ಗಾಂಧಿನಗರ: ಗೇಮಿಂಗ್ ಜೋನ್ ಒಂದರಲ್ಲಿ ಇಂದು ಸಂಜೆ ಭೀಕರ ಅಗ್ನಿ ದುರಂತ ಸಂಭವಿಸಿದ ಘಟನೆ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ನಡೆದಿದೆ. ಮಹಿಳೆಯರು, ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಏಕಾಏಕಿ ಹೊತ್ತಿಕೊಂಡ ಬೆಂಕಿಯು ಇಡೀ ಕಟ್ಟಡದ ತುಂಬ ಆವರಿಸಿಕೊಂಡಿದ್ದು, ಇನ್ನೂ ಹಲವರು ಅಗ್ನಿಯ ಕೆನ್ನಾಲಗೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿ ನಂದಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.
ಗೇಮಿಂಗ್ ಜೋನ್ ಕಟ್ಟಡದಲ್ಲಿ ನೂರಾರು ಮಕ್ಕಳು ಹಾಗೂ ಅವರ ತಾಯಂದಿರು ಇದ್ದರು. ವೀಕೆಂಡ್ ಇರುವ ಕಾರಣ ಮಕ್ಕಳು ಆಟವಾಡಲಿ ಎಂಬುದಾಗಿ ಟಿಆರ್‌ಪಿ ಗೇಮಿಂಗ್ ಜೋನ್‌ಗೆ ಕರೆದುಕೊಂಡು ಹೋಗಿದ್ದರು. ಇದೇ ವೇಳೆ ಏಕಾಏಕಿ ಅಗ್ನಿದುರಂತ ಸಂಭವಿಸಿದ ಕಾರಣ ಏಳು ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಕೂಡ ಸೇರಿದ್ದಾರೆ. ಘಟನೆ ಸಂಭವಿಸುತ್ತಲೇ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದುವರೆಗೆ 15-20 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗೇಮಿಂಗ್ ಜೋನ್‌ನಲ್ಲಿ ಅಗ್ನಿ ದುರಂತ ಸಂಭವಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಅಗ್ನಿಯನ್ನು ನಂದಿಸಲು ಸಿಬ್ಬಂದಿಯು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದಾಗ್ಯೂ, ಬೆಂಕಿಯಲ್ಲಿ ಎಷ್ಟು ಜನ ಸಿಲುಕಿದ್ದಾರೆ? ಇನ್ನೂ ಎಷ್ಟು ಜನ ಕಾಣೆಯಾಗಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ದೊರೆತಿಲ್ಲ.
ಗಾಳಿಯ ತೀವ್ರತೆ ಹಾಗೂ ಬೆಂಕಿಯ ಹಿನ್ನೆಲೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಕಾರಣ ರಕ್ಷಣಾ ಕಾರ್ಯಾಚರಣೆಯು ಕ್ಷಿಪ್ರವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅಗ್ನಿಶಾಮಕ ದಳದ ಅಧಿಕಾರಿ ಐ.ವಿ.ಖೇರ್ ಅವರು ಮಾಹಿತಿ ನೀಡಿದ್ದಾರೆ.