News Karnataka Kannada
Monday, April 29 2024
ಸಂಪಾದಕೀಯ

ವಿಷಮಗೊಂಡ ರಾಜಕೀಯ: ಇಲ್ಲಿ ʼಇಂಡಿಯಾʼ ಅಂದರೆ ʼಭಾರತʼ

India And Bharath
Photo Credit : News Kannada

ಸದ್ಯ ದೇಶದಲ್ಲಿ ಹೊಸ ಚರ್ಚೆಯೊಂದು ಆರಂಭವಾಗಿದೆ. ಇಂಡಿಯಾದ ಬದಲಿಗೆ ‌ʼಭಾರತ್ʼ ಎಂದು ಮಾತ್ರ ಅಧಿಕೃತವಾಗಿ ಬಳಕೆ ಮಾಡುವ ಪ್ರಸ್ತಾಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸೆಪ್ಟೆಂಬರ್ 18ರಿಂದ 22 ರ ತನಕ ನಡೆಯುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಬಹುದು ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಸಾಮಾನ್ಯವಾಗಿ ಎಲ್ಲ ದೇಶಗಳಿಗೂ ಒಂದೇ ಹೆಸರಿದೆ. ಆದರೆ ಇಂಡಿಯಾಗೆ ಮಾತ್ರ ಭಾರತ ಎನ್ನುವ ಇನ್ನೊಂದು ಹೆಸರು ಸಹ ಇದೆ.

ರಾಷ್ಟ್ರಪತಿ ಭವನವು ಹೊರಡಿಸಿರುವ ಜಿ20 ಭೋಜನಕೂಟದ ಆಹ್ವಾನ ಪತ್ರಿಕೆಯು ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಅಧಿಕೃತವಾಗಿ ಮರು ನಾಮಕರಣ ಮಾಡುವುದಕ್ಕೆ ಸಂಬಂಧಿಸಿದ ರಾಜಕೀಯ ವಿವಾದದ ಕಿಡಿ ಹೊತ್ತಿಸಿದೆ. ಆಹ್ವಾನ ಪತ್ರಿಕೆಯಲ್ಲಿ ದ್ರೌಪದಿ ಮುರ್ಮು ಅವರನ್ನು ‘ಭಾರತದ ರಾಷ್ಟ್ರಪತಿ'(ದಿ ಪ್ರೆಸಿಡೆಂಟ್ ಆಫ್‌ ಭಾರತ್) ಎಂದು ಉಲ್ಲೇಖಿಸಲಾಗಿದೆ. ಈವರೆಗೂ ʼದಿ ಪ್ರೆಸಿಡೆಂಟ್‌ ಆಫ್‌ ಇಂಡಿಯಾʼ ಎಂದು ಕರೆಯಲಾಗುತ್ತಿತ್ತು. ಇದನ್ನು ರಾಷ್ಟ್ರವ್ಯಾಪಿ ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.‌

ಪ್ರಧಾನಿ ನೇತೃತ್ವದಲ್ಲಿ ನಡೆಯುತ್ತಿರುವ ಶೃಂಗಸಭೆಯ ನೇಮ್‌ ಪ್ಲೇಟ್‌ ನಲ್ಲಿ ಇಂಡಿಯಾ ಹೆಸರಿನ ಬದಲಿಗೆ ́ʼಭಾರತʼ ಎಂದು ನಮೂದಿಸಲಾಗಿತ್ತು. ಇದು ವಿಪಕ್ಷಗಳಿಗೆ ಮತ್ತಷ್ಟು ಕಿಚ್ಚು ಹಚ್ಚಿದ್ದಂತಾಗಿತ್ತು.

ಮತ್ತೊಂದೆಡೆ, ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳ ನಂತರ ‘ಇಂಡಿಯಾ’ ಎಂಬ ಹೆಸರನ್ನು ‘ಭಾರತ’ ಎಂದು ತಿದ್ದುವ ಅಗತ್ಯವಿದೆಯೇ ಎಂಬ ಮೂಲಭೂತ ಚರ್ಚೆಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರಗೊಂಡಿದೆ. ದೇಶವನ್ನು ಇನ್ಮುಂದೆ ‘ಇಂಡಿಯಾ’ ಎನ್ನಲೇ ಅಥವಾ ‘ಭಾರತ’ ಎನ್ನಲೇ ಎಂದು ಸಾವಿರಾರು ಜನರು ಪ್ರಶ್ನಿಸುತ್ತಿದ್ದಾರೆ. ಈ ಚರ್ಚೆಯಲ್ಲಿ ಬಿಜೆಪಿ ಮುಖಂಡರು ಕೇಂದ್ರ ಸರಕಾರದ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ಬೆಂಬಲಿಗರು ಕೂಡ ಇತಿಹಾಸ, ಸಂಸ್ಕೃತಿಯ ಆಧಾರದಲ್ಲಿ ದೇಶಕ್ಕೆ ‘ಭಾರತ’ ಎಂಬ ಹೆಸರೇ ಸೂಕ್ತ ಎಂದು ವಾದಿಸುತ್ತಿದ್ದಾರೆ.

ಸಾಮಾನ್ಯವಾಗಿ ಇಂಡಿಯಾ ಹಾಗೂ ಭಾರತ ಎರಡೂ ಹೆಸರುಗಳು ಜನಜನಿತ. ಈ ಎರಡು ಹೆಸರುಗಳನ್ನೂ ಜನರು ನಿತ್ಯ ಬಳಸುತ್ತಾರೆ. ಹಾಗಿರುವಾಗ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಿಸುವುದರ ಅಗತ್ಯ ಏನು ಎಂಬ ಪ್ರಶ್ನೆಗಳನ್ನು ವಿಪಕ್ಷಗಳು ಕೇಳುತ್ತಿವೆ. ಸಂವಿಧಾನದ 1ನೇ ವಿಧಿಯಲ್ಲಿಯೇ ಭಾರತ ಮತ್ತು ಇಂಡಿಯಾ ಎರಡೂ ಹೆಸರುಗಳನ್ನು ಉಲ್ಲೇಖಿಸಲಾಗಿದೆ. “ಇಂಡಿಯಾ, ಅಂದರೆ ಭಾರತವು ರಾಜ್ಯಗಳ ಒಕ್ಕೂಟವಾಗಿರಲಿದೆ” ಎಂದು 1ನೇ ವಿಧಿ ಹೇಳಿದೆ. ದೇಶದ ಅಧಿಕೃತ ಹೆಸರುಗಳನ್ನಾಗಿ ಇಂಡಿಯಾ ಮತ್ತು ಭಾರತ ಎರಡನ್ನೂ ಸಂವಿಧಾನ ಗುರುತಿಸಿದೆ.

‘ಇಂಡಿಯಾ’ ಹೆಸರನ್ನು ಕೈಬಿಟ್ಟು, ‘ಭಾರತ’ ಎಂಬ ಹೆಸರನ್ನು ಮಾತ್ರವೇ ಅಧಿಕೃತವಾಗಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಐಎನ್‌ಡಿಐಎ ಎಂಬ ಹೆಸರು ಇಟ್ಟ ಬಳಿಕ, ದೇಶದ ಹೆಸರನ್ನು ‘ಭಾರತ’ ಎಂದು ಕರೆಯಬೇಕು ಎಂಬ ಕೂಗು ಬಲವಾಗಿತ್ತು. ಆದರೆ ಬಿಜೆಪಿ ಹಾಗೂ ಅದರ ಪೋಷಕ ಸಂಸ್ಥೆ ಆರೆಸ್ಸೆಸ್ ಬಹಳ ಹಿಂದಿನಿಂದಲೂ ರಾಷ್ಟ್ರದ ಹೆಸರು ಬದಲಾವಣೆಗೆ ಒತ್ತಾಯಿಸುತ್ತಿದ್ದವು. ಹೀಗಾಗಿ ಈ ಅಭಿಪ್ರಾಯ ಹೊಸದೇನಲ್ಲ.

ಇಂಡಿಯಾ’ದಿಂದ ‘ಭಾರತ’ಕ್ಕೆ ನಾಮ ಬದಲಾವಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ:
‘ಇಂಡಿಯಾ’ದಿಂದ ‘ಭಾರತ’ಕ್ಕೆ ನಾಮ ಬದಲಾವಣೆಗೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು 2016ರಲ್ಲಿ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಇಂತಹ ಅರ್ಜಿಗಳನ್ನು ಉತ್ತೇಜಿಸುವುದಿಲ್ಲ ಎಂದು ಆಗಿನ ಸಿಜೆಐ ಟಿಎಸ್ ಠಾಕೂರ್ ಮತ್ತು ನ್ಯಾ ಉದಯ್ ಲಲಿತ್ ಅವರು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಯಾವುದೋ ಒಂದು ರಾಜಕೀಯ ಪಕ್ಷದ ಅಭಿರುಚಿ ಅಥವಾ ಸೈದ್ಧಾಂತಿಕ ಒಲವುಗಳಿಗೆ ಅನುಗುಣವಾಗಿ ದೇಶದ ಹೆಸರನ್ನು ಬದಲಾಯಿಸಲಾಗದು; ಅದು ಆಡಳಿತದಲ್ಲಿ ಇರುವ ಪಕ್ಷವಾದರೂ ಸರಿʼ ಎಂದಿದ್ದರು.

ಹೊಸ ರಾಜ್ಯದ ಸೇರ್ಪಡೆ, ರಾಜ್ಯಸಭೆಗೆ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸೀಟುಗಳ ಹಂಚಿಕೆಯಂತಹ ಸಂವಿಧಾನದ ಕೆಲವು ವಿಧಿಗಳನ್ನು ಸರಳ ಬಹುಮತದಲ್ಲಿ ತಿದ್ದುಪಡಿ ತರಬಹುದಾಗಿದೆ. ಇಲ್ಲಿ ಹಾಜರಿರುವ ಒಟ್ಟಾರೆ ಸದಸ್ಯರು ಹಾಗೂ ತಿದ್ದುಪಡಿ ಕುರಿತಾದ ಮತದಾನದ ಶೇ 50ಕ್ಕಿಂತ ಹೆಚ್ಚು ಬಹುಮತದ ಇದ್ದರೆ ಸಾಕು.

ಭಾರತದೇಶಕ್ಕೆ ಎಷ್ಟು ಹೆಸರುಗಳಿವೆ?
ಭಾರತವು ಸಾವಿರಾರು ವರ್ಷಗಳ ನಾಗರೀಕತೆ ಜನಜೀವನ, ಸಂಸ್ಕೃತಿ, ಜೀವನಶೈಲಿ ಹಾಗೂ ಆಡಳಿತ ವ್ಯವಸ್ಥೆಗಳನ್ನು ಹೊಂದಿದ್ದು ಕಾಲಕಾಲಕ್ಕೆ ಹಲವಾರು ಕಾರಣಗಳಿಗಾಗಿ ವಿವಿಧ ಹೆಸರುಗಳನ್ನು ಕರೆಯಲಾಗಿದೆ. ಅವುಗಳೆಂದರೇ, ಭರತವರ್ಷ, ಭರತಖಂಡ, ಜಂಬೂದ್ವೀಪ, ಭಾರತ, ಹಿಂದುಸ್ಥಾನ, ಇಂಡಿಯಾ.

ಈ ಕುರಿತಂತೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇಂಡಿಯಾ ಅನ್ನೋದಕ್ಕೆ ಅರ್ಥವಿಲ್ಲ, ನಾವು ಭಾರತೀಯರು’ ಎಂದು ಅವರು ಹೆಸರು ಬದಲಾವಣೆ ವಿಚಾರವನ್ನು ಬೆಂಬಲಿಸಿದ್ದಾರೆ. ಅವರ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ. ‘ಕಂಗನಾ ಬಿಜೆಪಿ ಬೆಂಬಲಿಗರು ಅನ್ನೋದು ಗೊತ್ತಿದೆ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಹೆಸರಿನಲ್ಲಿ (ಇಂಡಿಯಾ) ಪ್ರೀತಿಸಲು ಏನಿದೆ? ಮೊದಲನೆಯದಾಗಿ ಅವರಿಗೆ (ಬ್ರಿಟಿಷರಿಗೆ) ಸಿಂಧು ಎಂಬುದನ್ನು ಉಚ್ಚರಿಸಲು ಬರುತ್ತಿರಲಿಲ್ಲ. ಹೀಗಾಗಿ, ಇಂಡಸ್ ಎಂದು ಕರೆದರು. ಆ ಬಳಿಕ ಕೆಲವರು ಹಿಂದೋಸ್ ಎಂದರೆ, ಇನ್ನೂ ಕೆಲವರು ಇಂಡೋಸ್ ಎಂದರು. ಕೊನೆಗೆ ಇಂಡಿಯಾ ಎಂದು ಮಾಡಿದರು. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ರಾಜ್ಯಗಳು ಭಾರತ ಎಂಬ ಒಂದು ಖಂಡದ ಅಡಿಯಲ್ಲಿ ಬಂದವು. ಆದರೆ ಅವರು (ಬ್ರಿಟಿಷರು) ನಮ್ಮನ್ನು ಇಂದೂ, ಸಿಂಧು ಎಂದು ಕರೆದಿದ್ದು ಏಕೆ’. ಭಾರತ ಎಂಬ ಹೆಸರು ಎಷ್ಟು ಅರ್ಥಪೂರ್ಣವಾಗಿದೆ. ಆದರೆ ಇಂಡಿಯಾ ಎಂಬುದರ ಅರ್ಥವೇನು? ಎಂಬುದಾಗಿ ಕಂಗನಾ ಪ್ರಶ್ನೆ ಮಾಡಿದ್ದರು.

ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಈ ಕುರಿತು ಸ್ಪಷ್ಟನೆ ನೀಡಿದ್ದು, ದೇಶದ ಹೆಸರನ್ನು ‘ಭಾರತ’ ಎಂದು ಅಧಿಕೃತಗೊಳಿಸಿ, ಸಂವಿಧಾನದಿಂದ ‘ಇಂಡಿಯಾ’ ಪದವನ್ನು ಕೈಬಿಡುವ ಯಾವುದೇ ಉದ್ದೇಶವಿಲ್ಲ. ಈ ಕುರಿತು ಬಂದ ವರದಿಗಳು ಕೇವಲ ಊಹಾಪೋಹ ವಷ್ಟೇ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಬದಲಾಯಿಸಲಾಗುವುದಿಲ್ಲ. ನಾನು ಭಾರತ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಇಂಡಿಯಾ ಮತ್ತು ಭಾರತ ಎರಡನ್ನೂ ಜಿ20ಯಲ್ಲಿ ಬರೆಯಲಾಗಿದೆ ಎಂದಿದ್ದರು.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದು,  ಇಂಡಿಯಾವು ತನ್ನ ದಾಖಲೆಗಳಲ್ಲಿ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿದರೆ ವಿಶ್ವಸಂಸ್ಥೆಯು ಕೂಡ ತನ್ನ ದಾಖಲೆಗಳಲ್ಲಿ ಇಂಡಿಯಾದ ಹೆಸರನ್ನು ಭಾರತ್ ಎಂದು ಬದಲಾಯಿಸಲಿದೆ. ಅದಕ್ಕೆ ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಮುಖ್ಯ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ಒಂದು ವೇಳೆ ಹೆಸರು ಬದಲಾವಣೆಯಾದರೆ ಹೆಸರು ಬದಲಾವಣೆ ಮಾಡಿದ ಮೊದಲ ದೇಶ ಭಾರತವಾಗುವುದಿಲ್ಲ. ರಾಜಕೀಯ, ಸಾಮಾಜಿಕ ಅಥವಾ ಇತರ ಕಾರಣಗಳಿಗೆ ರಾಷ್ಟ್ರದ ಹೆಸರನ್ನು ಬದಲಾಯಿಸಿದ ದೇಶಗಳ ದೊಡ್ಡ ಪಟ್ಟಿ ಇದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಟರ್ಕಿ ತನ್ನ ಹೆಸರನ್ನು ಟರ್ಕಿಯೆ ಎಂದು ಬದಲಾಯಿಸಿದ ಉದಾಹರಣೆಯನ್ನು ಡುಜಾರಿಕ್‌ ಉಲ್ಲೇಖಿಸಿದ್ದು, ಇಂತಹ ಹಲವು ಘಟನೆಗಳು ನಡೆದಿದೆ ಎಂದು ಹೇಳಿದ್ದಾರೆ.

‘ಭಾರತ’ ಎಂಬ ಪದವೂ ಈ ದೇಶವನ್ನು ಪೂರ್ತಿಯಾಗಿ ಪ್ರತಿನಿಧಿಸುವುದಿಲ್ಲ ಎಂದು ಕೆಲವರು ಭಾವಿಸುವ ಅಪಾಯ ಇದೆ; ಏಕೆಂದರೆ, ಆ ಪದವು ದೇಶದ ಉತ್ತರ ಭಾಗದ ಒಂದು ರಾಜವಂಶದ ಜೊತೆ ಬೆಸೆದುಕೊಂಡಿದೆ ಎಂದು ಕೆಲವರು ಭಾವಿಸಬಹುದು. ಹಿಂದೂ, ಹಿಂದಿ ಪದಗಳ ಬೇರುಗಳು ಕೂಡ ಪರ್ಷಿಯಾದಲ್ಲಿವೆ. ರಾಜಕೀಯ ಸನ್ನಿವೇಶವು ವಿಷಮಗೊಂಡಿರುವ ಹೊತ್ತಿನಲ್ಲಿ, ‘ಭಾರತ’ ಪದಕ್ಕೆ ಹೆಚ್ಚಿನ ಆದ್ಯತೆ ನೀಡುವುದು, ‘ಇಂಡಿಯಾ’ ಪದವನ್ನು ಕೈಬಿಡುವುದನ್ನು ಸಿದ್ಧಾಂತವೊಂದರ ಹೇರಿಕೆ ಎಂಬಂತೆ ಕಾಣಬಹುದು.

ಸದ್ಯ ವಿವಿಧ ಕಾರಣಗಳಿಂದ ಕೇಂದ್ರ ಸರ್ಕಾರ ಇಂಡಿಯಾ ಹೆಸರಿನ ಬದಲಿಗೆ ಭಾರತ ಎಂದು ಮರುನಾಮಕರಣ ಮಾಡಲು ನಿರ್ಧಾರ ಮಾಡಿದೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವನ್ನ ಪಡೆದುಕೊಳ್ಳಲಿದೆ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
46114
Ashitha s

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು