ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರು ಲಂಚ ನೀಡಿ ವಿಶೇಷ ಸವಲತ್ತು ಪಡೆಯುತ್ತಿದ್ದರು ಎಂಬ ಆರೋಪ ಪ್ರಕರಣದ ತನಿಖೆಯ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸುವಂತೆ ಎಸಿಬಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಪ್ರಕರಣದಲ್ಲಿ ಎಸಿಬಿ ಯಾವುದೇ ತನಿಖೆ ನಡೆಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನ ಸೆಳೆದ ಬಳಿಕ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.
ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಬೇಕು ಎಂದು ತಿಳಿಸಿದ ಪೀಠ, ಈ ಸಂಬಂಧ ಚೆನ್ನೈನ ಕೆ.ಎಸ್.ಗೀತಾ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿತು. ವಿಚಾರಣೆಯನ್ನು ಆ.25ಕ್ಕೆ ಮುಂದೂಡಿತು.