News Karnataka Kannada
Thursday, May 02 2024
ವಿಶೇಷ

ಬಂಡೀಪುರದಲ್ಲಿ ನಿಸರ್ಗ ವೈಭವದ ದೃಶ್ಯಕಾವ್ಯ

The scenery of nature's splendor in Bandipur
Photo Credit : By Author

ಚಾಮರಾಜನಗರ: ಆಗೊಮ್ಮೆ ಈಗೊಮ್ಮೆ ಸುರಿದ ಮಳೆಗೆ ಬಂಡೀಪುರ ಹಸಿರು ಹೊದ್ದು ಕುಳಿತಿದೆ. ಈ ಚೆಲುವಿಗೆ ಮನಸೋತ ಜನ ಇತ್ತ ಹೆಜ್ಜೆ ಹಾಕುತ್ತಾರೆ. ಬೇಸಿಗೆ ಕಳೆದು ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹಸಿರು ಹಚ್ಚಡದ ಬಂಡೀಪುರವನ್ನು ನೋಡುವುದೇ ಒಂದು ಸೊಗಸು. ಅದರಲ್ಲೂ ಅರಣ್ಯದೊಳಗೆ ಸವಾರಿ ಮಾಡುವುದು ಮರೆಯಲಾಗದ ಸುಂದರ ಅನುಭವವಾಗುತ್ತದೆ.

ಪ್ರತಿ ವರ್ಷವೂ ಬೇಸಿಗೆ ಕಳೆದು ಬಿಟ್ಟರೆ ಸಾಕೆಂದು ಕಾಡಿನಲ್ಲಿರುವ ಪ್ರಾಣಿ, ಪಕ್ಷಿ, ಮರಗಿಡಗಳು ಮತ್ತು ಅರಣ್ಯ ಇಲಾಖೆ ಬಯಸುತ್ತದೆ. ಕಾರಣ ಕಾಡ್ಗಿಚ್ಚಿನ ಭಯ. ಬಂಡೀಪುರ ಅರಣ್ಯ ಇದುವರೆಗೆ ಭಯಾನಕ ಅಗ್ನಿಅವಘಡಗಳನ್ನು ಕಂಡಿದೆ. ಅಗ್ನಿಯ ಕೆನ್ನಾಲಿಗೆಗೆ ಮನುಷ್ಯ ಸೇರಿದಂತೆ, ಪ್ರಾಣಿ, ಪಕ್ಷಿ, ಗಿಡ, ಮರಗಳೆಲ್ಲವೂ ಉರಿದು ಹೋಗಿದೆ. ಅದರಿಂದ ಚೇತರಿಸಿಕೊಂಡು ಅರಣ್ಯ ಮತ್ತೆ ಹಸಿರಾಗಲು ಹಲವು ವರ್ಷಗಳನ್ನೆ ಕಂಡಿದೆ.

ಈ ಬಾರಿ ಕಾಡ್ಗಿಚ್ಚು ಸಂಭವಿಸಿದರೂ ಈ ಹಿಂದಿನಂತೆ ಯಾವುದೇ ಭಯಾನಕ ಅನಾಹುತ ಸಂಭವಿಸಿಲ್ಲ. ಜತೆಗೆ ಪ್ರಾಣಿ, ಪಕ್ಷಿಗಳಿಗೆ ನೀರಿನ ಸಮಸ್ಯೆ ಕಾಣಿಸಿಲ್ಲ ಎನ್ನುವುದು ನೆಮ್ಮದಿಯ ವಿಚಾರವಾಗಿದೆ. ಇದೀಗ ಅಲ್ಲಲ್ಲಿ ಮಳೆಯಾಗಿ ಅರಣ್ಯ ಹಸಿರಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಚೇತರಿಸಿಕೊಂಡರೆ ಇಡೀ ಅರಣ್ಯ ಸಮೃದ್ದಿಯಾಗಲಿದೆ.

ಇವತ್ತೇನಾದರೂ ನಾವು ಅರಣ್ಯಕ್ಕೊಂದು ಸುತ್ತು ಹೊಡೆದರೆ(ಸಫಾರಿ) ವನ್ಯಪ್ರಾಣಿಗಳು ಮತ್ತೆ ಮರಳಿದ್ದು ನೆಮ್ಮದಿಯಾಗಿ ಓಡಾಡಿಕೊಂಡಿರುವುದು ಕಾಣಸಿಗುತ್ತಿದೆ. ಛಂಗನೆ ನೆಗೆದು ಓಡುವ ಜಿಂಕೆಗಳು.. ಗಂಭೀರ ಹೆಜ್ಜೆಯಿಟ್ಟು ನಡೆಯುವ ಕಾಡಿನರಾಜ ಹುಲಿ, ಹಿಂಡು ಹಿಂಡಾಗಿ ಸಾಗುವ ಕಾಡಾನೆಗಳು, ಅಳಿಲು, ಹಾವು ಸೇರಿದಂತೆ ಪಕ್ಷಿಗಳು ನಮ್ಮ ಮನಸ್ಸೆಳೆಯುತ್ತವೆ.

ಈ ಹಿಂದೆ ಬೇಸಿಗೆಯಲ್ಲಿ ಸಫಾರಿಗೆ ತೆರಳಿದವರು ಅರಣ್ಯದಲ್ಲಿ ವನ್ಯಪ್ರಾಣಿಗಳನ್ನು ಕಾಣದೆ ನಿರಾಶರಾಗಿ ಹಿಂತಿರುಗಿದ್ದರೆ ಅಂತಹವರು ಈಗೇನಾದರೂ ಮರಳಿ ಅಲ್ಲಿಗೆ ಹೋದರೆ ನಿಜಕ್ಕೂ ಖುಷಿಪಡುವುದರಲ್ಲಿ ಎರಡು ಮಾತಿಲ್ಲ. ಇನ್ನು ಕೇರಳದ ವೈನಾಡು ಪ್ರದೇಶದಲ್ಲಿ ಮುಂಗಾರು ಮಳೆ ಆರಂಭವಾದರೆ ಇಲ್ಲಿನ ಮೂಲೆ ಹೊಳೆಯಲ್ಲಿ ನೀರು ಹರಿದು ಇಡೀ ಅರಣ್ಯದಲ್ಲಿ ಪುಳಕ ಕಂಡು ಬರಲಿದೆ. ಇಷ್ಟರಲ್ಲೇ ಬಂಡೀಪುರ ಅರಣ್ಯದಲ್ಲಿ ಕ್ಯಾಮರಾಗೆ ವನ್ಯಪ್ರಾಣಿಗಳು ಸಿಗುತ್ತಿರುವುದರಿಂದ ಪ್ರಾಣಿಪ್ರಿಯರು ಅತ್ತ ತೆರಳಲು ಮುಂದಾಗುತ್ತಿದ್ದಾರೆ.

ಇದೀಗ ವೀಕೆಂಡ್ ನಲ್ಲಿ ಇತ್ತ ಸುಳಿಯುವ ಪ್ರವಾಸಿಗರ ಸಂಖ್ಯೆಯೂ ದುಪ್ಪಟ್ಟಾಗಿದ್ದು, ಆಗೊಮ್ಮೆ ಈಗೊಮ್ಮೆ ದರ್ಶನ ನೀಡುವ ಹುಲಿಗಳು ಗಮನಸೆಳೆಯುತ್ತವೆ. ಇವು ಮಾತ್ರವಲ್ಲದೆ, ವನ್ಯ ಪ್ರಾಣಿಗಳು ಯಾವುದೇ ತೊಂದರೆಯಿಲ್ಲದೆ ನಿರ್ಭಯವಾಗಿ ಓಡಾಡಲಾರಂಭಿಸಿವೆ. ಪ್ರಾಣಿಗಳಿಗೆ ಕುಡಿಯಲು ನೀರು, ತಿನ್ನಲು ಮೇವು ಸಿಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಮಳೆಗೆ ಕೆರೆಕಟ್ಟೆಗಳು ತುಂಬಿರುವುದರಿಂದ ನೀರಿಗೆ ಸಮಸ್ಯೆ ಇಲ್ಲದಾಗಿದೆ. ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮುಂಗಾರು ಚೇತರಿಸಿದರೆ ವೈನಾಡಿನಿಂದ ಹರಿದು ಬರುವ ಮೂಲೆಹೊಳೆಯೂ ಜೀವಪಡೆದುಕೊಳ್ಳಲಿದೆ. ಇದು ಬಂಡೀಪುರ ಅರಣ್ಯದೊಳಗೆ ಹರಿಯವುದರಿಂದ ಇದು ಜೀವಸೆಲೆ ಎಂದರೆ ತಪ್ಪಾಗುವುದಿಲ್ಲ.

ಈ ಮೂಲೆ ಹೊಳೆಯನ್ನೇ ನಂಬಿ ಕಾಡಂಚಿನ ಗ್ರಾಮಗಳಾದ ಮದ್ದೂರು, ಮೂಲೆಹೊಳೆ. ಗಿರಿಜನಕಾಲೋನಿಯ ಜನತೆಯಿದ್ದಾರೆ. ಅವರು ಇದೇ ಹೊಳೆಯ ನೀರನ್ನು ಬಳಸುತ್ತಾರೆ. ಮೂಲೆಹೊಳೆಯಲ್ಲಿ ನೀರು ಕಡಿಮೆಯಾದರೆ ಎಷ್ಟೊಂದು ಸಮಸ್ಯೆಯಾಗುತ್ತದೆ ಎಂಬುದು ಈ ಹಿಂದೆಯೇ ಅನುಭವಕ್ಕೆ ಬಂದಿದೆ. ನೀರು ಬತ್ತಿದ್ದರಿಂದ ವನ್ಯಪ್ರಾಣಿಗಳು ನೀರು ಹುಡುಕಿಕೊಂಡು ಹೋಗಿದ್ದವು. ಬೇಸಿಗೆ ಸಮಯದಲ್ಲಿ ವೈನಾಡು ವ್ಯಾಪ್ತಿಯಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ಕಟ್ಟಿ ನೀರನ್ನು ಕೃಷಿಗೆ ಬಳಸಿಕೊಳ್ಳುವುದರಿಂದ ಹೊಳೆಯಲ್ಲಿ ನೀರು ಹರಿಯುವುದು ಕಡಿಮೆಯಾಗುವುದರಿಂದ ಸಮಸ್ಯೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಆ ಸಮಸ್ಯೆ ಎದುರಾಗದ ಕಾರಣ ಪ್ರಾಣಿ ಪಕ್ಷಿಗಳ ದಾಹ ತೀರಿಸುವಲ್ಲಿ ಸಫಲವಾಗಿದೆ.

ಇನ್ನು ಮಳೆಗಾಲ ಪ್ರಾರಂಭವಾದ ನಂತರ ಮೂಲೆಹೊಳೆ ವಲಯದಲ್ಲಿರುವ ಸುಮಾರು 32 ಕೆರೆಗಳಿಗೂ ನೀರು ಹರಿದುಬರುತ್ತಿದೆ. ಇದರಿಂದ ಈ ಬಾರಿಯ ಬೇಸಿಗೆಯಲ್ಲಿ ನೀರಿಗೆ ಯಾವುದೇ ಸಮಸ್ಯೆಯಾಗಿರುವುದಿಲ್ಲ. ಮುಂದೆ ಮಳೆ ಉತ್ತವಾಗಿ ಸುರಿದರೆ ಈ ಹೊಳೆ ತುಂಬಿ ಹರಿಯಲಿದೆ. ಇದೀಗ ಈ ನದಿ ಹರಿಯುವ ಪ್ರದೇಶಗಳಾದ ಬಂಡೀಪುರ ಅರಣ್ಯದ ಮದ್ದೂರಿನಿಂದ ಮೂಲೆಹೊಳೆ ದಾಟುವವರೆಗೆ ಆನೆಗಳ ಹಿಂಡು, ಜಿಂಕೆಗಳ ಗುಂಪು ಹಾಗೂ ಕಾಡುಕೋಣಗಳು ನೀರು ಕುಡಿಯಲು ಬರುವ ವೇಳೆ ಜನರ ಕಣ್ಣಿಗೆ ಕಾಣಿಸುತ್ತಿರುವುದು ವಿಶೇಷವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು