ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡದ ಘಟ್ಟದಲ್ಲಿ ಬುಧವಾರ ರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದು ಮೂವರು ಗಂಭೀರ ಗಾಯಗೊಂಡಿದ್ದಾರೆ.
ಅಂಕೋಲಾ ಕಡೆಯಿಂದ ಕಾರವಾರದತ್ತ ಹೊರಟ ಕಾರಿಗೆ ಎದುರಿನಿಂದ ಓವರ್ ಟೇಕ್ ಮಾಡಿಕೊಂಡು ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಟ್ಯಾಂಕರ್ ಚಾಲಕನ ನಿರ್ಲಕ್ಷ್ಯ ದ ಚಾಲನೆಯಿಂದ ಡಿಕ್ಕಿ ಸಂಭವಿಸಿದ್ದು ಕಾರನ್ನು ಸುಮಾರು 100 ಮೀ. ದೂರದ ವರೆಗೂ ನೂಕಿಕೊಂಡು ಹೋಗಿದೆ. ಕಾರು ಓರಿಸ್ಸಾ ನೋಂದಣಿ ಹೊಂದಿದ್ದು ಕಾರಿನಲ್ಲಿ ಇದ್ದವರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಮೃತಪಟ್ಟವರ ಹಾಗೂ ಗಾಯಗೊಂಡವರ ಗುರುತು ಪತ್ತೆಯಾಗಿಲ್ಲ. ಗಾಯಗೊಂಡವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.