News Karnataka Kannada
Sunday, May 12 2024
ಸಂಪಾದಕೀಯ

ಯುದ್ದಗಳು ವಿನಾಶವೇ ಹೊರತು, ವಿಕಾಸವಲ್ಲ: ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧ ಜಗತ್ತಿಗೆ ಅಪತ್ತು

Israel Vs Palestine
Photo Credit : Twitter

ಇಸ್ರೇಲ್ – ಪ್ಯಾಲೆಸ್ತೀನ್‌ ಯುದ್ಧ 6ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಈ ಎರಡು ದೇಶಗಳ ನಡುವೆ ಆದ್ರೂ ಇದರಿಂದ ಜಾಗತಿಕವಾಗಿ ನಾನಾ ಪರಿಣಾಮಗಳನ್ನು ಉಂಟು ಮಾಡ್ತಿದೆ. ರಷ್ಯಾ ಮತ್ತು ಉಕ್ರೇನ್‌ ನಡುವೆ ಕಳೆದ ಒಂದೂವರೆ ವರ್ಷದಿಂದ ಯುದ್ಧ ನಡೆಯುತ್ತಿದ್ದು, ಸಾಕಷ್ಟು ಸಾವು ನೋವು ಸಂಭವಿಸಿದೆ. ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ನಡುವಿನ ಸಂಘರ್ಷವು ಇಂದು-ನಿನ್ನೆಯದಲ್ಲ. ಇದಕ್ಕೆ ಸುದೀರ್ಘ ಇತಿಹಾಸವಿದೆ.  ಉಭಯ ರಾಷ್ಟ್ರಗಳ ಮಧ್ಯೆ ನಿತ್ಯ ಸಂಘರ್ಷ ಇದ್ದೇ ಇದೆ.. ಆದರೆ, ಶನಿವಾರ  (ಅ.07) ನಡೆದ ದಾಳಿ ಮಾತ್ರ ಹತ್ತು ವರ್ಷದಲ್ಲೇ ಇದೇ ಮೊದಲು ಇಷ್ಟು ದೊಡ್ಡ ಪ್ರಮಾಣದಲ್ಲಿ ದಾಳಿ ಎನಿಸಿಕೊಂಡಿದೆ. ಏಕಾಏಕಿ ಹಮಾಸ್ ಉಗ್ರರ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯಿಂದ ಇಸ್ರೇಲ್ ಮೇಲೆ ಬರೋಬ್ಬರಿ 5,000 ರಾಕೆಟ್ ದಾಳಿ ಮಾಡಲಾಯಿತು. ಹೀಗಾಗಿ ಇಸ್ರೇಲ್ ಯುದ್ಧದ ಸನ್ನಿವೇಶ ಘೋಷಣೆ ಮಾಡಿತ್ತು. ಗಾಜಾಪಟ್ಟಿಯಿಂದ 5,000 ರಾಕೆಟ್‌ಗಳ ದಾಳಿ ಮಾಡಿದ ಹಮಾಸ್ ಬಂಡುಕೋರರು ಇಸ್ರೇಲ್ ಗಡಿಯೊಳಗೆ ನುಗ್ಗಿ ಸಿಕ್ಕಸಿಕ್ಕಲ್ಲಿ ಇಸ್ರೇಲಿಗರನ್ನು ಹತ್ಯೆಗೈದರು. ಇವರ ರಣ ಭೀಕರ ದಾಳಿಗೆ ಪ್ರಾಣಕಳೆದುಕೊಂಡದ್ದು ಬರೊಬ್ಬರಿ ಸಾವಿರಕ್ಕೂ ಅಧಿಕ ಮಂದಿ.

ಇಂದು ನೆನ್ನೆಯದಲ್ಲ ಈ ಸಮರ:
ಕ್ರಮೇಣ ಯುದ್ಧ ಸಣ್ಣ ವಿಚಾರದಲ್ಲಿ ಮುಂದುವರಿಯುತ್ತಲೇ ಹೋಯಿತು. ಆದರೆ 2018ರಲ್ಲಿ ಗಾಜಾ ಗಡಿಯಲ್ಲಿ ಪ್ರತಿಭಟನೆ ಆರಂಭವಾಗುತ್ತದೆ. ಇಲ್ಲಿ ಇಸ್ರೇಲಿಗರು ಹಾಗು ಪ್ಯಾಲೇಸ್ತೀನಿಯನ್‌ ಸಾವನ್ನಪುತ್ತಾರೆ. ಇದೇ ಒಂದು ಕಾರಣ ಮತ್ತಷ್ಟು ದ್ವೇಷ ಹೆಚ್ಚಳು ಕಾರಣವಾಗುತ್ತದೆ. ಇನ್ನು 2022ರಲ್ಲಿ ಇಸ್ರೇಲಿ ವೈಮಾನಿಕ ದಾಳಿಗೆ ಹಿರಿಯ ಇಸ್ಲಾಮಿಕ್‌ ಜಿಹಾದ್‌ ಕಮಾಂಡರ್‌ ಸಾವನ್ನಪ್ಪಿದರು. ಅಲ್ಲದೇ 2023ರಲ್ಲಿ ಮತ್ತೆ ಇಸ್ರೇಲಿ ಪಡೆ ನಿರಾಶ್ರಿತರ ಮೇಲೆ ದಾಳಿ ನಡೆಸಿ ಬಂದೂಕುಧಾರಿಗಳು ಹಾಗು ಇಬ್ಬರು ನಾಗರಿಕರನ್ನು ಬಲಿ ಪಡೆದುಕೊಂಡಿತ್ತು. ಇದಕ್ಕೆಲ್ಲ ಪ್ರತ್ಯುತ್ತರ ನೀಡಲು ಕಾಯುತ್ತಿದ್ದ ಪ್ಯಾಲೇಸ್ತೀನಿಯನ್‌ 2023ರ ಅಕ್ಟೋಬರ್‌ 7ರಂದು ಶನಿವಾರ ಬೆಳಗ್ಗೆ ಬರೋಬ್ಬರಿ 5000 ರಾಕೆಟ್‌ ಗಳನ್ನು ಇಸ್ರೇಲಿಗೆ ಉಡಾಯಿಸಿ ಸಾವಿರಾರು ಮಂದಿಯನ್ನು ಬಲಿ ಪಡದುಕೊಂಡಿತ್ತು.

ಇಸ್ರೇಲ್ ಅನ್ನು 1948ರ ಮೇ 14ರಂದು ರಚಿಸಲಾಯಿತು. ಇದು 2ನೇ ಮಹಾಯುದ್ಧ ನಡೆದ 3 ವರ್ಷಗಳ ನಂತರ ಪ್ಯಾಲೆಸ್ತೀನ್​ನ ಭಾಗದಿಂದ ರೂಪುಗೊಂಡ ದೇಶವಾಗಿದೆ. ಇದಾದ ತಕ್ಷಣವೇ ಇಸ್ರೇಲ್ ಮೇಲೆ ನೆರೆಯ ಅರಬ್ ದೇಶಗಳು ದಾಳಿ ನಡೆಸುತ್ತವೆ. ಆದರೆ, ಇಸ್ರೇಲ್ ಅವರೆಲ್ಲರನ್ನೂ ಎದುರಿಸುತ್ತದೆ. ಈ ವೇಳೆ 7,60,000ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಇಸ್ರೇಲ್​ನಿಂದ ಪಲಾಯನ ಮಾಡಬೇಕಾಗುತ್ತದೆ.

1956ರಲ್ಲಿ ಇಸ್ರೇಲ್ ಬ್ರಿಟನ್ ಮತ್ತು ಫ್ರಾನ್ಸ್ ಜೊತೆ ಈಜಿಪ್ಟ್​ ಮೇಲೆ ಆಕ್ರಮಣ ಮಾಡಿತು. 1967ರಲ್ಲಿ ಇಸ್ರೇಲ್ ಅರಬ್ ದೇಶಗಳ ವಿರುದ್ಧ ಜಯಿಸಿತು. ಈ ವೇಳೆ ಜೋರ್ಡಾನ್‌ನಿಂದ ಪೂರ್ವ ಜೆರುಸಲೆಂ, ಸಿರಿಯಾದಿಂದ ಗೋಲನ್ ಹೈಟ್ಸ್ ಮತ್ತು ಗಾಜಾ ಪಟ್ಟಿ ಮತ್ತು ಈಜಿಪ್ಟ್‌ನಿಂದ ಸಿನೈ ದ್ವೀಪವನ್ನು ಒಳಗೊಂಡಂತೆ ಪಶ್ಚಿಮ ದಂಡೆಯನ್ನು ಇಸ್ರೇಲ್ ವಶಪಡಿಸಿಕೊಂಡಿತು. 2005ರಲ್ಲಿ ಇಸ್ರೇಲ್ 38 ವರ್ಷಗಳ ಆಕ್ರಮಣದ ಬಳಿಕ ಗಾಜಾದಿಂದ ತನ್ನ ಎಲ್ಲ ಪಡೆಗಳನ್ನು ಹಿಂಪಡೆಯಿತು. ಪ್ಯಾಲೆಸ್ತೀನಿಯನ್ ಪ್ರಾಧಿಕಾರಕ್ಕೆ ಅದನ್ನು ಬಿಟ್ಟುಕೊಟ್ಟಿತು. ಅಮೇಲೆ 2006ರಲ್ಲಿ ಇಸ್ಲಾಮಿಸ್ಟ್ ಗುಂಪು ಹಮಾಸ್ ಪ್ಯಾಲೇಸ್ಟಿನಿಯನ್ ಶಾಸಕಾಂಗ ಚುನಾವಣೆಯಲ್ಲಿ ಬಹುಪಾಲು ಸ್ಥಾನಗಳನ್ನು ಗೆದ್ದಿತು. ಹಮಾಸ್ ಉಗ್ರಗಾಮಿಗಳು ಗಾಜಾದಿಂದ ಗಡಿಯಾಚೆಗಿನ ದಾಳಿಯಲ್ಲಿ ಇಸ್ರೇಲಿ ಸೇನೆಯ ಗಿಲಾಡ್ ಶಾಲಿತ್‌ನನ್ನು ವಶಪಡಿಸಿಕೊಂಡರು. ಇದು ಇಸ್ರೇಲಿ ವೈಮಾನಿಕ ದಾಳಿಗಳು ಮತ್ತು ಆಕ್ರಮಣಕ್ಕೆ ಒತ್ತು ನೀಡಿತು. ಇನ್ನು 2007ರಲ್ಲಿ ಹಮಾಸ್ ಅಂತರ್ಯುದ್ಧದಲ್ಲಿ ಗಾಜಾವನ್ನು ಸ್ವಾಧೀನಪಡಿಸಿಕೊಂಡಿತು. ಬಳಿಕ ಒಂದಷ್ಟು ಯುದ್ಧಗಳು, ಸಾವು ನೋವುಗಳು ಸಂಭವಿಸಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಇದುವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ಸೇನೆ ಮತ್ತು ಉಗ್ರ ಸಂಘಟನೆ ಹಮಾಸ್ ನಡುವಿನ ಸಂಘರ್ಷ ಇನ್ನೂ ಮುಂದುವರಿದಿದೆ.

ಹಮಾಸ್‌ ಉಗ್ರರ ನಿರ್ನಾಮ ಮಾಡುವ ಪಣ ತೊಟ್ಟಿರುವ ಇಸ್ರೇಲ್‌:
ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿರುವ ಇಸ್ರೇಲ್‌ ಈಗ ಗಾಜಾಪಟ್ಟಿಯನ್ನು ನಾವು ವಶಪಡಿಸಿಕೊಂಡಿದ್ದೇವೆ ಎಂಬುದಾಗಿ ಘೋಷಿಸಿದೆ. ರಾತ್ರೋರಾತ್ರಿ ಸುಮಾರು 200 ಕಟ್ಟಡಗಳನ್ನು ಗುರಿಯಾಗಿಸಿ ಇಸ್ರೇಲ್‌ನ ಯುದ್ಧವಿಮಾನಗಳು ಗಾಜಾಪಟ್ಟಿ ಮೇಲೆ ದಾಳಿ ನಡೆಸಿದ್ದು, “ಇಡೀ ಗಾಜಾ ನಮ್ಮ ವಶವಾಗಿದೆ” ಎಂದು ಇಸ್ರೇಲ್‌ ತಿಳಿಸಿದೆ.  ಹಮಾಸ್‌ ಉಗ್ರರ ಕಟ್ಟಡಗಳು ಸೇರಿ ಪ್ರಮುಖ ಕಟ್ಟಡಗಳನ್ನು ಇಸ್ರೇಲೆ ಧರೆಗುರುಳಿಸಿದೆ. ಮತ್ತೊಂದೆಡೆ, ಗಾಜಾಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ 1.8 ಲಕ್ಷ ನಾಗರಿಕರು ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಇತ್ತಇಸ್ರೇಲ್​ ನ ಸೇನೆಯು ಯಾವುದೇ ಪೂರ್ವ ಎಚ್ಚರಿಕೆಯಿಲ್ಲದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್​ನ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ ಎಂದು ಪ್ಯಾಲೆಸ್ತೀನ್ ನ ಭಯೋತ್ಪಾದಕ ಸಂಘಟನೆ ಹಮಾಸ್ ಎಚ್ಚರಿಕೆ ನೀಡಿದೆ.  ಆದರೆ ವರದಿಗಳ ಪ್ರಕಾರ,  ಹಮಾಸ್ ಉಗ್ರರು ಎಷ್ಟು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದರೆ ಇಸ್ರೇಲ್‌ನಲ್ಲಿದ್ದ ಎಳೆಯ ಮಕ್ಕಳನ್ನು ಅಮಾನುಷವಾಗಿ ಕಿಡ್ನ್ಯಾಪ್ ಮಾಡಿ ಗಾಜಾ ಪಟ್ಟಿಗೆ ಕರೆದೊಯ್ದಿದ್ದಾರೆ. ಗಾಜಾ ಪಟ್ಟಿಯಲ್ಲಿ ಎಳೆಯ 40 ಮಕ್ಕಳ ತಲೆ ಕಡಿದು ಹತ್ಯೆ ಮಾಡಿ ಪೈಶಾಚಿಕತೆ ಮೆರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಎರಡೂ ಕಡೆಗಳಲ್ಲಿ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳು ಬಹಿರಂಗವಾಗಿಲ್ಲ. ಆದರೆ ಇಸ್ರೇಲಿ ಸೇನೆಯು ಗಾಜಾ ಪಟ್ಟಿಯ ಸುತ್ತಲೂ 1,500 ಹಮಾಸ್ ಭಯೋತ್ಪಾದಕರ ಶವಗಳು ಪತ್ತೆಯಾಗಿವೆ ಎಂದು ಹೇಳಿದೆ. ಹಮಾಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಗಾಜಾದ ಸಂಸತ್ತು ಮತ್ತು ನಾಗರಿಕ ಸಚಿವಾಲಯವು ತನ್ನ ಗುರಿಯಾಗಿದೆ ಎಂದು ಇಸ್ರೇಲಿ ಸೇನೆ ಹೇಳಿತ್ತು.

ಅಚ್ಚರಿ ಎನ್ನುವಂಥ ಬೆಳವಣಿಗೆಯೊಂದರಲ್ಲಿ ಹಮಾಸ್​​​ನಿಂದ ನಡೆದ ದಾಳಿಯಲ್ಲಿ ಇಸ್ರೇಲ್​​​ನಲ್ಲಿ ಭಾರೀ ಸಾವು- ನೋವು ಸಂಭವಿಸಿದೆ. ಇದಾದ ಮೇಲೆ ಭಾರೀ ಕ್ರುದ್ಧರಾಗಿ, ಯುದ್ಧ ಶುರು ಮಾಡಿರುವುದು ಹಮಾಸ್ ಇರಬಹುದು, ಆದರೆ ಇದನ್ನು ನಾವು ಮುಗಿಸುತ್ತೇವೆ, ಎಂಬ ಹೇಳಿಕೆ ನೀಡಿದ್ದಾರೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು. ಅದರರ್ಥ, ಗಾಜಾಪಟ್ಟಿಯಲ್ಲಿ ಇರುವ ಹಮಾಸ್ ಅನ್ನು ಹೊಸಕಿ ಹಾಕುತ್ತೇವೆ, ನಾಮಾವಶೇಷ ಮಾಡುತ್ತೇವೆ ಎಂದಾಗುತ್ತದೆ. ಈ ನಡೆಗೆ ಅಮೆರಿಕಾ ಸೇರಿದಂತೆ ಹಲವು ದೇಶಗಳು ಇಸ್ರೇಲ್​​​ಗೆ ಬೆಂಬಲ ಸೂಚಿಸಿವೆ. ಆದರೆ ಈ ಯುದ್ಧ ಹದಿನೈದು- ಇಪ್ಪತ್ತು ದಿನಕ್ಕಿಂತ ಹೆಚ್ಚು ನಡೆಯುವುದಿಲ್ಲ ಮತ್ತು ಹಮಾಸ್ ಅನ್ನು ನಾಮಾವಶೇಷ ಮಾಡಲು ಆಗುವುದಿಲ್ಲ. ಈಗಿನ ಯುದ್ಧದಲ್ಲಿ ಇಸ್ರೇಲ್​​​ಗೆ ಇದು ಹಿನ್ನಡೆಯ ಲೆಕ್ಕವೇ ಎಂದು ಮಹಾರಾಷ್ಟ್ರದ ಮುಂಬೈ ಮೂಲದ ಟಾರೋ ಕಾರ್ಡ್ ರೀಡರ್ ಪ್ರಕಾಶ್ ದಳವಿ ಭವಿಷ್ಯ ನುಡಿದಿದ್ದಾರೆ.

ಮುಂದುವರೆದು,  ಗಾಜಾದಲ್ಲಿ ಒತ್ತೆಯಾಳಾಗಿರಿಸಿಕೊಂಡಿರುವವರನ್ನು ಬಿಡುಗಡೆ ಮಾಡುವವರೆಗೂ ನೀರು ಸೇರಿದಂತೆ ಯಾವ ಮೂಲಭೂತ ಸೌಕರ್ಯಗಳೂ ನಿಮಗೆ ಸಿಗುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ವಿದ್ಯುತ್ ಕೂಡ ಇರುವುದಿಲ್ಲ, ನೀರು ಬಿಡುವುದಿಲ್ಲ, ಅಪಹರಣಕ್ಕೊಳಗಾದ ಇಸ್ರೇಲಿಯನ್ನರು ವಾಪಸ್ ಬರುವವರೆಗೂ ಯಾವ ಮೂಲಭೂತ ಸೌಕರ್ಯಗಳೂ ದೊರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಆದರೂ 250ಕ್ಕೂ ಹೆಚ್ಚಿ ಇಸ್ರೇಲಿ ಜನರನ್ನು ಹಮಾಸ್​ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದರು. ಒಂದೊಮ್ಮೆ ಗಾಜಾದ ಮೇಲೆ ದಾಳಿ ನಡೆಸಿದರೆ ನಾವು ಒಬ್ಬೊಬ್ಬರನ್ನೇ ಕೊಲ್ಲುತ್ತೇವೆ ಎಂದು ಉಗ್ರರು ಬೆದರಿಕೆ ಹಾಕುತ್ತಿದ್ದರು. ಇಸ್ರೇಲ್ ನಿರಂತರವಾಗಿ ಗಾಜಾದಲ್ಲಿ ಹಮಾಸ್ ಸ್ಥಾನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಹಮಾಸ್ ಉಗ್ರರ ಅಡಗುತಾಣಗಳ ಮೇಲೆ ಇಸ್ರೇಲ್​ ಸೈನಿಕರು ದಾಳಿ ನಡೆಸಿ ಮುನ್ನುಗ್ಗಿ 250 ಮಂದಿಯನ್ನು ರಕ್ಷಿಸಿದ್ದಾರೆ. ಆದರೆ ಹಮಾಸ್​​ ಉಗ್ರರು ನೀಡಿರುವ ಮಾಹಿತಿ ಪ್ರಕಾರ ಇಸ್ರೇಲ್​​ 24 ಗಂಟೆಯಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಇಸ್ರೇಲಿಗರು ಮತ್ತು ವಿದೇಶಿ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಹಾಗಾದರೆ  ಈ ಭಯಾನಕ ಕೃತ್ಯದ ಹಿಂದಿರುವ ಹಮಾಸ್​ ಉಗ್ರರ ಕಿಂಗ್​ ಪಿನ್​ ಯಾರು?
ಹಮಾಸ್ ಉಗ್ರರ ದಾಳಿಯ ಸೂತ್ರಧಾರಿಯ ಹೆಸರು ಮೊಹಮ್ಮದ್ ಡೀಫ್. ಇವನೇ ಹಮಾಸ್‌ ದಾಳಿಯ ಮಾಸ್ಟರ್ ಮೈಂಡ್. ಸಾವಿರಾರು ಇಸ್ರೇಲಿಗರ ಸಾವಿಗೆ ಕಾರಣವಾದ ಹಮಾಸ್‌ನ ಸಂಘಟಿತ ದಾಳಿಯ ಈ ರೂವಾರಿ ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿ ಬೆಳೆದವ. 2002ರಿಂದ ಹಮಾಸ್‌ನ ಮಿಲಿಟರಿ ವಿಭಾಗದ ಮುಖ್ಯಸ್ಥ. ಅಂದಿನಿಂದ ಹಮಾಸ್‌ನ ಮಿಲಿಟರಿ ಶಾಖೆ ಕಸ್ಸಾಮ್ ಬ್ರಿಗೇಡ್‌ಗಳನ್ನು ಮುನ್ನಡೆಸಿದ್ದಾನೆ. ಇವನ ತಂದೆ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ . ಶನಿವಾರ ನಡೆದ ದಾಳಿಯಲ್ಲಿ ಹಮಾಸ್ ಹೋರಾಟಗಾರರು ನುಸುಳಿದ ಅದೇ ಪ್ರದೇಶಕ್ಕೆ 1950ರಲ್ಲಿಯೂ ಪ್ಯಾಲೆಸ್ತೀನ್‌ ಉಗ್ರರ ದಾಳಿ ನಡೆಸಿದ್ದರು. ಅದರಲ್ಲಿ ಡೀಫ್‌ನ ತಂದೆ, ಅವನ ಚಿಕ್ಕಪ್ಪ ಕೂಡ ಭಾಗವಹಿಸಿದ್ದರಂತೆ. 2004ರಲ್ಲಿ ಇಸ್ರೇಲಿ ವೈಮಾನಿಕ ದಾಳಿಯಿಂದ ಡೀಫ್ಗಾ ಲಿಕುರ್ಚಿಯಲ್ಲಿ ಕುಳಿತೇ ಕಸ್ಸಾಮ್ ಬ್ರಿಗೇಡ್‌ಗಳನ್ನು ಮುನ್ನಡೆಸುತ್ತಿದ್ದಾನೆ. ಇನ್ನು ಈತನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕಾದ ಭದ್ರತಾ ಇಲಾಖೆ ಗುರುತಿಸಿದೆ.

ಇಲ್ಲಿಂದ ಆತನ ದುರ್ಬುದ್ದಿಗಳು ಮತ್ತಷ್ಟು ಹೆಚ್ಚಾಗುತ್ತಲೇ ಹೋಗಿದೆ. 1987ರಲ್ಲಿ ಕೂಡ ಈತನ್ನು ಆತ್ಮಹತ್ಯಾ ಬಾಂಬ್‌ ದಾಳಿ ಪ್ರಕರಣದಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಮೊಹಮ್ಮದ್ ಡೀಫ್‌ಗೆ ಮೊದಲಿಂದಲೂ ಇಸ್ರೇಲ್ ಮೇಲೆ ಆಕ್ರಮಣ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇತ್ತಂತೆ. ಹಾಗಾಗಿ ಆತ ಇತ್ತೀಚೆಗಿನ ದಾಳಿಯ ಬಳಿಕ ,” ಇದು ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್. ಗಾಜಾದ ಮೇಲಿನ 16 ವರ್ಷಗಳ ದಿಗ್ಬಂಧನ, ಇಸ್ರೇಲಿ ಆಕ್ರಮಣ, ಇಸ್ರೇಲಿ- ಪ್ಯಾಲೆಸ್ತೀನ್ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಇತ್ತೀಚಿನ ಘಟನೆಗಳ ಸರಣಿಗೆ ಇದು ಪ್ರತಿಕ್ರಿಯೆ.” ಎಂದು ತನ್ನ ರಿಯಾಕ್ಷನ್‌ ನೀಡಿದ್ದ. ಈ ದುಷ್ಟನನ್ನು ಬಲಿ ಹಾಕಲು ಇಸ್ರೇಲಿನ ಮಿಲಿಟರಿ. ಬೇಹುಗಾರರು ದಶಕಗಳಿಂದ ಸತತ ಪ್ರಯತ್ತ ಮಾಡುತ್ತಲೇ ಇದ್ದಾರೆ.

ವಿಶ್ವದ ಐದು ಪ್ರಮುಖ ರಾಷ್ಟ್ರಗಳಿಂದ ಬೆಂಬಲ:
ಇನ್ನು ಈ ಕಷ್ಟದ ಸಮಯದಲ್ಲಿ ನಾವು ಇಸ್ರೇಲ್​ ಜೊತೆಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು.  ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಯುಕೆಯ ಪ್ರಧಾನು ರಿಷಿ ಸುನಕ್, ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹಾಗೂ ಯುಎಸ್​ನ ಜೋ ಬೈಡೆನ್ ಅವರು ಏಕೀಕೃತವಾಗಿ ಇಸ್ರೇಲ್​ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ಮೇಲೆ ದಾಳಿ ಮಾಡುತ್ತಿರುವ ಹಮಾಸ್ ಭಯೋತ್ಪಾದಕರ ಭೀಕರ ದಾಳಿಯನ್ನು 5 ರಾಷ್ಟ್ರಗಳು ಬಲವಾಗಿ ಖಂಡಿಸಿವೆ. ಭಯೋತ್ಪಾದಕರು ಮಾಡುತ್ತಿರುವುದು ಸರಿಯಲ್ಲ, ಇದರಲ್ಲಿ ಯಾವುದೇ ಸಮರ್ಥನೆ, ನ್ಯಾಯ ಸಮ್ಮತೆ ಇಲ್ಲ. ಭಯೋತ್ಪಾದನೆಯಿಂದ ಯಾವುದು ನೆರವೇರಲ್ಲ. ಎಲ್ಲರೂ ಈ ದಾಳಿಯನ್ನು ಖಂಡಿಸಬೇಕು ಎಂದು 5 ರಾಷ್ಟ್ರಗಳ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಯುದ್ಧಗಳು ಎಂದಿಗೂ ಶಾಂತಿ, ನೆಮ್ಮದಿಯನ್ನು ತರುವುದಿಲ್ಲ. ಅವುಗಳಿಂದೇ ವಿನಾಶವೇ ಹೊರತು ವಿಕಾಸವಲ್ಲ. ಈಗ ಶುರುವಾಗಿರುವ ಯುದ್ಧದ ಅಂತಿಮ ಫಲಿತಾಂಶವೂ ಇದೇ ಆಗಲಿದೆ. ಜತೆಗೆ, ಜಗತ್ತಿನ ಇತರ ರಾಷ್ಟ್ರಗಳ ಮೇಲೂ ದುಷ್ಪರಿಣಾಮ ಬೀರಲಿದೆ. ಯುದ್ಧ ಮುಂದುವರಿದಂತೆ, ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ವ್ಯಾಪಿಸಿಕೊಂಡರೆ ಭಾರತದ ಮೇಲೂ ದುಷ್ಪರಿಣಾಮವಾಗಲಿದೆ. ಉಗ್ರ ಸಂಘಟನೆಗಳನ್ನು ದೂರವಿಟ್ಟು, ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ನಿರಂತರ ಸಂಘರ್ಷದ ಕಾರಣಗಳನ್ನು ಪತ್ತೆ ಹಚ್ಚಿ, ಶಾಂತಿ ಮಾತುಕತೆ ಮೂಲಕ ಸಂಘರ್ಷವನ್ನು ನಿವಾರಿಸಿಕೊಳ್ಳಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು