳು, ಮೆರವಣಿಗೆಗಳು ಇತ್ಯಾದಿಗಳನ್ನು ನಡೆಸಬಾರದು. ಅಲ್ಲದೆ, ಆರ್.ಪಿ ಆಕ್ಟ್ 1951 ರ ಸೆಕ್ಷನ್ 126 ರಲ್ಲಿ ಉಲ್ಲೇಖಿಸಲಾದ ಕಳೆದ 48 ಗಂಟೆಗಳ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಚುನಾವಣಾ ವಿಷಯವನ್ನು ಪ್ರಕಟಿಸಬಾರದು.

ಆಯೋಗವು ನೇಮಿಸಿದ ಸಮಿತಿಯಿಂದ ಪೂರ್ವ-ಪ್ರಮಾಣೀಕರಣವಿಲ್ಲದೆ ಟಿವಿ ಚಾನೆಲ್, ಕೇಬಲ್ ಟಿವಿ ಅಥವಾ ರೇಡಿಯೊದಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸಬಾರದು. ಮುದ್ರಣ ಮಾಧ್ಯಮದಲ್ಲಿ ಅಂತಹ ಜಾಹೀರಾತುಗಳು ಸಮಿತಿಯ ಪ್ರಮಾಣೀಕರಣವನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣಾ ಸಾಮಾನ್ಯ ವೀಕ್ಷಕ ಅಜಯ ಗುಪ್ತಾ,ಪೊಲೀಸ ವೀಕ್ಷಕ ಬನ್ವರಲಾಲ ಮೀನಾ, ವೇಚ್ಚ ವೀಕ್ಷಕರಾದ ಭೂಷನ ಪಾಟೀಲ ಹಾಗೂ ಕೆ.ಪಿ ಜಯ್ಕರ, ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸೇರಿದಂತೆ ವಿವಿಧ ಚುನಾವಣಾ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಪಕ್ಷೇತರ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಏಜೆಂಟರು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು