News Karnataka Kannada
Sunday, May 05 2024
ವಿಶೇಷ

ಬೆಂಗಳೂರು ಕಟ್ಟಿದ ಕೆಂಪೇಗೌಡರ ನೆನಪಿಸುವ ಸುದಿನ

Untitled 1 Recovered
Photo Credit :

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು (ಜೂ.27)ರಂದು ಆಚರಿಸಲಾಗುತ್ತಿದೆ. ಇವತ್ತು ನಮ್ಮ ಮುಂದೆ ಬೆಳೆದು ನಿಂತಿರುವ ಬೃಹತ್ ಬೆಂಗಳೂರಿನ ಹಿಂದೆ ಅದನ್ನು ಕಟ್ಟಿದ ಕೆಂಪೇಗೌಡರನ್ನು ನಾವೆಲ್ಲರೂ ನೆನಪಿಸಿಕೊಳ್ಳುವ ಸುದಿನ ಎಂದರೆ ತಪ್ಪಾಗಲಾರದು.

ವಿಜಯನಗರ ಸಾಮ್ರಾಜ್ಯದ ಸಾಮಂತ ಅರಸರಲ್ಲೊಬ್ಬರಾದ ಕೆಂಪನಂಜೇಗೌಡ ಮತ್ತು ಲಿಂಗಮಾಂಬೆ ದಂಪತಿಯ ನಾಲ್ಕು ಮಂದಿ ಗಂಡು ಮಕ್ಕಳಲ್ಲಿ ಹಿರಿಯ ಪುತ್ರನೇ ನಾಡಪ್ರಭು ಕೆಂಪೇಗೌಡರು. ಯಲಹಂಕದಲ್ಲಿ ಅವರು 1510ರಲ್ಲಿ ಜನಿಸುತ್ತಾರೆ. 1528ರಲ್ಲಿ ತಾಯಿಯ ಸೋದರನ ಮಗಳು ಅಂದರೆ ಸೋದರ ಮಾವನ ಪುತ್ರಿ ಚೆನ್ನಮಾಂಬೆಯೊಡನೆ  ವಿವಾಹವಾಗಿ ಯುವರಾಜರಾಗಿ ಪಟ್ಟಾಭಿಷಕ್ತರಾಗುತ್ತಾರೆ. ಆ ನಂತರ 1531ರಲ್ಲಿ ಯಲಹಂಕ ಪ್ರಭುವಾಗಿ ಪಟ್ಟಾಭಿಷಕ್ತರಾಗಿ ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುತ್ತಾರೆ.

ಕೃಷ್ಣದೇವರಾಯರು 1529ರಲ್ಲಿ ನಿಧನರಾದಾಗ ಅವರ ಸಹೋದರ ಅಚ್ಚುತರಾಯ ಅಧಿಕಾರಕ್ಕೆ ಬರುತ್ತಾರೆ. ಕೆಂಪೇಗೌಡರ ಕನಸಿನ ಬೆಂಗಳೂರು ನಿರ್ಮಾಣಕ್ಕೆ 50 ಸಾವಿರ ಚಿನ್ನದ ವರಹಗಳನ್ನು ನೀಡುವುದರ ಜೊತೆಗೆ 30 ಸಾವಿರ ಪಗೋಡಗಳ ಉತ್ಪನ್ನ ಬರುವ ಹಳೆಬೆಂಗಳೂರು, ಬೇಗೂರು, ವರ್ತೂರು, ಹಲಸೂರು, ಜಿಗಣಿ, ತಲಘಟ್ಟಪುರ, ಕೆಂಗೇರಿ, ಕುಂಬಳಗೋಡು, ಹೆಸರಘಟ್ಟ, ಕಾವಳ್ಳಿ (ಈಗಿನ ಕನ್ನಲ್ಲಿ), ಚಿಕ್ಕಬಾಣವರ ಇತ್ಯಾದಿ 12 ಹೋಬಳಿಗಳನ್ನು ಕೆಂಪೇಗೌಡರಿಗೆ ದಾನವಾಗಿ ಬಿಟ್ಟುಕೊಡುತ್ತಾರೆ.

ಆ ನಂತರ ಕೆಂಪೇಗೌಡರು ಪುರೋಹಿತರ ಅಣತಿಯಂತೆ ದೊಮ್ಮಲೂರು ಮತ್ತು ಯಲಹಂಕದ ನಡುವಿನ ಕಾಡಿನ ಮಧ್ಯೆ ಆಯ್ದ ಒಂದು ಸ್ಥಳದಲ್ಲಿ ಭೂಮಿ ಪೂಜೆ ನಡೆಸುತ್ತಾರೆ. ನಾಲ್ವರು ರೈತರೊಳಗೊಂಡಂತೆ ನೇಗಿಲು ಹೊತ್ತ ನಾಲ್ಕು ಜೋಡಿ ಎತ್ತುಗಳು ನಾಲ್ಕು ದಿಕ್ಕುಗಳಲ್ಲೂ ಗೆರೆ ಎಳೆಯುತ್ತಾ ನಡೆಯುತ್ತವೆ. ಅವುಗಳ ನಡಿಗೆನಿಂತ ಸ್ಥಳಗಳೇ ನವ ಬೆಂಗಳೂರಿನ  ಗಡಿಗಳೆಂದು ನಿರ್ಧರಿಸಲಾಗುತ್ತದೆ. ಅದರಂತೆ ನೇಗಿಲಿನಿಂದ ಗೆರೆ ಎಳೆಯುತ್ತಾ ನಡೆದ ಎತ್ತುಗಳು ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಅರಳೇಪೇಟೆ, ಉತ್ತರಕ್ಕೆ ಯಲಹಂಕ, ದಕ್ಷಿಣಕ್ಕೆ ಆನೆಕಲ್ (ಸಿಟಿ ಮಾರುಕಟ್ಟೆ) ತನಕ ಬಂದು ನಿಲ್ಲುತ್ತವೆ. ಹೀಗೆ ಆ ಎತ್ತುಗಳು ಬಂದು ನಿಂತ ನೆಲವೇ ಕೆಂಪೇಗೌಡ ನಿರ್ಮಿಸಿದ ಬೆಂಗಳೂರಿಗೆ ಎಲ್ಲೆಯಾಯಿತು. ಅಲ್ಲೆಲ್ಲಾ ಗುರುತಿಗಾಗಿ ಕಲ್ಲುಗಳನ್ನು ನೆಟ್ಟು ಪೂರ್ವ – ಪಶ್ಚಿಮದ ಭಾಗವನ್ನು ಚಿಕ್ಕಪೇಟೆಯಾಗಿ, ಉತ್ತರ-ದಕ್ಷಿಣದ ಭಾಗವನ್ನು ದೊಡ್ಡಪೇಟೆಯಾಗಿ (ಈಗಿನ ಅವೆನ್ಯೂರಸ್ತೆ) ನಿರ್ಮಿಸಿರುವುದು ಇತಿಹಾಸವಾಗಿದೆ.

1537ರಲ್ಲಿ ಅಡಿಗಲ್ಲು ಹಾಕಿ ನಗರದ ನಾಲ್ಕು ದಿಕ್ಕುಗಳಿಗೂ ನಾಲ್ಕು ದ್ವಾರಗಳನ್ನು ನಿರ್ಮಿಸಿ ಅವುಗಳನ್ನು ಹಲಸೂರು ಹೆಬ್ಬಾಗಿಲು, ಕೆಂಗೇರಿ ಹೆಬ್ಬಾಗಿಲು, ಯಶವಂತಪುರ ಹೆಬ್ಬಾಗಿಲು, ಯಲಹಂಕ ಹೆಬ್ಬಾಗಿಲುಗಳೆಂದು ಹೆಸರಿಸಿದ್ದರು. ಮುಖ್ಯಧ್ವಾರದ ಬಾಗಿಲು ನಿಲ್ಲದೇ ಬೀಳುತ್ತಿರಲು ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ನಾಡಪ್ರಭು ಕೆಂಪೇಗೌಡರ ಸೊಸೆ  ನಾಡಿಗಾಗಿ ಬಲಿದಾನಗೈದ ಪರಿಣಾಮವಾಗಿ ಮುಖ್ಯಧ್ವಾರದ ಬಾಗಿಲು ಭದ್ರವಾಗಿ ನಿಲ್ಲುತ್ತದೆ.

1531ರಲ್ಲಿ ಪಟ್ಟಕ್ಕೇರಿ ಅಧಿ1569ರವರೆಗೆ ಸುಮಾರು 38 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು. ಮಾಗಡಿ ಬಳಿಯ ಕೆಂಪಾಪುರದಲ್ಲಿ 1569ರಲ್ಲಿ ಇಹಲೋಕ ತ್ಯಜಿಸಿಸುತ್ತಾರೆ. ಆದರೆ ಇವರ ಸಮಾಧಿ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಕೆಂಪೇಗೌಡರ ಸಮಾಧಿಗಾಗಿ ಹುಡುಕಾಟ ನಡೆದು 2015ರಲ್ಲಿ ಪ್ರಶಾಂತ್ ಎಂಬುವರು ಮಾಗಡಿ ಬಳಿಯ ತಿಪ್ಪಸಂದ್ರ ಹ್ಯಾಂಡ್‌ಪೊಸ್ಟ್ ಮತ್ತು ಕೆಂಚನಹಳ್ಳಿ ನಡುವೆ ಇರುವ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಸಮಾಧಿಯನ್ನು ಗುರುತಿಸಿರುವುದು ವಿಶೇಷವಾಗಿದೆ. ಇಲ್ಲಿಯೇ ಕೆಂಪೇಗೌಡರು ನಿರ್ಮಿಸಿದ ಕೆಂಪಸಾಗರ ಕೆರೆಯೂ ಮತ್ತೊಂದು ವಿಶೇಷತೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು