News Karnataka Kannada
Saturday, May 04 2024
ವಿಶೇಷ

ಮಂಡ್ಯ: ಶಿವನಸಮುದ್ರದಲ್ಲಿ ಕಾವೇರಿಯ ರುದ್ರನರ್ತನಕ್ಕೆ ಪ್ರವಾಸಿಗರು ಫಿದಾ

Tourists flock to Lord Kaveri's rudra dance at Shivanasamudra
Photo Credit :

ಮಂಡ್ಯ: ಕೊಡಗು ಹಾಸನದಲ್ಲಿ ಎಡೆಬಿಡದೆ ಮಳೆಯಾಗುತ್ತಿರುವುದರಿಂದ ಕಾವೇರಿ ಮತ್ತು ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ಕೆ ಆರ್ ಎಸ್ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಸುಮಾರು ಐವತ್ತು ಸಾವಿರಕ್ಕೂ ಅಧಿಕ ಕ್ಯುಸೆಕ್  ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಇದರಿಂದ ಭೋರ್ಗರೆಯುತ್ತಾ ಹರಿಯುವ ಕಾವೇರಿ ನದಿ ಶಿವನಸಮುದ್ರದಲ್ಲಿ ಭರಚುಕ್ಕಿ ಮತ್ತು ಗಗನಚುಕ್ಕಿ ಎಂಬ ಎರಡು ಜಲಧಾರೆಗಳನ್ನು ಸೃಷ್ಟಿಸಿದ್ದು ಇಲ್ಲಿ ರುದ್ರ ನರ್ತನಗೈದು ಮುನ್ನಡೆಯುತ್ತಿದ್ದಾಳೆ. ಈ ರುದ್ರರಮಣೀಯ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ಶಿವನಸಮುದ್ರದತ್ತ ಮುಖ ಮಾಡುತ್ತಿದ್ದಾರೆ.

ಹಾಗೆನೋಡಿದರೆ ಕೆಆರ್ ಎಸ್ ಜಲಾಶಯದಿಂದ ನೀರು ಬಿಡಲಾಗುತ್ತದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಎಲ್ಲರ ಚಿತ್ತ ಶಿವನ ಸಮುದ್ರದತ್ತ ಹೋಗುತ್ತದೆ. ಏಕೆಂದರೆ ಅಲ್ಲಿ ಕಾವೇರಿ ಧುಮ್ಮಿಕ್ಕುವ ದೃಶ್ಯ ಮನಮೋಹಕ. ಹೀಗಾಗಿಯೇ ಪ್ರವಾಸಿಗರು ಅದರಲ್ಲೂ ನಿಸರ್ಗ ಪ್ರೇಮಿಗಳು ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡಲು ಹಾತೊರೆಯುತ್ತಾರೆ. ಏಕೆಂದರೆ ಕಾವೇರಿ ನದಿ ಶಿವನಸಮುದ್ರದ ಭರಚುಕ್ಕಿ ಮತ್ತು ಗಗನಚುಕ್ಕಿಯಲ್ಲಿ ಭೋರ್ಗರೆದು ಧುಮುಕುವಾಗ ಕಂಡು ಬರುವ ಆ ರುದ್ರರಮಣೀಯ ದೃಶ್ಯ ಮರೆಯಾಗದ ಅನುಭವವಾಗಿದೆ.

ಇದೀಗ ಏನಾದರೂ ಶಿವನಸಮುದ್ರದತ್ತ ಹೆಜ್ಜೆ ಹಾಕಿದರೆ  ಗಗನಚುಕ್ಕಿ, ಭರಚುಕ್ಕಿಗಳ ಭೋರ್ಗರೆತ. ಅದರಿಂದ ಹಾರಿ ಬರುವ ಮಂಜಿನ ಸಿಂಚನ. ತಣ್ಣನೆ ಬೀಸುವ ತಂಗಾಳಿ. ಕಣ್ಣು ಹಾಯಿಸಿದೆಡೆಯಲ್ಲೆಲ್ಲಾ ಹಸಿರು ಹಚ್ಚಡದ ನಿಸರ್ಗ. ನಮ್ಮನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಸಾಮಾನ್ಯವಾಗಿ ಕೆಆರ್ ಎಸ್‍ ಜಲಾಶಯದಿಂದ ಹೊರ ಬರುವ ಕಾವೇರಿ ರೌದ್ರತೆಯನ್ನು ತಾಳುವುದು ಮಾಮೂಲಿ ಅದರಲ್ಲೂ  ಬೆಟ್ಟಗುಡ್ಡ, ಕಾಡುಮೇಡುಗಳನ್ನೆಲ್ಲಾ ಕ್ರಮಿಸುತ್ತಾ ಶಿವನಸಮುದ್ರ ತಲುಪುತ್ತಿದ್ದಂತೆಯೇ ಆ ರೌದ್ರತೆ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ  ಕವಲಾಗಿ ಹರಿದು ಗಗನದೆತ್ತರದಿಂದ ಧುಮುಕಿ ಗಗನಚುಕ್ಕಿಯಾಗಿ, ಭರದಿಂದ ಹರಿದು ಭರಚುಕ್ಕಿಯಾಗಿಯೂ ಎಲ್ಲರ ಗಮನಸೆಳೆಯುತ್ತಾಳೆ.

ಮಾಮೂಲಿ ದಿನಗಳಲ್ಲಿ ನಿಸರ್ಗದ ನಡುವೆ ಹೆಬ್ಬಂಡೆಗಳ ಮೇಲೆ ಹಾಲ್ನೊರೆಯಾಗಿ ಧುಮುಕುತ್ತಾ ವೀಕ್ಷಕರ ಮನಕ್ಕೆ ಲಗ್ಗೆಯಿಡುವ ಈಕೆ ಇದೀಗ ರೌದ್ರತೆಯನ್ನು ಪ್ರದರ್ಶಿಸುತ್ತಾ ಸುಮಾರು ನಾನೂರ ಹತ್ತೊಂಬತ್ತು ಅಡಿ ಎತ್ತರದಿಂದ ಕಂದಕಕ್ಕೆ ಧುಮುಕುತ್ತಾಳೆ.  ಇನ್ನು ಶಿವನಸಮುದ್ರದಲ್ಲಿರುವ ಭರಚುಕ್ಕಿ ಮತ್ತು ಗಗನಚುಕ್ಕಿ ಇದೆರಡು ಜಲಧಾರೆಗಳು ಕೆಲವೇ ಕೆಲವು ಕಿಲೋಮೀಟರ್ ದೂರದ ಅಂತರದಲ್ಲಿದ್ದು, ಇವು ಬೇರೆ, ಬೇರೆ ಜಿಲ್ಲೆಗಳಿಗೆ ಸೇರಿವೆ. ಭರಚುಕ್ಕಿ ಚಾಮರಾಜನಗರಕ್ಕೆ ಸೇರಿದರೆ, ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಈ ಜಲಧಾರೆಗಳು ಈಗ ರುದ್ರರಮಣೀಯವಾಗಿ ಕಂಗೊಳಿಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ.

ಶಿವನಸಮುದ್ರಕ್ಕೆ ಬೆಂಗಳೂರಿನಿಂದ ಬರುವುದಾದರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಳವಳ್ಳಿ ಮೂಲಕ ಹಾಗೂ ಮೈಸೂರಿನಿಂದ ಬನ್ನೂರು, ಮಳವಳ್ಳಿ ಅಥವಾ ಚಾಮರಾಜನಗರ,  ಕೊಳ್ಳೆಗಾಲ ಮೂಲಕವೂ ಬರಬಹುದು. ಇಲ್ಲಿಗೆ ತೆರಳಲು ಹೆಚ್ಚಿನ ಬಸ್ ಸಂಪರ್ಕ ಇಲ್ಲದಿರುವುದರಿಂದ ಬಾಡಿಗೆ ಅಥವಾ ಸ್ವಂತ ವಾಹನಗಳಲ್ಲಿ ತೆರಳಬೇಕಾಗುತ್ತದೆ.  ಶಿವನಸಮುದ್ರಕ್ಕೆ ತೆರಳುವ ಪ್ರವಾಸಿಗರು ಇಲ್ಲಿರುವ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಧಾರೆಗಳನ್ನು ದೂರದಿಂದ ನೋಡಿ ಹಿಂತಿರುಗಿದರೆ ಕ್ಷೇಮ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು