ಮೈಸೂರು: ಈ ಶುಕ್ರವಾರ(ಏ.5) ಬಿಗ್ ಬಾಸ್ 10ನೇ ಸೀಸನ್ ನ ಸ್ಪರ್ಧಿ ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್ ಸಿನಿಮಾ ತೆರೆಗೆ ಬರುತ್ತಿದೆ. ಇದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಆಗಿದ್ದು, ಸಿನಿಮಾದತ್ತ ಹೆಚ್ಚಿನ ನಿರೀಕ್ಷೆ ಮಾಡಲಾಗಿದೆ.
ಸಿನಿಮಾ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ರಘುವರ್ಧನ್ ಅವರು ಆಸೆಯೇ ದುಃಖಕ್ಕೆ ಮೂಲ ಎಂಬ ಎಳೆಯ ಮೇಲೆ ಸಾಗುವ ಸಸ್ಪೆನ್ಸ್, ಥ್ರಿಲ್ಲರ್ ಮಾರಿಗೋಲ್ಡ್ ಚಿತ್ರವಾಗಿದೆ. ತುಂಬಾ ನಿರೀಕ್ಷೆಯನ್ನಿಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿದ್ದು, ಪ್ರೇಕ್ಷಕರ ಮನಸೆಳೆಯಲಿದ್ದು, ಏ.5ರಂದು ತೆರೆ ಕಾಣಲಿದೆ ಎಂದು ತಿಳಿಸಿದರು.
ಇಡೀ ಚಿತ್ರ ಗೋಲ್ಡ್ ಬಿಸ್ಕತ್ ಸುತ್ತಮುತ್ತ ಸಾಗುತ್ತದೆ. ಸಿನಿಮಾಗೆ ದಿಗಂತ್ ನಾಯಕರಾಗಿದ್ದಾರೆ, ಸಂಗೀತಾ ಶೃಂಗೇರಿ ನಾಯಕಿಯಾಗಿದ್ದಾರೆ. ಒಂದೇ ಒಂದು ಹಾಡು ಇದ್ದರೂ ಸಹ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ರೀಲ್ಸ್ ಆಗುತ್ತಿದೆ. ಟ್ರೈಲರ್ ಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೀಗಾಗಿ ಚಿತ್ರ ಯಶಸ್ವಿಯಾಗುವ ಭರವಸೆ ಇದೆ ಎಂದು ಇದೇ ಸಂದರ್ಭ ಹೇಳಿದರು.
ಒಟ್ಟಾರೆಯಾಗಿ ಪಾತ್ರಗಳ ಪೋಷಣೆ, ಇಡೀ ತಂಡ ಪ್ರೀತಿಯಿಂದ ಕೆಲಸ ಮಾಡಿರುವ ಕಾರಣ ಉತ್ತಮ ಚಿತ್ರವಾಗಿ ಮೂಡಿಬಂದಿದ್ದು, ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ನಟ ದಿಗಂತ್, ಸಂಗೀತಾ ಶೃಂಗೇರಿ ಮೊದಲಾದವರು ಇದ್ದರು.