ಬೆಂಗಳೂರು: ಇದೇ 19ರಿಂದ ಸೆಪ್ಟೆಂಬರ್ 3ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ 18,414 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಪೂರಕ ಪರೀಕ್ಷೆಯ ಸಿದ್ಧತೆ ಕುರಿತು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಸರಾಸರಿ ಆಧಾರದಲ್ಲಿ ಪ್ರಕಟಿಸಿರುವ ಫಲಿತಾಂಶವನ್ನು ತಿರಸ್ಕರಿಸಿರುವ 900 ವಿದ್ಯಾರ್ಥಿಗಳು ಮತ್ತು 17,514 ಪುನರಾವರ್ತಿತ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಯಲಿದೆ ಎಂದರು.
5,546 ಕಾಲೇಜುಗಳ ವಿದ್ಯಾರ್ಥಿ ಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಎದುರಿಸಲಿದ್ದಾರೆ. 187 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಇದೇ 17ಕ್ಕೂ ಮೊದಲು ಸಿದ್ಧತೆಗಳನ್ನೂ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.