ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ.
ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಈಗಾಗಲೇ ಬುಕ್ ಆಗಿವೆ.
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಜುಲೈ 14 ರಂದು ರಿಲೀಸ್ ಆಗುತ್ತಿರುವ ಚಿತ್ರಕ್ಕಾಗಿ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.