Bengaluru 26°C
Ad

ಇಂದು ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಚುನಾವಣೆ

ನೂತನ ಸಂಸತ್ ಭವನದಲ್ಲಿ ಸೋಮವಾರದಿಂದ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಲೋಕಸಭೆಯ ಸ್ಪೀಕರ್ ಚುನಾವಣೆ ನಡೆಯಲಿದೆ.

ನವದೆಹಲಿ: ನೂತನ ಸಂಸತ್ ಭವನದಲ್ಲಿ ಸೋಮವಾರದಿಂದ ಹೊಸದಾಗಿ ಆಯ್ಕೆಯಾದ ಸಂಸದರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ಲೋಕಸಭೆಯ ಸ್ಪೀಕರ್ ಚುನಾವಣೆ ನಡೆಯಲಿದೆ. ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಮಂಗಳವಾರ ಲೋಕಸಭೆ ಸ್ಪೀಕರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಓಂ ಬಿರ್ಲಾ ಮತ್ತು ಕೆ. ಸುರೇಶ್ ನಡುವೆ ಇಂದು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ. ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ. ಡೆಪ್ಯೂಟಿ ಸ್ಪೀಕರ್ ಅವರು ಇಂಡಿಯಾ ಬ್ಲಾಕ್‌ನ ಸದಸ್ಯರಾಗಿರಬೇಕು ಎಂಬ ಷರತ್ತಿನ ಅಡಿಯಲ್ಲಿ ಸರ್ಕಾರಿ ಬೆಂಬಲಿತ ಅಭ್ಯರ್ಥಿ ಓಂ ಬಿರ್ಲಾ ಅವರನ್ನು ಬೆಂಬಲಿಸಲು ಪ್ರತಿಪಕ್ಷಗಳು ಒಪ್ಪಿಕೊಂಡಿತ್ತು.

ಮಂಗಳವಾರ ಬೆಳಗ್ಗೆ ಅಧಿವೇಶನಕ್ಕೂ ಮುನ್ನ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರು ಪ್ರತಿಪಕ್ಷಗಳ ಬಳಿ ಸ್ಪೀಕರ್ ಆಯ್ಕೆಗೆ ಬೆಂಬಲ ನೀಡಲು ಪ್ರಸ್ತಾಪಿಸಿದ್ದರು.  ಓಂ ಬಿರ್ಲಾ ನಾಮಪತ್ರ ಸಲ್ಲಿಕೆಗೆ ಕೆಲವೇ ನಿಮಿಷಗಳ ಮೊದಲು, ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ಡಿಎಂಕೆಯ ಟಿ.ಆರ್ ಬಾಲು ಅವರು ರಾಜನಾಥ್ ಸಿಂಗ್ ಅವರ ಕಚೇರಿಯಿಂದ ಹೊರನಡೆದರು. ಹಾಗೇ, ಎನ್‌ಡಿಎ ಅಭ್ಯರ್ಥಿಯನ್ನು ಸ್ಪೀಕರ್ ಸ್ಥಾನಕ್ಕೆ ಅನುಮೋದಿಸಲು ನಿರಾಕರಿಸಿದರು.

ನಂತರ ಮಾತನಾಡಿದ ಕೆ.ಸಿ.ವೇಣುಗೋಪಾಲ್, ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಲ್ಲಿ ಸರ್ಕಾರ ಬದ್ಧವಾಗಿಲ್ಲ. ಹೀಗಾಗಿ, ಸ್ಪೀಕರ್ ಅಭ್ಯರ್ಥಿಯನ್ನು ನಾವು ಬೆಂಬಲಿಸುವುದಿಲ್ಲ ಎಂದಿದ್ದರು.

ಕೆ ಸುರೇಶ್ ಅವರು ಸಂಸತ್ತಿನ ಅತ್ಯಂತ ಹಿರಿಯ ಸದಸ್ಯರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅವರು 8ನೇ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ಕೆ. ಸುರೇಶ್ ಅವರು ಕೇರಳದ ದಲಿತ ನಾಯಕ. ಅವರು ಉಪಸಭಾಪತಿಯಾಗಬೇಕೆಂದು ಪ್ರತಿಪಕ್ಷಗಳು ಬಯಸಿದ್ದವು. ಆದರೆ, ಆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಇಂದು ಈ ಚುನಾವಣೆ ನಡೆಯಲಿದೆ.

Ad
Ad
Nk Channel Final 21 09 2023
Ad