News Karnataka Kannada
Friday, May 17 2024
ಸಂಪಾದಕೀಯ

ಹೆಣ್ಣು ಸಮಾಜದ ಕಣ್ಣು ಅಂತಾರೆ ಮಣಿಪುರದಲ್ಲಿ ಮನುಕುಲವೇ ‘ಕಣ್ಣು’ ಮುಚ್ಚಿದೆ

manipur violence
Photo Credit : By Author

ಹೆಣ್ಣು ಸಮಾಜದ ಕಣ್ಣು ಎನ್ನುವ ಮಾತಿದೆ. ಆದರೆ ಅನಾದಿ ಕಾಲದಿಂದಲೂ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಲೇ ಇದೆ. ಹೆಣ್ಣನ್ನು ದೇವತೆಯೆಂದು ಪೂಜಿಸುವ‌ ಸಂಸ್ಕ್ರತಿ ಅನ್ನೋ ಮಾತು ಕೇವಲ ಪದಗಳಿಗಷ್ಟೇ ಸೀಮಿತವಾಗಿದೆ. ಆರ್ಥಿಕತೆ ಮತ್ತು ವಿಜ್ಞಾನದಲ್ಲಿ ಭಾರತ ಎಷ್ಟೇ ಮುಂದುವರಿದಿದ್ದರೂ, ಮಹಿಳಾ ಸುರಕ್ಷತೆಯಲ್ಲಿ ವಿಶ್ವದ ಮುಂದೆ‌ ಶೂನ್ಯ. ಮಹಿಳೆಯರ ಮೇಲಿನ ಲೈಂಗಿಕ ಅಪರಾಧದಲ್ಲಿ ದೊಡ್ಡ ಪೆಟ್ಟು ಕೊಟ್ಟದ್ದು 2012ರಲ್ಲಿ ದೆಹಲಿಯ ನಿರ್ಭಯಾ ಕೇಸ್. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ.

ಸುಮಾರು 2.42ಲಕ್ಷ ಅತ್ಯಾಚಾರ ಪ್ರಕರಣಗಳು ನಿರ್ಭಯಾ ಸಾಮೂಹಿಕ ಅತ್ಯಾಚಾರದ ನಂತರ ದಾಖಲಾದ ವರದಿಯಾಗಿದೆ. ಎನ್‌ಸಿಆರ್‌ಬಿ ವರದಿ ಪ್ರಕಾರ ದೇಶದಲ್ಲಿ ಶೇ. 30.9ರಷ್ಟು ಮಹಿಳೆಯರು ತಮ್ಮ ಆಪ್ತ ವಲಯದಲ್ಲಿಯೇ ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಇನ್ನು ಇತ್ತೀಚೆಗೆ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೆ ಇಡೀ ರಾಷ್ಟ್ರವೇ ಬೆಚ್ಚಿ ಬಿದ್ದಿದೆ. ಇದರ ವಿರುದ್ಧ ಹಲವು ನಾಯಕರು ಧ್ವನಿ ಎತ್ತಿದ್ದಾರೆ.

ಯಾರು ಈ ಮೈಟೆಯಿ, ಕುಕಿಗಳು: ಮಣಿಪುರದ ಎರಡು ದೊಡ್ಡ ಗುಂಪುಗಳಾದ ಬಹುಸಂಖ್ಯಾತ ಮೈಟೆಯಿ ಮತ್ತು ಅಲ್ಪಸಂಖ್ಯಾತ ಕುಕಿ ಜನರ ನಡುವೆ ಅಂತರ್ಯುದ್ಧ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಭಾರತದ ಸಣ್ಣ ರಾಜ್ಯವಾದ ಮಣಿಪುರದಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದ್ದು ಉರಿಯುತ್ತಿರುವ ಕಿಚ್ಚಿಗೆ ಮತ್ತಷ್ಟು ತುಪ್ಪ ಸುರಿದಿದೆ. ಈ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ಆಗಾಗ್ಗೆ ಹಿಂಸಾಚಾರಗಳು ನಡೆಯುತ್ತಲೇ ಇದ್ದು ಮೈಟೆಯಿ ಜನಾಂಗಕ್ಕೆ ಸೇರಿದ ಪುರುಷರಿಬ್ಬರು ಕುಕಿ ಜನಾಂಗಕ್ಕೆ ಸೇರಿದ ಮಹಿಳೆಯರನ್ನು ಬೆತ್ತಲೇ ಮೆರವಣಿಗೆ ಮಾಡಿದ ಹೃದಯ ಹಿಂಡುವ ಅಮಾನವೀಯ ಘಟನೆ ಮೇ ತಿಂಗಳಲ್ಲಿ ನಡೆದಿದ್ದು ಇದೀಗ ಘಟನೆಯ ವಿಡಿಯೋ ದೇಶಾದ್ಯಂತ ಪ್ರತಿಭಟನೆ ಹಾಗೂ ಮೆರವಣಿಗೆಗೆ ಕಾರಣವಾಗಿದೆ. ಗುಡ್ಡಗಾಡು ಈಶಾನ್ಯ ಭಾರತೀಯ ರಾಜ್ಯವು ಬಾಂಗ್ಲಾದೇಶದ ಪೂರ್ವದಲ್ಲಿದೆ ಮತ್ತು ಮ್ಯಾನ್ಮಾರ್ ಗಡಿಯಲ್ಲಿದೆ. ಇಲ್ಲಿ ಅಂದಾಜು 3.3 ಮಿಲಿಯನ್ ಜನರು ವಾಸವಾಗಿದ್ದಾರೆ.

ಇಲ್ಲಿ ವಾಸಿಸುತ್ತಿರುವವರು ಅರ್ಧಕ್ಕಿಂತ ಹೆಚ್ಚು ಮೈಟೆಯಿ, ಆದರೆ ಸುಮಾರು 43% ಕುಕಿಗಳು ಮತ್ತು ನಾಗಾಗಳು, ಪ್ರಧಾನ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗದವರಾಗಿದ್ದಾರೆ. ಮೈಟೆಯಿ ಜನಾಂಗಕ್ಕೆ ನೀಡಿದ ಅದೇ ಸ್ಥಾನಮಾನಗಳನ್ನು ಕುಕಿ ಜನಾಂಗಕ್ಕೆ ನೀಡಬೇಕೆಂಬ ಬೇಡಿಕೆಗಳ ವಿರುದ್ಧ ಪ್ರತಿಭಟನೆ ಆರಂಭವಾದಾಗಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೈಟೆಯಿ, ಕುಕಿ ಹಾಗೂ ನಾಗಾ ಸೇನಾಪಡೆಗಳು ತಾಯ್ನಾಡಿನ ಬೇಡಿಕೆಗಳು ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ಮೇಲೆ ದಶಕಗಳಿಂದ ಪರಸ್ಪರ ಹೋರಾಡುತ್ತಿವೆ ಮತ್ತು ಎಲ್ಲಾ ಕಡೆಯು ಭಾರತದ ಭದ್ರತಾ ಪಡೆಗಳೊಂದಿಗೆ ಘರ್ಷಣೆಯನ್ನು ನಡೆಸಿದೆ. ಆದರೆ ಇತ್ತೀಚಿನ ಕದನವು ಪ್ರಸ್ತುತ ಮೈಟೆಯಿ ಹಾಗೂ ಕುಕಿ ಜನಾಂಗದ ನಡುವೆ ಏರ್ಪಟ್ಟಿದೆ.
ಮಣಿಪುರ, ಮ್ಯಾನ್ಮಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಮೈಟೆಯಿ ಜನಾಂಗದವರು ನೆಲೆನಿಂತಿದ್ದಾರೆ. ಜನಾಂಗದಲ್ಲಿ ಬಹುಪಾಲು ಹಿಂದೂಗಳು ಆದರೆ ಕೆಲವರು ಸನಾಮಹಿ ಧರ್ಮವನ್ನು ಅನುಸರಿಸುತ್ತಾರೆ. ಕುಕಿಗಳು, ಹೆಚ್ಚಾಗಿ ಕ್ರಿಶ್ಚಿಯನ್ನರು, ಭಾರತದ ಈಶಾನ್ಯ ಭಾಗದಾದ್ಯಂತ ವಿಸ್ತರಿಸಿದ್ದಾರೆ.

150 ಮಂದಿ ಬಲಿ: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನು ಸಂಘರ್ಷದ ಹಿಂಸಾಚಾರದ ಸಾಧನಗಳಾಗಿ ಬಳಸಲಾಗುತ್ತಿದೆ ಎಂಬುದಕ್ಕೆ ವೀಡಿಯೊ ಇತ್ತೀಚಿನ ಉದಾಹರಣೆಯಾಗಿದೆ ಎಂಬುದು ವರದಿಯಾಗಿದೆ ಅಂತೆಯೇ ಸೇಡಿನ ದಾಳಿಯಾಗಿಯೇ ಈ ಘಟನೆ ಕಂಡಬಂದಿದೆ ಎಂಬುದು ತಿಳಿದುಬಂದಿದೆ. ಈ ಸಂಘರ್ಷದಲ್ಲಿ ಸುಮಾರು 150 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

ಇತ್ತ ಸ್ಥಳೀಯ ಮಾಧ್ಯಮಗಳು, ಮೇ ತಿಂಗಳಲ್ಲಿ ನಡೆದ ದಾಳಿಗೆ ಕುಮ್ಮಕ್ಕು ನೀಡಿರುವುದು ಒಂದು ಸುಳ್ಳು ಘಟನೆಯಾಗಿದೆ ವರದಿ ಮಾಡಿದೆ. ಕುಕಿ ಜನಾಂಗಕ್ಕೆ ಸೇರಿದ ಮಿಲಿಟರಿ ವ್ಯಕ್ತಿಗಳು ಮೈಟೆಯಿ ಜನಾಂಗದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಕುಕಿ ಬುಡಕಟ್ಟು ಜನಾಂಗದ ಮಹಿಳೆಯ ಮೇಲೆ ಮೈಟೆಯಿ ಜನಾಂಗದ ಪುರುಷರು ಸೇಡು ತೀರಿಸಿಕೊಳ್ಳಲು ಮುಂದಾದರು ಎಂದು ತಿಳಿಸಿದೆ.
ಆದರೆ ಮತ್ತೊಂದು ಕಡೆ ಈ ಘಟನೆಗೆ ಸುಳ್ಳು ಸುದ್ದಿ ಕಾರಣವಲ್ಲ. ಹಳ್ಳಿಗಳನ್ನು ಸುಟ್ಟ, ಮಹಿಳೆಯರನ್ನು ಅತ್ಯಾಚಾರ ಮಾಡಿದ ಯಾವುದೇ ವಿಡಿಯೋ ಇರಲಿಲ್ಲ. ಜನರು ಗುಂಪು ಆ ಕ್ಷಣಕ್ಕೆ ಕೃತ್ಯ ಎಸಗಿದೆ ಎಂದು ಕೆಲವು ಅಧಿಕಾರಿಗಳು ಪೊಲೀಸರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. “ದಾಳಿಕೋರರು ಮೇ 3ರ ರಾತ್ರಿಯಿಂದ ಈ ಭಾಗದ 9 ಗ್ರಾಮಗಳ ಮೇಲೆ ದಾಳಿ ನಡೆಸಿದ್ದರು. ಮರುದಿನವೇ ಈ ಬೆತ್ತಲೆ ಮೆರವಣಿಗೆ ಘಟನೆ ನಡೆದಿದೆ” ಎಂದು ಭದ್ರತಾ ಮೂಲಗಳು ಮಾಹಿತಿ ನೀಡುತ್ತವೆ.

ಈ ಎಲ್ಲದರ ನಡುವೆ ಈ ಭಯಾನಕ ಘಟನೆಗೆ ಸುಳ್ಳು ಸುದ್ದಿಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಫೇಕ್ ನ್ಯೂಸ್‌ನಿಂದ ಉದ್ರಿಕ್ತರಾದ ಗುಂಪು, ತಮ್ಮ ಕೈಗೆ ಸಿಕ್ಕ ಇಬ್ಬರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದೆ ಎನ್ನಲಾಗಿದೆ. ದಿಲ್ಲಿಯಲ್ಲಿ ನಡೆದ ಅತ್ಯಾಚಾರ ಘಟನೆಯೊಂದು ಮಣಿಪುರದಲ್ಲಿ ನಡೆದ ಅತ್ಯಾಚಾರ ಎಂದು ಸುದ್ದಿ ಹರಡಲಾಗಿತ್ತು. ಈ ಸುಳ್ಳು ಸುದ್ದಿಯು ಕೆಲವು ದುಷ್ಕರ್ಮಿಗಳನ್ನು ಕೆರಳಿಸಿದ್ದು, ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಈ ಮಹಿಳೆಯರನ್ನು ಬಲಿಪಶುಗಳನ್ನಾಗಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿದೇಶಿ ಕೈವಾಡದ ಸಂಚು: ಇದೆಲ್ಲದರ ನಡುವೆ, ಹಿಂಸಾಚಾರ ಪೀಡಿತ ಮಣಿಪುರದಲ್ಲಿ ವಿದೇಶಿ ಶಕ್ತಿಗಳ ಕೈವಾಡವನ್ನು ತಳ್ಳಿಹಾಕಲಾಗುವುದಿಲ್ಲ. ಏಕೆಂದರೆ ಈಶಾನ್ಯ ರಾಜ್ಯದಲ್ಲಿ ವಿವಿಧ ದಂಗೆಕೋರ ಗುಂಪುಗಳಿಗೆ ಚೀನಾ ನೆರವು ನೀಡುತ್ತಿದೆ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.

ರಾಜಕೀಯ ಮೇಲಾಟ: ಇಂತಹ ಹೀನ ಕೃತ್ಯ ನಡೆದರು ಸಹ ಇಲ್ಲಿಯೂ ರಾಜಕೀಯದ ಕೇಸರಾಟ ಶುರುವಾಗಿತ್ತು. ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಅಧಿಕಾರದ ಅಮಲು ತಾಂಡವಾಡಲು ಶುರುವಾಯ್ತು. ಒಂದು ಕಡೆ ಬಿಜೆಪಿ ಪಕ್ಷವು ಮಣಿಪುರದಲ್ಲಿ ಮೈಟೆಯಿ ಜನಾಂಗಕ್ಕೆ ಸೇರಿದ ಎನ್ ಬಿರೇನ್ ಸಿಂಗ್ ನೇತೃತ್ವದ ರಾಜ್ಯ ಸರ್ಕಾರವನ್ನು ನಡೆಸುತ್ತಿದೆ. ಹೀಗಾಗಿ ಪ್ರತಿಪಕ್ಷಗಳು ನೇರವಾಗಿ ಬಿಜೆಪಿಯೇ ಈ ಕೃತ್ಯಕ್ಕೆ ನೇರ ಕಾರಣ ಎಂದು ಬಿಂಬಿಸಲು ಆರಂಭಿಸಿ, ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿತು. ಇತ್ತ ಪ್ರತಿ ಪಕ್ಷಗಳೇ ಇದನ್ನು ಮಾಡುಸುತ್ತಿವೆ ಎಂದು ಬಿಜೆಪಿ ಟೀಕಿಸಲು ಆರಂಭಿಸಿತ್ತು. ಒಟ್ಟು ಜನಸಂಖ್ಯೆಯ 53% ರ ಹೊರತಾಗಿಯೂ ಪ್ರಾದೇಶಿಕ ಸಂಸತ್ತಿನ 60 ಸ್ಥಾನಗಳಲ್ಲಿ 40 ಸ್ಥಾನಗಳನ್ನು ಮೈಟೆಯಿ ನಿಯಂತ್ರಿಸುತ್ತದೆ. ಇತ್ತ ಮಣಿಪುರ ವಿಚಾರವಾಗಿ ಸಂಸತ್ತಿನಲ್ಲಿ ನರೇಂದ್ರ ಮೋದಿಯವರ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷದ ನಾಯಕರು ಒತ್ತಡ ಹೇರಿದೆ.

ಕೊನೆಯಾದಾಗಿ, ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಬಗ್ಗೆ ವಿವರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಘರ್ಷಣೆಯಲ್ಲಿ ಸ್ಥಳಾಂತರಗೊಂಡವರ ತನಿಖೆ ಮತ್ತು ಪುನರ್ವಸತಿಗಾಗಿ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಸಹ ಅದು ಕೇಳಿದೆ. ಬೆತ್ತಲೆಯಾಗಿ ಪರೇಡ್ ಮಾಡಿರುವ ವಿಡಿಯೋವನ್ನು ಭಯಾನಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44583
ಆಶಿತಾ ಎಸ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು