News Karnataka Kannada
Sunday, April 28 2024
ಕರ್ನಾಟಕ

ಅರೇಬಿಕಾ ಕಾಫಿಗೆ ಬಂಪರ್‌ ಬೆಲೆ ಖಚಿತ ; ಆದರೆ ಹೆಚ್ಚು ತೋಟ ಮಾಡಲು ಹೋಗಬೇಡಿ ಎಂದ ಐಸಿಓ

Coffee
Photo Credit :

ಮಡಿಕೇರಿ   ಅರೇಬಿಕಾ ತಳಿಯ ಕಾಫಿಗೆ ಸರ್ವಕಾಲಿಕ ಬೆಲೆ ಬಂದಿರುವಂತೆಯೇ ಈ ದರ ಇನ್ನು ಮುಂದಿನ ಎರಡರಿಂದ ಮೂರು ವರ್ಷ ಮುಂದುವರಿಯಲಿದೆ ಎಂದು ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ (ICO) ತಿಳಿಸಿದೆ. ವಿಶ್ವದ ಅತ್ಯಂತ ದೊಡ್ಡ ಅರೇಬಿಕಾ ಕಾಪಿ ಬೆಳೆಯುವ ದೇಶವಾದ ಬ್ರೆಜಿಲ್‌ ನಲ್ಲಿ ಹಿಂದೆಂದೂ ಕಂಡು ಬಾರದ ಹಿಮ ಪಾತ ಆಗಿದ್ದು ಈಗಾಗಲೇ ಶೇಕಡಾ 12 ರಷ್ಟು ತೋಟ ನಾಶವಾಗಿದೆ.
ಮೂಲಗಳ ಪ್ರಕಾರ ಎರಡು ಲಕ್ಷ ಹೆಕ್ಟೇರ್‌ ಗಳಷ್ಟು ತೋಟ ನಾಶವಾಗಿದ್ದು ಮೊದಲಿನಂತೆ ಬೆಳೆ ಬರಬೇಕಾದರೆ ಕನಿಷ್ಟ ಮೂರು ವರ್ಷ ಸಮಯ ತಗುಲಲಿದೆ. ಕಾಫಿಯ ಜಾಗತಿಕ ದೃಷ್ಟಿ ಕೋನದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಐಸಿಓ ಕಾರ್ಯನಿರ್ವಾಹಕ ನಿರ್ದೇಶಕ ಜೋಸ್‌ ಸೆಟ್ಟೆ ಅವರು ಅತ್ತೀಚಿನ ಅರೇಬಿಕಾ ಕಾಫಿ ದರಕ್ಕೆ ಹೋಲಿಸಿದರೆ ಮುಂದಿನ ದರಗಳು ಮುಗಿಲು ಮುಟ್ಟಿ ಹೊಸ ದಾಖಲೆ ಸೃಷ್ಟಿಸಲಿವೆ. ಆದರೆ ಬೆಳೆಗಾರರು ದರ ಏರಿಕೆಯ ಆಮಿಷಕ್ಕೀಡಾಗದೆ ಯಾವುದೇ ಕಾರಣಕ್ಕೂ ಕಾಫಿ ಬೆಳೆಯುವ ಪ್ರದೇಶವನ್ನು ವಿಸ್ತರಿಸಬಾರದೆಂದು ಅವರು ಎಚ್ಚರಿಕೆ ನೀಡಿದರು. ಈಗ ಇರುವ ತೋಟಗಳಲ್ಲೇ ಗರಿಷ್ಟ ಬೆಳೆ ಬೆಳೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದ ಅವರು ಗುಣಮಟ್ಟದ ಕಾಫಿ ಉತ್ಪಾದನೆಗೆ ಆದ್ಯತೆ ಕೊಡಿ ಎಂದರು.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬ್ರೆಜಿಲಿಯನ್ ಸ್ಪೆಷಾಲಿಟಿ ಕಾಫಿ ಅಸೋಸಿಯೇಶನ್‌ನ ವನುಸಿಯಾ ನೊಗುಯೆರಾ ಅವರು ಬ್ರೆಜಿಲ್‌ ನಲ್ಲಿ 2020 ರಲ್ಲಿ ಬರಗಾಲ ಮತ್ತು 2021 ರ ಮಧ್ಯ ಭಾಗದಲ್ಲಿ ತೀವ್ರ ಹಿಮಪಾತದಿಂದಾಗಿ ಕಾಫಿ ಬೆಳೆ ನಷ್ಟವಾಗಿದೆ ಎಂದರು. ಇಡೀ ಜಗತ್ತನ್ನೇ ಭಾದಿಸುತ್ತಿರುವ ಕೋವಿಡ್‌ ಸಾಂಕ್ರಮಿಕವೂ ಕಾಫಿ ಉದ್ಯಮದ ಮೇಲೆ ಪ್ರಭಾವ ಬೀರಿದ್ದು ಸರಬರಾಜು ಮತ್ತು ಬಳಕೆದಾರರ ಮೇಲೂ ಪರಿಣಾಮ ಬೀರಿದೆ ಎಂದರು. ಕಾಫಿಯ ಉತ್ಪಾದಕರು ಮತ್ತು ರಫ್ತುದಾರರು ಕಂಟೈನರ್‌ ಗಳ ಕೊರತೆಯನ್ನು ಎದುರಿಸುತಿದ್ದು ಇದು ಕಾಫಿ ಸರಬರಾಜು ಸರಪಳಿಯ ಮೇಲೆ ಪ್ರಭಾವ ಬೀರಿದೆ ಎಂದರು.
ಜಾಗತಿಕವಾಗಿ ಕಾಫಿಯ ಬಳಕೆಯು ಈಗ ವಾರ್ಷಿಕವಾಗಿ ಶೇಕಡಾ 2 ರಿಂದ 2.25 ರಷ್ಟು ಏರಿಕೆ ದಾಖಲಿಸುತಿದ್ದು ಆನ್‌ ಲೈನ್‌ ಮಾರಾಟದಲ್ಲಿ ಹೆಚ್ಚಳ ದಾಖಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಬಳಕೆದಾರರು ಕಡಿಮೆ ದರ್ಜೆಯ ಕಾಫಿ ಖರೀದಿಗೆ ಹೆಚ್ಚಿನ ಒಲವು ತೋರುತಿದ್ದಾರೆ.
ಅಂತರ್ರಾಷ್ಟ್ರೀಯ ಕಾಫಿ ಸಂಸ್ಥೆಯು 2021-22 ನೇ ಸಾಲಿಗೆ ಜಾಗತಿಕ ಕಾಫಿ ಉತ್ಪಾದನೆಯ ಅಂದಾಜನ್ನು ಒಟ್ಟು 169.6 ಮಿಲಿಯನ್‌ ಚೀಲಗಳೆಂದು ( 60 ಕೆಜಿ ಚೀಲ) ಅಂದಾಜಿಸಿದ್ದು ಬ್ರೆಜಿಲ್‌ ನ ಹಿಮಪಾತದ ಕಾರಣದಿಂದ ಇದರಲ್ಲಿ ಶೇಕಡಾ 2 ರಷ್ಟು ಕುಸಿತ ಆಗಲಿದೆ ಎಂದು ಅಂದಾಜನ್ನು ಪರಿಷ್ಕರಿಸಿದೆ. 2010-21 ನೇ ಸಾಲಿನಲ್ಲಿ ವಿಶ್ವದ ಕಾಫಿ ಬಳಕೆ 164.2 ಮಿಲಿಯನ್‌ ಚೀಲಗಳೆಂದು ಅಂದಾಜಿಸಲಾಗಿತ್ತಾದರೂ ಅದು ಶೇಕಡಾ 1.3 ರಷ್ಟು ಏರಿಕೆ ದಾಖಲಿಸಿದೆ. 2019-20 ರಲ್ಲಿ ಅಂತರ್ರಾಷ್ಟ್ರೀಯ ಒಟ್ಟು ಬಳಕೆ 164.2 ಮಿಲಿಯನ್‌ ಚೀಲಗಳಷ್ಟು ದಾಖಲಾಗಿತ್ತು.
ಈ ಎಲ್ಲಾ ಅಂದಾಜಿನ ಪ್ರಕಾರ ಅರೇಬಿಕಾ ಬೆಳೆಗಾರರಿಗೆ ಮುಂದಿನ ಮೂರು ವರ್ಷಗಳ ಕಾಲ ಬಂಪರ್‌ ದರ ಸಿಗುವುದಾದರೂ ಈ ದರ ಮುಂದುವರಿಯುವುದಿಲ್ಲ ಎಂಬುದು ಕಟು ವಾಸ್ತವವಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು