Bengaluru 22°C
Ad

ಪಶ್ಚಿಮ ಬಂಗಾಳದಲ್ಲಿ ರೈಲು ಅಪಘಾತ : ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತ ದುಃಖಕರವಾಗಿದೆ. ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಘಟನೆಯ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಸಂತ್ರಸ್ತರ ನೆರವಿಗಾಗಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅಪಘಾತ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿಸಿದರು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50,000 ರೂ. ನೆರವು ನೀಡುವುದಾಗಿ ಪ್ರಧಾನಿ ಕಾರ್ಯಾಲಯ ಘೋಷಿಸಿದೆ. ಇನ್ನು ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗೂಡ್ಸ್ ರೈಲೊಂದು ಹಿಂಬದಿಯಿಂದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 8ಕ್ಕೆ ಏರಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿದ ಪರಿಣಾಮ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಮತ್ತು ಅಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ವರದಿಗಳು ತಿಳಿಸಿವೆ. ಜನರು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad