News Karnataka Kannada
Monday, May 06 2024
ಲೇಖನ

ಪ್ರೀತಿಸಿದ ಹಕ್ಕಿಗಾಗಿ ಗುಲಾಬಿ ಮಾಡಿದ ಶಪಥವೇನು?

What is a rose-made vow for a loved right?
Photo Credit : Freepik

ಪ್ರೀತಿಗೆ ಸಂಬಂಧಿಸಿದಂತೆ ನೂರಾರು ಸತ್ಯ ಕಥೆಗಳಿವೆ. ಕೆಲವು ಪ್ರೇಮಕತೆಗಳು ಸುಖಮಯ ಅಂತ್ಯ ಕಂಡಿದ್ದರೆ ಮತ್ತೆ ಕೆಲವು ದುಃಖಾಂತ್ಯವಾಗಿವೆ. ಇವತ್ತಿಗೂ ನಮ್ಮ ನಡುವೆ ಪ್ರೀತಿಗಾಗಿ ಜೀವ ತೆತ್ತವರು, ಪ್ರೀತಿಗೆ ಮೋಸ ಮಾಡಿದವರು ಹೀಗೆ ಒಂದಲ್ಲ ಒಂದು ಕಥೆಗಳು ನಮ್ಮ ಸುತ್ತಮುತ್ತ ನಡೆಯುತ್ತಲೇ ಇರುತ್ತದೆ. ನಿಜವಾದ ಪ್ರೀತಿ ಯಾವುದನ್ನೂ ಬಯಸದ ನಿಸ್ವಾರ್ಥಿ. ಅದು ಹೃದಯದ ಪ್ರೀತಿಯಾಗಿರುತ್ತದೆ. ಅದು ಪ್ರೀತಿಗಾಗಿ ಪ್ರಾಣವನ್ನೇ ನೀಡುತ್ತದೆ.

ಇವತ್ತು ನಾವು ಪ್ರೀತಿಯ ವಿಚಾರ ಬಂದಾಗಲೆಲ್ಲ ಕೆಂಪು ಗುಲಾಬಿಯ ನೆನಪು ಮಾಡಿಕೊಳ್ಳುತ್ತೇವೆ. ಈ ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವಾಗಿ ಒಪ್ಪಿಕೊಳ್ಳುತ್ತೇವೆ. ಈ ಗುಲಾಬಿ ಕೆಂಪಾಗಿದ್ದು ಅದನ್ನು ಪ್ರೀತಿಸಿದ ಹಕ್ಕಿಯ ರಕ್ತದಿಂದ ಎಂದರೆ ನಂಬುತ್ತೀರಾ? ಪ್ರತಿ ವಿಚಾರಗಳು ಬಂದಾಗಲೂ ಅದರ ಹಿಂದೆ ಒಂದು ದಂತಕತೆಯಿರುತ್ತದೆ. ಅದರಂತೆ ಕೆಂಪು ಗುಲಾಬಿಯ ಹಿಂದೆ ಸುಂದರ ಕಥೆಯಿದೆ. ಅದು ಏನೆಂದರೆ?

ಪುಟ್ಟ ಹಕ್ಕಿಯೊಂದು ಬಿಳಿಗುಲಾಬಿಯನ್ನು ಗಾಢವಾಗಿ ಪ್ರೀತಿಸುತ್ತಿತ್ತು. ಅದನ್ನು ಹೇಳಿಯೂ ಇತ್ತು. ಆದರೆ ಹಕ್ಕಿಯ ಪ್ರೀತಿಯನ್ನು ಅರಿಯದ ಗುಲಾಬಿ ಮಾತ್ರ ಉದ್ದಟತನದಿಂದ ವರ್ತಿಸುತ್ತಿತ್ತು. ಒಂದು ದಿನ ಗೋಗರೆದು ಕೇಳಿದ್ದಕ್ಕೆ ಬಿಳಿ ಗುಲಾಬಿ ನನ್ನ ಬಣ್ಣ ಕೆಂಪಾಗಿ ಬದಲಾದ ದಿನದಿಂದಲೇ ನಿನ್ನನ್ನು ಪ್ರೀತಿಸುತ್ತೇನೆಂದು ಭಾಷೆ ನೀಡಿತು. ಹಕ್ಕಿ ಮಾತ್ರ ಗುಲಾಬಿ ಹೂ ಕೆಂಪಾಗುವುದನ್ನೇ ಕಾಯತೊಡಗಿತು. ಆದರೆ ದಿನ ಉರುಳಿ ವಾರವಾಯಿತು. ವಾರ, ತಿಂಗಳಾಗಿ ಕೊನೆಗೆ ವರ್ಷವಾದರೂ ಬಿಳಿ ಗುಲಾಬಿ ಮಾತ್ರ ಕೆಂಪಾಗಲಿಲ್ಲ. ಇದರಿಂದ ನಿರಾಶೆಗೊಂಡ ಹಕ್ಕಿಯು ಹೂವಿನ ಮೇಲೆ ಕುಳಿತು ಗಿಡದಿಂದ ಮುಳ್ಳನ್ನು ಕಿತ್ತು ತನ್ನ ಎದೆಗೆ ಚುಚ್ಚಿಕೊಂಡಿತು. ಆಗ ಹಕ್ಕಿಯ ಎದೆಯಿಂದ ಹೊರಬಂದ ರಕ್ತ ಬಿಳಿ ಗುಲಾಬಿಯನ್ನೆಲ್ಲಾ ತೊಯ್ದು ಕೆಂಪಾಗಿಸಿತು. ಆದರೆ ಅಷ್ಟರಲ್ಲಿಯೇ ಹಕ್ಕಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇಷ್ಟೆಲ್ಲಾ ನಡೆದ ಮೇಲೆ ಗುಲಾಬಿಗೆ ಜ್ಞಾನೋದಯವಾಗಿತ್ತು. ತನ್ನ ಅಹಂಕಾರದಿಂದ ಹಕ್ಕಿಯ ಪ್ರಾಣವೇ ಹೋಯಿತಲ್ಲ ಎಂದು ಮಮ್ಮಲ ಮರುಗತೊಡಗಿತ್ತು. ತನಗೋಸ್ಕರ ಪ್ರಾಣವನ್ನೇ ತೆತ್ತ ಗೆಳೆಯನ ನೆನಪಿಗಾಗಿ ಇನ್ನು ಮುಂದೆ ಕೆಂಪು ಬಣ್ಣದಲ್ಲಿದ್ದುಕೊಂಡೇ ಪ್ರೇಮಿಗಳನ್ನು ಒಗ್ಗೂಡಿಸುವ ಕಾರ್ಯನಿರ್ವಹಿಸುವುದಾಗಿ ಶಪಥ ಮಾಡಿತಂತೆ. ಅಂದಿನಿಂದ ಇಂದಿನವರೆಗೂ ಪ್ರೇಮಿಗಳಿಗೆ ಪ್ರೇಮ ಸೇತುವೆಯಾಗಿ ಕೆಂಪು ಗುಲಾಬಿ ಕಾರ್ಯನಿರ್ವಹಿಸುತ್ತಾ ಬರುತ್ತಿದೆಯಂತೆ.

ಇನ್ನು ಪ್ರೇಮಿಗಳ ದಿನದಂದು ಗುಲಾಬಿ ಹೂವುಗಳಲ್ಲಿನ ಒಂದೊಂದು ಬಣ್ಣಕ್ಕೂ ಒಂದೊಂದು ರೀತಿಯ ಅರ್ಥವನ್ನು ಪ್ರೇಮಿಗಳು ಕಲ್ಪಿಸಿಕೊಳ್ಳುತ್ತಾರೆ. ಅದರಂತೆ ಚೆಂಗುಲಾಬಿ ನೀಡಿದರೆ ’ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದರ್ಥ. ಹೀಗಾಗಿ ಚೆಂಗುಲಾಬಿ ಅಂದ್ರೆ ಪ್ರೀತಿ. ಹಳದಿ ಬಣ್ಣದ ಹೂ ನೀಡಿದರೆ ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ ಎಂದರ್ಥ ಆದ್ದರಿಂದ ಹಳದಿ ಅಂದ್ರೆ ಸ್ನೇಹ. ಇನ್ನು ಬಿಳಿ ಗುಲಾಬಿ ನಿರಂತರ ಸ್ನೇಹವನ್ನೂ, ತಿಳಿಗುಲಾಬಿ ಈಗಷ್ಟೇ ಮನಸ್ಸು ಅರಳುತ್ತಿದೆ ಎಂಬ ಅರ್ಥವನ್ನು ಸೂಚಿಸುತ್ತದೆಯಂತೆ. ಅದು ಏನೇ ಇರಲಿ.. ಗುಲಾಬಿ ಹೂ ನೀಡಿ ಐ ಲವ್ ಯೂ ಎನ್ನುವ ಮುನ್ನ ನಿಮ್ಮ ಪ್ರೀತಿ ಪ್ರಾಮಾಣಿಕನಾ ಎಂಬುದನ್ನು ನಿಮ್ಮ ಆತ್ಮಕ್ಕೆ ಕೇಳಿಕೊಳ್ಳಿ? ನೀವು ಸುಖವಾಗಿರುತ್ತೀರಿ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು