News Karnataka Kannada
Saturday, April 27 2024
ನುಡಿಚಿತ್ರ

ಕ್ರೈಸ್ತ ಯೇಸು ಜನನ – ಕ್ರಿಸ್ಮಸ್ ದಿನಾಚರಣೆ

Christmas
Photo Credit : By Author

ಚಳಿಗಾಲದ ಡಿಸೆಂಬರ್ ತಿಂಗಳ ಆಗಮನದೊಡನೆ ಕ್ರೈಸ್ತರ ಮನೆಗಳು, ದೇವಾಲಯಗಳು, ಅಂಗಡಿಗಳು ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಹಾಗೂ ‘ಕ್ರಿಸ್ಮಸ್ ನಕ್ಷತ್ರ’ಗಳಿಂದ ಅಲಂಕೃತವಾಗುವುದನ್ನು ಕಾಣಬಹುದು, ಹೌದು, ಇದು ಕ್ರಿಸ್ಮಸ್ ಹಬ್ಬದ ಬಾಹ್ಯರೂಪದ ಸಡಗರ, ಪ್ರಪಂಚದಾದ್ಯಂತ ಎಲ್ಲಾ ಕ್ರೈಸ್ತ ಭಾಂಧವರಿಗೆ ಕ್ರಿಸ್ಮಸ್ ಅಥವಾ ಕ್ರಿಸ್ತ ಜಯಂತಿ ಎಂಬುದು ದೇವರಿಗೆ ಮಾನವರಲ್ಲಿರುವ ಪ್ರೀತಿಯ ಆಗಾಧತೆಯನ್ನು ತಿಳಿಯಪಡಿಸುವ ಹಬ್ಬ. ಕ್ರಿಸ್ಮಸ್ ಎಂಬುದು ಲೋಕದ ಸೃಷ್ಟಿಕರ್ತನಾದ ದೇವರು ಮನುಷ್ಯನ ರಕ್ಷಣೆಗಾಗಿ ತನ್ನನ್ನು ತಾನೇ ಬರಿದು ಮಾಡಿಕೊಂಡು ಸಾಮಾನ್ಯ ಮನುಷ್ಯನ ರೂಪದಲ್ಲಿ ಈ ಭೂಲೋಕದಲ್ಲಿ ಅವತಾರ ತಾಳಿದ ಪುಣ್ಯದಿನ

ಕ್ರೈಸ್ತ ಧರ್ಮಗ್ರಂಥ ಬೈಬಲ್ ಪ್ರಕಾರ, ಸುಮಾರು 2000 ವರ್ಷಗಳ ಹಿಂದೆ, ಇಸ್ರೇಲ್ ದೇಶದ ಬೆತ್ತೆಹೆಮ್ ಎಂಬಲ್ಲಿ ಯೇಸುಸ್ವಾಮಿಯ ಜನನವಾಯಿತು. ಅಂದೊಂದು ದಿನ ಮರಿಯಳು ತನ್ನ ದಿನನಿತ್ಯದ ಕಾರ್ಯಗಳಲ್ಲಿ ನಿರತಳಾಗಿದ್ದಾಗ, ಹಟಾತ್ತನೆ ದೇವದೂತನೊಬ್ಬನು ಕಾಣಿಸಿಕೊಂಡು ‘ಮರಿಯಳೇ, ನಿನಗೆ ಶುಭವಾಗಲಿ. ದೇವರು ನಿನ್ನೊಡನೆ ಇದ್ದಾರೆ. ಇಗೋ ನೀನು ಗರ್ಭವತಿಯಾಗಿ ಒಂದು ಗಂಡುಮಗುವನ್ನು ಹೆರುವೆ. ಆತನಿಗೆ ನೀನು ‘ಯೇಸು’ ಎಂದು ಹೆಸರಿಡಬೇಕು. ಆತನು ಮಹಾಪುರುಷನಾಗುವನು, ಪರಾತ್ಪರ ದೇವರ ಪುತ್ರ ಎನ್ನಿಸಿಕೊಳ್ಳುವನು. ಯಕೋಬನ ವಂಶವನ್ನು ಸದಾಕಾಲ ಆಳುವನು. ಆತನ ಆಳ್ವಿಕೆಗೆ ಅಂತ್ಯವಿರದು’ ಎಂದನು. ಇದನ್ನು ಕೇಳಿ ಭಯಗೊಂಡ ಮರಿಯಳು, ಪುರುಷನ ಸಂಪರ್ಕವಿಲ್ಲದ ತಾನು ಹೇಗೆ ಗರ್ಭವತಿಯಾಗಲು ಸಾಧ್ಯವೆಂದು ತಬ್ಬಿಬ್ಬಾಗುತ್ತಾಳೆ. ಆಗ ಆ ದೂತನು ‘ಪವಿತ್ರಾತ್ಮರು ನಿನ್ನ ಮೇಲೆ ಬರುವರು. ಆತನ ಶಕ್ತಿ ನಿನ್ನನ್ನಾವರಿಸುವುದು, ಆದ್ದರಿಂದಲೇ ಹುಟ್ಟಲಿರುವ ಮಗುವು ದೇವರ ಪುತ್ರನೆನಿಸಿಕೊಳ್ಳುವನು’ ಎಂದು ಹೇಳಿ ಅದೃಶ್ಯನಾಗುವನು. ದೇವದೂತರ ಮಾತಿನಂತೆ ಕನೈಯಾದ ಮರಿಯಳು ಗರ್ಭವತಿಯಾಗಿ ಒಂದು ಗಂಡು ಮಗುವಿಗೆ ಜನ್ಮವೀಯುತ್ತಾಳೆ. ಹೀಗೆ ದೇವರ ವಿಶೇಷವಾದ ಮಧ್ಯಸ್ಥಿಕೆಯಿಂದ ಜನಿಸಿದ ಮಗುವೇ ‘ಯೇಸುಕ್ರಿಸ್ತ.

ಆತನ ಜನ್ಮದಿನಾಚರಣೆಯೇ ಇಂದು ಪ್ರಪಂಚದಾದ್ಯಂತ ಆಚರಿಸಲ್ಪಡುವ ಕ್ರಿಸ್ಮಸ್ ಹಬ್ಬ. ಆದರೆ ಇಲ್ಲಿ ಒಂದು ವಿರೋಧಾಭಾಸದ ವಿಷಯ ಎಂದರೆ ಈ ದೇವರ ಪತ್ರ ಹುಟ್ಟಿದ್ದು ರಾಜಮಹಾರಾಜರ ಅರಮನೆ, ಬಂಗಲೆಗಳಲ್ಲಿ ಅಲ್ಲ… ದನಕರುಗಳಿರುವ ಗೋದಲಿಯಲ್ಲಿ, ಈತನನ್ನು ಮೊತ್ತಮೊದಲು ಕಾಣುವ ಭಾಗ್ಯ ದೊರೆತದ್ದು ಚಕ್ರವರ್ತಿಗಳಂತಹ ಪ್ರಭಾವಿ ವ್ಯಕ್ತಿಗಳಿಗಲ್ಲ, ಬದಲಾಗಿ ಕುರಿಗಳನ್ನು ಕಾಯುತ್ತಿರುವ ಬಡ ಕುರಿಗಾಹಿಗಳಿಗೆ, ಹೀಗೆ ನಮ್ಮ ಮನಸ್ಸಿಗೂ ಊಹೆಗೂ ನಿಲುಕದ ರೀತಿಯಲ್ಲಿ ದೇವರ ಮನುಷ್ಯಾವತಾರದ ಕಥೆ ಅನಾವರಣಗೊಳ್ಳುತ್ತದೆ.

ಕ್ರಿಸ್ತ ಜನನದ ಈ ಕಥೆಯು ಸುಮಾರು 3ನೇ ಶತಮಾನದವರೆಗೂ ಒಂದು ಹಬ್ಬದ ಸ್ವರೂಪವನ್ನು ಪಡೆದಿರಲಿಲ್ಲ. ಕ್ರಿ.ಶ. 3ನೇ ಶತಮಾನದ ಕಾಲಘಟ್ಟದಲ್ಲಿ ಯುರೋಪಿನ ಹೆಚ್ಚಿನ ಭೂಭಾಗಗಳು ರೋಮನ್ ಚಕ್ರವರ್ತಿಯ ಕೈಕೆಳಗೆ ಬಂದಿದ್ದವು. ಈ ಪುರಾತನ ರೋಮನ್ ಜನಾಂಗದವರು ಬಹುದೇವತಾ ವಿಶ್ವಾಸಿಗಳಾಗಿದ್ದರು. ಅವರು ಪ್ರತಿವರ್ಷ ಡಿಸೆಂಬರ್ ತಿಂಗಳ ಮಧ್ಯಭಾಗದಿಂದ ಜನವರಿ ತಿಂಗಳ ಆರಂಭದ ವರೆಗೆ “ಸಟರ್ನೇಲಿಯಾ ಎಂಬ ಹಬ್ಬವನ್ನು ಆಚರಿಸುತ್ತಿದ್ದರು. ಈ ‘ಸೆಟರ್ನೇಲಿಯಾ” ಹಬ್ಬವು ಪುರಾತನ ರೋಮನ್ ಶನಿದೇವರನ್ನು ಗೌರವಿಸಿ ಆರಾಧಿಸುವ ಹಬ್ಬವಾಗಿತ್ತು. ಈ ಹಬ್ಬದ ದಿನಗಳಂದು ತಮ್ಮ ತಮ್ಮ ಮನೆಗಳನ್ನು ಅಲಂಕರಿಸಿ, ಪರಸ್ಪರ ಸಿಹಿತಿಂಡಿಗಳನ್ನು ಹಂಚುತ್ತಿದ್ದರು. ಮರಗಿಡಗಳನ್ನು ಆಲಂಕರಿಸಿ ಅವುಗಳಲ್ಲಿ ಮೇಣದ ಬತ್ತಿಗಳನ್ನಿಟ್ಟು ಬೆಳಗಿಸುತ್ತಿದ್ದರು. ಸುಮಾರು ಈ ಕಾಲದಲ್ಲಿಯೇ ಆಗಿನ ರೋಮನ್ ಚಕ್ರವರ್ತಿಯಾಗಿದ್ದ ‘ಕೋನ್ ಸ್ಟೆಂಟೈನ್’ ಎಂಬುವವನು ಕ್ರೈಸ್ತಮತಕ್ಕೆ ಮತಾಂತರಗೊಂಡನು, ತನ್ನ ರೋಮನ್ ಜನರು ‘ಸೆಟರ್ನೇಲಿಯಾ’ ಎಂಬ ಹಬ್ಬವನ್ನು ಡಿಸೆಂಬರ್ ತಿಂಗಳಿನಲ್ಲಿ ಆಚರಿಸುತ್ತಿದ್ದಂತೆ ಹೊಸದಾಗಿ ಕ್ರೈಸ್ತಮತಕ್ಕೆ ಮತಾಂತರಗೊಂಡ ಜನರೂ ಈ ಸಂದರ್ಭದಲ್ಲಿ ಒಂದು ‘ಕ್ರೈಸ್ತಹಬ್ಬ’ವನ್ನು ಆಚರಿಸಬೇಕೆಂದುಕೊಂಡನು. ಹಾಗೆ ಡಿಸೆಂಬರ್ 25ರಂದು ಕ್ರಿಸಸ್ ಎಂದು ಘೋಷಿಸಿ ಅದನ್ನು ಆಚರಿಸಲಾರಂಭಿಸಿದರು.

‘ಕ್ರಿಸ್ಮಸ್ ಟ್ರೀ’ ಅಥವಾ ‘ಕ್ರಿಸ್ಮಸ್ ಮರ’ ಹಬ್ಬದ ಇನ್ನೊಂದು ಆಕರ್ಷಣೆಯಾಗಿದೆ. ಇದರ ಚರಿತ್ರೆ ಕೂಡಾ ತುಂಬಾ ಕುತೂಹಲಕಾರಿಯಾಗಿದೆ. ಸುಮಾರು ಕ್ರಿ.ಶ. 7ನೇ ಶತಮಾನದಲ್ಲಿ ಸಂತ ಬೊನಿಫಾಸ್ ಎಂಬ ಪಾದ್ರಿಯು ಧರ್ಮಪ್ರಚಾರಕ್ಕೆಂದು ಜರ್ಮನಿಗೆ ತೆರಳಿದನು. ಜರ್ಮನಿಯ “ತುರಿಂಗಿಯಾ” ಎಂಬ ಊರಲ್ಲಿ ವಾಸ್ತವ್ಯ ಹೂಡಿ, ತನ್ನ ಧರ್ಮಪ್ರಚಾರ ಕಾರ್ಯವನ್ನು ಆರಂಭಿಸಿದನು. ಅಲ್ಲಿಯ ಜನರಿಗೆ ಕ್ರೈಸ್ತತತ್ವಗಳಲ್ಲಿ ಒಂದಾದ ‘ತ್ರಿಯೇಕತ್ವ ದೇವರು’ (ಪಿತ, ಸುತ ಮತ್ತು ಪವಿತ್ರಾತ್ಮ ದೇವರು) ಎಂಬ ವಿಷಯವನ್ನು ಅರ್ಥಮಾಡಿಸುವುದಕ್ಕಾಗಿ ತ್ರಿಕೋನಾಕೃತಿಯಲ್ಲಿರುವ ‘ಫಿರ್ ‘ಟೀ’ ಎಂದು ಕರೆಯಲ್ಪಡುವ ಮರವನ್ನು ಉಪಯೋಗಿಸಿದನು. ಕಾಲಕ್ರಮೇಣ ಅಲ್ಲಿಯ ಅನಕ್ಷರಸ್ಥ ಜನರು ಫಿ‌ ಮರವನ್ನು ‘ಪವಿತ್ರಮರ’ ಎಂದು ಕರೆಯಲು ಆರಂಭಿಸಿದರು. ಮುಂದೆ ಈ ಮರದ ರೆಂಬೆಗಳನ್ನು, ಸಣ್ಣಗಿಡಗಳನ್ನು ಕತ್ತರಿಸಿ ತಮ್ಮ ಮನೆಗಳ ಮುಂಭಾಗದಲ್ಲಿ ಅಲಂಕಾರಕ್ಕಾಗಿ ನೇತಾಡಿಸಲು ಆರಂಭಿಸಿದರು. ತಮ್ಮದು ಕ್ರೈಸ್ತಮತ ವಿಶ್ವಾಸಿಗಳ ಮನೆ ಎಂದು ತೋರಿಸಿಕೊಡುವುದು ಹೀಗೆ ನೇತಾಡಿಸಿದ್ದರ ಹಿಂದಿನ ಉದ್ದೇಶವಾಗಿತ್ತು. ಸುಮಾರು 16ನೇ ಶತಮಾನದಿಂದೀಚೆಗೆ ಫಿರ್ ಮರಗಳ ಬದಲು ಇತರೇ ಮರಗಿಡಗಳನ್ನು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಅಲಂಕರಿಸಲು ಬಳಸಲಾರಂಭಿಸಿದರು. ಇದೇ ಮುಂದಕ್ಕೆ ನಾವಿಂದು ಕಾಣುತ್ತಿರುವ ‘ಕ್ರಿಸ್ಮಸ್ ಮರ’ಕ್ಕೆ ನಾಂದಿಯಾಯಿತು. ಸಾಮಾನ್ಯವಾಗಿ ಕ್ರೈಸ್ತರ ಮನೆಗಳಲ್ಲಿ, ಕ್ರಿಸ್ಮಸ್ ಮರದ ಹತ್ತಿರದಲ್ಲೇ ಕ್ರಿಸ್ಮಸ್ ಗೋದಲಿ’ ಅಥವಾ ‘ಕ್ರಿಟ್’ನ್ನು ಕಾಣಬಹುದು. ಇದು ಯೇಸುಸ್ವಾಮಿ ಹುಟ್ಟಿದ ಗೋದಲಿ ಹಾಗೂ ಅಲ್ಲಿಯ ಸನ್ನಿವೇಶಗಳನ್ನು ಹೋಲುವಂತಹ ಪುಟ್ಟ ಮಾದರಿಯಾಗಿದೆ. ಇದರಲ್ಲಿ ಬಾಲಯೇಸು, ಯೇಸುವಿನ ತಾಯಿ, ದೇವದೂತರು, ಕೊಟ್ಟಿಗೆಯಲ್ಲಿರುವ ದನಕರುಗಳು, ಕುರಿಗಳು ಮುಂತಾದವುಗಳ ಸಣ್ಣ ಪ್ರತಿಕೃತಿಗಳನ್ನು ಇರಿಸುತ್ತಾರೆ. 12ನೇ ಶತಮಾನದಿಂದೀಚೆಗಷ್ಟೇ ಇಂತಹ ಗೋದಲಿ ತಯಾರಿಕೆಯ ಕಲ್ಪನೆ ಹುಟ್ಟಿಕೊಂಡಿತು. ಹೆಸರಾಂತ ಸಂತರಾದ ಫ್ರಾನ್ಸಿಸ್ ಅಸ್ಸಿಸ್ಸಿ ಯವರು 1223ನೇ ಇಸವಿಯಲ್ಲಿ ತಮ್ಮ ಸ್ನೇಹಿತರನ್ನು ಕರೆಸಿ, ತಮ್ಮ ಜೀವನದ ಕೊನೆಯ ಕ್ರಿಸ್ಮಸ್ ಹಬ್ಬವನ್ನು ವಿಶೇಷವಾದ ರೀತಿಯಲ್ಲಿ ಆಚರಿಸಲು ಇಷ್ಟಪಟ್ಟರು. ಕ್ರಿಸ್ಮಸ್ ಹಬ್ಬದ ಮುನ್ನಾ ದಿನದಂದು ತನ್ನ ಸ್ನೇಹಿತರ ಸಹಾಯದೊಂದಿಗೆ, ಇಟೆಲಿಯ “ಗ್ಯಾಸಿಯ’ ಎಂಬ ಊರಲ್ಲಿ, ಬೆತ್ತೆಹೆಮ್ ಮಾದರಿಯ ಗೋದಲಿಯನ್ನು ಹೋಲುವಂತಹ ಒಂದು ‘ಜೀವಂತ ಗೋದಲಿ’ಯನ್ನು ನಿರ್ಮಿಸಿದರು. ಸಾಕು ಪ್ರಾಣಿಗಳಾಗಿದ್ದ ದನಕರುಗಳು ಹಾಗೂ ಕುರಿಮರಿಗಳನ್ನು ಈ ಗೋದಲಿಯಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು. ಬಂದ ಜನರು ಈ ಗೋದಲಿಯನ್ನು ನೋಡಿ ಆಕರ್ಷಿತ ರಾದರು. ಬಹುಬೇಗನೆ ಇಂತಹ ಕ್ರಿಸ್ಮಸ್ ಗೋದಲಿಯ ತಯಾರಿಕೆಯ ಆಕರ್ಷಣೆ ಯುರೋಪ್ ಹಾಗೂ ಹತ್ತಿರದ ದೇಶಗಳಿಗೆ ಹಬ್ಬಿತು.

ಕ್ರಿಸ್ಮಸ್ ಸಂಭ್ರಮದಲ್ಲಿ ‘ಕ್ರಿಸ್ಮಸ್ ಅಜ್ಜ’ ಅಥವಾ ‘ಸಾಂತಾಕ್ಲೋಸ್’ ಇಲ್ಲದಿದ್ದರೆ, ಆ ಸಡಗರವೇ ಅಪೂರ್ಣವೆನಿಸುತ್ತದೆ. ದೊಡ್ಡ ಹೊಟ್ಟೆ, ಕೆಂಪು ಬಣ್ಣದ ಉದ್ದ ಟೋಪಿ, ಬಿಳಿಬಣ್ಣದ ವಯಸ್ಕರ ಗಡ್ಡವನ್ನು ಧರಿಸಿಕೊಂಡು ಜೋಳಿಗೆ ತುಂಬಾ ಮಿಠಾಯಿ ಸಿಹಿತಿಂಡಿಗಳನ್ನು ಹೊತ್ತುಕೊಂಡು ಬರುವ ಸಾಂತಾಕ್ಲೋಸ್‌ನನ್ನು ಕಂಡರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಈ ಸಾಂತಾಕ್ಲೋಸ್ ತನ್ನ ಜೋಳಿಗೆಯಿಂದ ಮಕ್ಕಳಿಗೆ ಸಿಹಿತಿಂಡಿ ಹಂಚುತ್ತಾ ಸಾಗುತ್ತಾನೆ. ಈ ಸಾಂತಾಕ್ಲೋಸ್ ಎಂಬುದು 4ನೇ ಶತಮಾನದಲ್ಲಿ ಜೀವಿಸುತ್ತಿದ್ದ ಬಿಷಪ್ ನಿಕೋಲಸ್ ರವರ ಅನುಕರಣಾ ಪಾತ್ರವಾಗಿದೆ. ಬಿಷಪ್ ನಿಕೋಲಸ್‌ರವರು ಈಗಿನ ಟರ್ಕಿಯ ‘ಸೈರ್ನಾ’ ಎಂಬಲ್ಲಿ ಜೀವಿಸುತ್ತಿದ್ದರು. ಅವರು ತುಂಬಾ ಶ್ರೀಮಂತರಾಗಿದ್ದರೂ ಉದಾರಿ ಹಾಗೂ ದೈವಭಕ್ತಿಯ ವ್ಯಕ್ತಿಯಾಗಿದ್ದರು. ಸಣ್ಣಮಕ್ಕಳಲ್ಲಿ ಅವರಿಗೆ ವಿಶೇಷವಾದ ಪ್ರೀತಿಯಿತ್ತು. ಆದ್ದರಿಂದಲೇ ರಾತ್ರಿ ಸಮಯದಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮನೆಗಳ ಎದುರು ಉಡುಗೊರೆಗಳನ್ನು ಇರಿಸಿ ಹೋಗುತ್ತಿದ್ದರು. ಈ ಕಥೆಯಿಂದಲೇ ಇಂದಿನ ಕ್ರಿಸ್ಮಸ್ ಅಜ್ಜ ಅವತಾರ ತಾಳಿದ್ದಾನೆ.
ಕ್ರಿಸ್ಮಸ್ ಆಚರಣೆಯು ಈ ಮೇಲೆ ಹೇಳಿದ ಬಾಹ್ಯ ಆಚರಣೆಗಳಿಗೆ ಮಾತ್ರ ಸೀಮಿತವಾಗಿರದೆ, ಯೇಸುಸ್ವಾಮಿಯ ಧೈಯಗಳನ್ನು, ತತ್ವಗಳನ್ನು ಧ್ಯಾನಿಸಿ ಆಚರಿಸುವಂತಾದರೆ ಮಾತ್ರ ಅದು ಅರ್ಥಪೂರ್ಣವೆನಿಸಿತು. ‘ನಿನ್ನನ್ನು ನೀನು ಪ್ರೀತಿಸಿದಂತೆ ನಿನ್ನ ನೆರೆಹೊರೆಯವರನ್ನು ನೀನು ಪ್ರೀತಿಸು’ ಎಂದು ಹೇಳಿದ ಯೇಸುವಿನ ಪ್ರೀತಿ, ತ್ಯಾಗ, ಸಹನೆ ಇಂದಿನ ಪೀಳಿಗೆಗೆ ಆದರ್ಶವಾಗಬೇಕು. ಈ ಮೌಲ್ಯಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಮ್ಮ ಗುರಿಯಾಗಬೇಕು. ಹಾಗಿದ್ದಲ್ಲಿ ಮಾತ್ರ ಇಂದು ಸಮಾಜದಲ್ಲಿ ಕಾಣುವ ಹಿಂಸೆ, ಕಲಹಗಳನ್ನು ಹಿಮ್ಮೆಟ್ಟಿ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ.

“ಭಾರತವು ಹಬ್ಬಗಳ ನಾಡಾಗಿದೆ. ಬಹು ವೈವಿಧ್ಯತೆಯಿಂದ ಕಂಗೊಳಿಸುತ್ತಿರುವ ನಮ್ಮ ದೇಶದ ಸಂಸ್ಕೃತಿಗೆ ಇಲ್ಲಿನ ಮತಧರ್ಮಗಳು ಹಲವಾರು ಹಬ್ಬಗಳನ್ನು ಕೊಡುಗೆಗಳಾಗಿ ನೀಡಿವೆ. ಹಬ್ಬಗಳು ನಮ್ಮ ಸಂಸ್ಕೃತಿಯ ಜೀವಾಳವಾಗಿವೆ. ಈ ಸಂದರ್ಭದಲ್ಲಿ ಜನರು ತಮ್ಮ ಜಾತಿ, ಮತ ಭೇದ ಮರೆತು ಹಬ್ಬದ ಸಡಗರದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿಹಬ್ಬಕ್ಕೂ ತನ್ನದೇ ಅದ ಇತಿಹಾಸವಿದೆ.

‘ನಿನ್ನನ್ನು ನೀನು ಪ್ರೀತಿಸುವಂತೆ ನಿನ್ನ ನೆರೆಹೊರೆಯವರನ್ನು ನೀನು ಪ್ರೀತಿಸು’ ಎಂದು ಹೇಳಿದ ಯೇಸುವಿನ ಪ್ರೀತಿ, ತ್ಯಾಗ, ಸಹನೆ ಇಂದಿನ ಪೀಆಗೆಗೆ ಆದರ್ಶವಾಗಬೇಕು. ಈ ಮೌಲ್ಯಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಮ್ಮ ಗುರಿಯಾಗಬೇಕು. ಹಾಗಿದ್ದಲ್ಲ ಮಾತ್ರ ಇಂದು ಸಮಾಜದಲ್ಲಿ ಕಾಣುವ ಹಿಂಸೆ, ಕಲಹಗಳನ್ನು ಹಿಮ್ಮೆಟ್ಟಿ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ.”

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು