ಕಾರವಾರ: ತಾಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಪಕ್ಷಿ ಸಂಕುಲ ಪರಿಚಯಿಸುವ ನಿಟ್ಟಿನಲ್ಲಿ ನಮ್ಮ ಊರು ನಮ್ಮ ಖಗಸಂಕುಲ ಕಾರ್ಯಕ್ರಮ ಶಿರವಾಡ ವ್ಯಾಪ್ತಿಯಲ್ಲಿ ನಡೆಯಿತು. ಕೈಗಾ ಬರ್ಡರ್ಸ ಹಾಗೂ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಟ್ಟು 51 ಹಕ್ಕಿಪ್ರಭೇದಗಳನ್ನು ಗುರುತಿಸಲಾಯಿತು.
ಪಕ್ಷಿ ವೀಕ್ಷಣೆಯನ್ನು ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ನಡೆಸಲಾಯಿತು. ವಲಸೆ ಹಕ್ಕಿಗಳಾದ ಬೂದು ಕಾಜಾಣ, ಹೊನ್ನಕ್ಕಿ,ಸಹಿತ ಇನ್ನಿತರ ಆಕರ್ಷಕ ಹಕ್ಕಿಗಳಾದ ಮಲೆಮಂಗಟ್ಟೆ , ಕೈರಾತ, ಮಲೆಗಿಳಿ, ಬಿಜ್ಜು ಹಾಗೂ ಕಂದು ಕಳಿಂಗಗಳು ವಿದ್ಯಾರ್ಥಿಗಳ ಗಮನಸೆಳೆದವು. ಕೈಗಾ ಬರ್ಡರ್ಸ ಕ್ಲಬ್ ಪರಿಣಿತರು ಹಕ್ಕಿಗಳ ಪ್ರಭೇದಗಳನ್ನು ಗುರುತಿಸುವುದು, ಅವುಗಳ ಗುಣಲಕ್ಷಣಗಳು, ಆಹಾರ ಪದ್ದತಿ, ಹಾರಾಟ, ಕುಟುಂಬ ವ್ಯವಸ್ಥೆ ಹಾಗೂ ಇನ್ನಿತರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 45 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿದ್ಯಾಲಯದ ಎನ್.ಎಸ್.ಎಸ್ ಘಟಕಕ್ಕೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ ಕರುನಾಡಿನ ಪಕ್ಷಿಗಳ ವಿವರ ಇರುವ ಚಿತ್ರಪಟಗಳನ್ನು ಕೈಗಾ ಬರ್ಡರ್ಸ ವತಿಯಿಂದ ವಿತರಿಸಲಾಯಿತು. ವಿದ್ಯಾರ್ಥಿನಿ ರೇವತಿ ರಾಮು ಭೋವಿವಡ್ಡರ ಪರಿಸರ ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಂಕಲ್ಪಗಳನ್ನು ಭೋಧಿಸಿದರು.
ಪ್ರಿಯಾಂಕ ಉತ್ತಂಗಿ ಹಾಗೂ ಸಂದೇಶ ನಾಯ್ಕ ಪಕ್ಷಿ ವೀಕ್ಷಣೆಯ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಕೈಗಾ ಬರ್ಡರ್ಸ ನ ಸಂಯೋಜಕ ಜಿ. ಮೋಹನದಾಸ, ಸದಸ್ಯರುಗಳಾದ ಬಿ.ಎಸ್. ನಾಗನೂರಿ, ಕೆ. ಹರೀಶ್, ದಿನೇಶ ಗಾಂವಕರ, ಸೂರಜಕುಮಾರ, ಮಹಾಂತೇಶ ಓಶಿಮಠ ಹಾಗೂ ವಿದ್ಯಾಲಯದ ಬೋಧಕ ವೃಂದದ ರಾಜಶ್ರೀ ನಾಯಕ, ಶೈಲಾ ನಾಯಕ, ಸಂಧ್ಯಾ ಮಿಟ್ಭಾವಕರ, ಜಯಶ್ರೀ, ನೇತ್ರಾವತಿ ನಾಯಕ, ಪ್ರೀತಿ ಕೋಠಾರಕರ ಹಾಗೂ ದಿನೇಶ ಪಿ. ಕಿನ್ನರಕರ ಇದ್ದರು.