Bengaluru 22°C
Ad

ಇವಿಎಂ ಧ್ವಂಸ ಆರೋಪ : ಬಿಜೆಪಿ ಅಭ್ಯರ್ಥಿ ಪೊಲೀಸರ ವಶಕ್ಕೆ

ಇವಿಎಂ ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಖುರ್ದಾ ಜಿಲ್ಲೆಯಲ್ಲಿ ನಡೆದಿದೆ.

ಭುವನೇಶ್ವರ: ಇವಿಎಂ ಧ್ವಂಸಗೊಳಿಸಿದ ಆರೋಪದ ಮೇಲೆ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಖುರ್ದಾ ಜಿಲ್ಲೆಯಲ್ಲಿ ನಡೆದಿದೆ.

ಪ್ರಶಾಂತ್ ಜಗದೇವ್ ತಮ್ಮ ಪತ್ನಿಯೊಂದಿಗೆ ಮತ ಚಲಾಯಿಸಲು ಬೇಗನಿಯಾ ವಿಧಾನಸಭಾ ಕ್ಷೇತ್ರದ ಬೋಲಗಾಡ್ ಬ್ಲಾಕ್‍ನ ಕೌನ್ರಿಪಟ್ನಾದ ಬೂತ್‍ಗೆ ತೆರಳಿದ್ದರು. ಈ ವೇಳೆ ಇವಿಎಂ ತಾಂತ್ರಿಕ ದೋಷದಿಂದ ಕೆಲ ಸಮಯ ಅವರು ಕಾಯಬೇಕಾಗಿ ಬಂತು.

ಇದರಿಂದ ಕೋಪಗೊಂಡ ಅವರು, ಚುನಾವಣಾ ಸಿಬ್ಬಂದಿ ಮೇಲೆ ರೇಗಿದ್ದಾರೆ. ಬಳಿಕ ಇವಿಎಂ ಅನ್ನು ಎಳೆದಾಡಿದ್ದು, ಅದು ಕೆಳಗೆ ಬಿದ್ದು ಒಡೆದು ಹೋಗಿದೆ. ಈ ಸಂಬಂಧ ಚುನಾವಣಾ ಸಿಬ್ಬಂದಿ ದೂರು ನೀಡಿದ್ದು, ಪ್ರಜಾಪ್ರತಿನಿಧಿ ಕಾಯ್ದೆಯ ಜೊತೆಗೆ ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಖುರ್ದಾ ಜೈಲಿನಲ್ಲಿ ಇರಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಡಿಇಒ) ಪೊಲೀಸರು ಮನವಿ ಮಾಡಿದ್ದಾರೆ.

ಪ್ರಶಾಂತ್ ಜಗದೇವ್ ಬಂಧನದ ಬೆನ್ನಲ್ಲೇ ಅವರ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಖುರ್ದಾ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಪ್ರಶಾಂತ್ ಜಗದೇವ್ ಕಣಕ್ಕಿಳಿದಿದ್ದಾರೆ.

Ad
Ad
Nk Channel Final 21 09 2023
Ad