News Karnataka Kannada
Friday, May 03 2024
ಸಂಪಾದಕೀಯ

ಏನಿದು ಎನ್ ಮನ್, ಎನ್ನ್ ಮಕ್ಕಳ್ ಯಾತ್ರೆ, ಯಾವುದೀ ತಮಿಳುನಾಡು ಫೈಲ್ಸ್‌

Tamil Nadu files
Photo Credit : News Kannada

ತಮಿಳುನಾಡಿನ ಫೈರ್ ಬ್ರಾಂಡ್ ನಾಯಕ ಎಂದೇ ಖ್ಯಾತಿ ಗಳಿಸಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ರಾಜ್ಯಾಧ್ಯಕ್ಷ ಕುಪ್ಪುಸ್ವಾಮಿ ಅಣ್ಣಾಮಲೈ ರಾಜ್ಯದಲ್ಲಿ ಕೈಗೊಂಡಿರುವ ಮೊದಲ ಹಂತದ ಪಾದಯಾತ್ರೆ ಸಹಸ್ರ ಸಂಖ್ಯೆಯ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಭರ್ಜರಿ ಯಶಸ್ಸು ಕಂಡಿದೆ. ಆದರೆ ಈ ಯಾತ್ರೆ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿಯೇ ಇರದ ಪಕ್ಷದ ಮತಗಳಿಕೆಗೆ ನೆರವಾಗಲಿದೆಯೇ ಎಂಬುದು ಸದ್ಯದ ಪ್ರಶ್ನೆ.

ಮುಂಬರುವ ಲೋಕಸಭೆ (2024) ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆ (2026)ಯಲ್ಲಿ ಮುಂಚಿತವಾಗಿ ಯಾತ್ರೆ ಆರಂಭವಾಗಿದ್ದು. ಜೂನ್ 28 ರಂದು ರಾಮೇಶ್ವರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಎನ್ ಮನ್, ಎನ್ನ್ ಮಕ್ಕಳ್’ (ನನ್ನ ಭೂಮಿ, ನನ್ನ ಜನರು) ಹೆಸರಿನ ಮೊದಲ ಹಂತದ ಯಾತ್ರೆಗೆ ಚಾಲನೆ ನೀಡಿದ್ದರು. ಈ ಯಾತ್ರೆ ರಾಮನಾಥಪುರಂ, ಶಿವಗಂಗಾ ಮೂಲಕ ಸಂಚರಿಸಿ ತಿರುನಲ್ವೇಲಿಯಲ್ಲಿ ಮುಕ್ತಾಯಗೊಂಡಿತು. ಮಧುರೈ, ವಿರುದುನಗರ, ತೂತುಕುಡಿ, ಕನ್ಯಾಕುಮಾರಿ ಮತ್ತು ತಿರುನಲ್ವೇಲಿ ಜಿಲ್ಲೆಗಳು 22 ದಿನಗಳಲ್ಲಿ 41 ವಿಧಾನಸಭಾ ಕ್ಷೇತ್ರಗಳ ಮೂಲಕ ಯಾತ್ರೆ ಹಾದು ಹೋಗಿವೆ.

ಎರಡನೇ ಹಂತದ ಯಾತ್ರೆ ಸೆಪ್ಟೆಂಬರ್ 3 ರಂದು ತೆಂಕಶಿ ಜಿಲ್ಲೆಯ ಆಲಂಗುಳಂನಿಂದ ಆರಂಭವಾಗಲಿದೆ. ಎರಡನೇ ಹಂತವು ತೆಂಕಶಿ, ವಿರುದುನಗರ, ಮಧುರೈ, ತೇಣಿ, ದಿಂಡಿಗಲ್, ದಿ ನೀಲಗಿರಿ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಸಾಗಲಿದೆ. ಸೆಪ್ಟೆಂಬರ್ 27 ರಂದು ಕೊಯಮತ್ತೂರು ಜಿಲ್ಲೆಯ ಸಿಂಗಾನಲ್ಲೂರು ಕ್ಷೇತ್ರದಲ್ಲಿ ಯಾತ್ರೆ ಸಮಾರೋಪಗೊಳ್ಳಲಿದೆ.

ತಮಿಳುನಾಡಿನ ಹೊಸ ಭರವಸೆ: ಅಣ್ಣಾಮಲೈ ಆಡಳಿತಾರೂಢ ಸರ್ಕಾರದ ವಿರುದ್ಧ ನಡೆಸುತ್ತಿರುವ ಕಠಿಣ ಭಾಷಣ ಮತ್ತು ಭ್ರಷ್ಟಾಚಾರ ವಿರೋಧಿ ನಿಲುವಿನಿಂದ ಜನಸಾಮಾನ್ಯರಿಗೆ ಪ್ರಿಯರಾಗಿದ್ದಾರೆ. ಅಣ್ಣಾಮಲೈ ತಮಿಳುನಾಡಿನ ಹೊಸ ಭರವಸೆಯಾಗಿ ಹೊರಹೊಮ್ಮುತ್ತಿದ್ದು, ಯಾತ್ರೆಯ ಪರಿಣಾಮ ರಾಜ್ಯದಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಧ್ವನಿಸಲಿದೆ ಎಂಬುದು ಹಲವರ ಅಭಿಪ್ರಾಯ.

ಅಣ್ಣಾಮಲೈ ಆಡಳಿತಾರೂಢ ಡಿಎಂಕೆ ವಿರುದ್ಧ ಆಕ್ರಮಣಕಾರಿ ನಿಲುವು ತಳೆದಿದ್ದು, ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಮತ್ತು ಅಳಿಯ ಶಬರೇಶನ್ ಸೇರಿದಂತೆ ಅವರ ಕುಟುಂಬ ಭ್ರಷ್ಟಾಚಾರದ ತಮಿಳುನಾಡು ಫೈಲ್ಸ್‌ ನ ಗಳನ್ನು ಹೊರತಂದಿದ್ದಾರೆ. ಅಲ್ಲದೆ ದಕ್ಷಿಣ ತಮಿಳುನಾಡಿನಲ್ಲಿ ಈ ಹಿಂದೆ ಕೋಮುಗಲಭೆಗಳಿಗೆ ಕಾರಣವಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೇರಿದಂತೆ ಹಲವು ಇಸ್ಲಾಮಿ ಸಂಘಟನೆಗಳ ಕಾರ್ಯಕರ್ತರ ಬಂಧನದ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ತಮಿಳು ಜನರ ಮನಗೆದ್ದಿದೆ. ಇದೇ ವಿಚಾರವನ್ನಿಟ್ಟುಕೊಂಡು ಈ ಹಿಂದೆ ಸ್ಪರ್ಧೆ ಮಾಡಿದ್ದ ಬಿಜೆಪಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಪೊನ್ ರಾಧಾಕೃಷ್ಣನ್ ಅವರು ಈ ಹಿಂದೆ ಕನ್ನಿಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿದ್ದನ್ನು ಸ್ಮರಿಸಬಹುದು. ಈ ಸ್ಥಾನ ಸೇರದಂತೆ ಕೆಲವು ಲೋಕಸಭಾ ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಬಿಜೆಪಿಯ ಪ್ರಮುಖ ತಂತ್ರಗಾರ ಎಂದು ಪರಿಗಣಿಸಲ್ಪಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಕ್ಷವು 25 ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಘೋಷಿಸಿರುವುದು ಮಹತ್ವ ಪಡೆದಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ 2026ರ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.

ಡಿಎಂಕೆ ಫೈಲ್ಸ್‌ ಬಿಡುಗಡೆ: ಅಣ್ಣಾಮಲೈ ಚೆನ್ನೈನಲ್ಲಿ ಡಿಎಂಕೆ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಪಟ್ಟಿ ಡಿಎಂಕೆ ಫೈಲ್ಸ್‌ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಅದರಲ್ಲಿ 27 ಡಿಎಂಕೆ ನಾಯಕರು 2.24 ಲಕ್ಷ ಕೋಟಿ ರೂ. ಅಕ್ರಮ ಸಂಪತ್ತು ಹೊಂದಿದ್ದಾರೆ. ಇದು ರಾಜ್ಯದ ಜಿಡಿಪಿಯ ಸುಮಾರು ಶೇ 10ರಷ್ಟಿದೆ ಎಂದು ಆರೋಪಿಸಿದ್ದರು. ಫೈಲ್ಸ್‌ ಬಿಡುಗಡೆ ವೇಳೆ ಡಾ. ಬಿಆರ್ ಅಂಬೇಡ್ಕರ್ ಅವರ ಚಿತ್ರವುಳ್ಳ ಬ್ಯಾಡ್ಜ್ ಧರಿಸಿ ಹಾಜರಾಗಿದ್ದ ಅವರು ಡಿಎಂಕೆ ನಾಯಕರಾದ ಜಗತ್ರಚಗನ್, ಇವಿ ವೇಲು, ಕೆಎನ್ ನೆಹರು, ಕನಿಮೊಳಿ, ಕಲಾನಿಧಿ ಮಾರನ್, ಟಿಆರ್ ಬಾಲು, ಕಲಾನಿಧಿ ವೀರಸಾಮಿ, ದೊರೈಮುರುಗನ್, ಕಥೀರ್ ಆನಂದ್, ಆರ್ಕಾಟ್ ವೀರಸಾಮಿ, ಕೆ ಪೊನ್ಮುಡಿ ಅವರ ಆಸ್ತಿ ಹಾಗೂ ಅಕ್ರಮ ಸಂಪತ್ತಿನ ವಿವರ ನೀಡಿದ್ದರು. ಅಕ್ರಮದ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು.

ಸ್ಟಾಲಿನ್‌ ಗೆ ನಡುಕ: ತಮಿಳುನಾಡು ಬಿಜೆಪಿ ಘಟಕದ ಯುವ ಅಧ್ಯಕ್ಷ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಅಣ್ಣಾಮಲೈ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರವಾಕುರಿಚ್ಚಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತರೂ, ಪ್ರಸ್ತುತ ತಮಿಳುನಾಡು ಸರಕಾರದ ವಿರುದ್ಧ ದೊಡ್ಡ ಮಟ್ಟಕ್ಕೆ ಹೋರಾಟ ನಡೆಸುತ್ತಿದ್ದಾರೆ. ಈ ಮೂಲಕ ಜನಮನ್ನಣೆ ಗಳಿಸುವತ್ತ ಮತ್ತು ಬಿಜೆಪಿಗೆ ಒಂದು ಅಸ್ತಿತ್ವ ತಂದುಕೊಡುವತ್ತ ಕಾರ್ಯನಿರತರಾಗಿದ್ದಾರೆ. ‘ಡಿಎಂಕೆ ಫೈಲ್’ನಿಂದಾಗಿ ಅಣ್ಣಾಮಲೈ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ಗೆ ಕೂಡ ನಡುಕ ಉಂಟಾಗಿರುವುದು ಸುಳ್ಳಲ್ಲ.

ಆದರೆ, ಶರವೇಗದಲ್ಲಿ ಮುನ್ನುಗ್ಗುತ್ತಿರುವ ಅಣ್ಣಾಮಲೈ ಅವರು ಎಚ್ಚರಿಕೆಯಿಂದ ಹೆಜ್ಜೆ ಇಡುವ, ಅಷ್ಟೇ ಎಚ್ಚರದಿಂದ ಮಾತುಗಳನ್ನಾಡುವ ಅಗತ್ಯವಿದೆ. ಅವರು ಜಾತಿ, ಧರ್ಮಗಳ ವಿರುದ್ಧ ದ್ವೇಷ ಬಿತ್ತನೆ ಮಾಡುತ್ತಿದ್ದು, ಸಮುದಾಯಗಳಲ್ಲಿ ಒಡಕು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಿಎಂಕೆ ನಾಯಕರು ಪೊಲೀಸರಿಗೆ ದೂರು ಕೂಡ ನೀಡಿದ್ದರು. ಬೇಕಿದ್ದರೆ ಪೊಲೀಸರು ನನ್ನನ್ನು ಅರೆಸ್ಟ್ ಮಾಡಲಿ ಎಂದು ಅಣ್ಣಾಮಲೈ ಅವರು ಎದೆಯೊಡ್ಡಿಯೂ ನಿಂತಿದ್ದರು.

ನನಗೆ ಸೆಲ್ಯೂಟ್‌ ಹೊಡೆಯುತ್ತಿದ್ದವರಿಗೆ ಸೆಲ್ಯೂಟ್‌ ಮಾಡಬೇಕೆ: ಅಣ್ಣಾಮಲೈ ಅವರ ಈ ನಾಯಕತ್ವದ ಗುಣದಿಂದಾಗಿಯೇ ಅವರನ್ನು ಕರ್ನಾಟಕ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ‘ನನಗೆ ಸೆಲ್ಯೂಟ್ ಹೊಡೆಯುತ್ತಿದ್ದ ಅಣ್ಣಾಮಲೈಗೆ ನಾನು ಸೆಲ್ಯೂಟ್ ಹೊಡೆಯಬೇಕೆ?’ ಎಂದು ಬಿಜೆಪಿಯಿಂದ ಸಿಡಿದುಹೋಗಿರುವ ಜಗದೀಶ್ ಶೆಟ್ಟರ್ ಅವರು ಕೂಡ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದರು. ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದ್ದಾಗ, ತಮಿಳಿಗರೇ ಹೆಚ್ಚಿರುವ ಪ್ರದೇಶದಲ್ಲಿ, ಈಶ್ವರಪ್ಪ ಅವರು ತಮಿಳುನಾಡು ನಾಡಗೀತೆಯನ್ನು ನಿಲ್ಲಿಸಿದಾಗ, ಅಣ್ಣಾಮಲೈ ಅವರು ಅದನ್ನು ವಿರೋಧಿಸಲಿಲ್ಲ ಎಂಬ ಆರೋಪ ಕೂಡ ಇದೆ.

ಈ ಎಲ್ಲ ಅಪಸವ್ಯಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಸದ್ಯಕ್ಕೆ ಬಿಜೆಪಿಗೆ ಬೇಕಿರುವುದು ತಮಿಳುನಾಡಿನಲ್ಲಿ ಅಸ್ತಿತ್ವವಷ್ಟೇ. ಈ ಕಾರಣದಿಂದಾಗಿಯೇ, ತಮಿಳುನಾಡಿನ ನಾಯಕರೊಬ್ಬರು ಭವಿಷ್ಯದ ಪ್ರಧಾನಿಯಾಗಬಾರದೇಕೆ? ಎಂದು ಅಮಿತ್ ಶಾ ಅವರು ಕೂಡ ಮಾರ್ಮಿಕವಾಗಿ ದಾಳ ಉರುಳಿಸಿದ್ದಾರೆ. ಆ ವ್ಯಕ್ತಿ ಯಾರು ಏನು ಎಂಬುದು ಸದ್ಯಕ್ಕೆ ಅಪ್ರಸ್ತುತ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
39339
ಉಮೇ‌ಶ ಎಚ್‌.ಎಸ್‌.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು