News Karnataka Kannada
Saturday, May 04 2024
ಲೇಖನ

ಅಂತರ್ಜಾತಿ ವಿವಾಹ: ಅಂತ್ಯವಾಗಲಿ ಕಲಹ….

Inter-caste marriage: Let the conflict end
Photo Credit : By Author

ಮದುವೆ ಎರಡು ಮನಸ್ಸುಗಳ ಸಮಾಗಮ. ಬದುಕಿನ ಬಹುದೂರದ ಪ್ರಯಾಣವನ್ನು ಸಂಗಾತಿಯೊಂದಿಗೆ ಕಳೆಯುವ ಮಹದಾಸೆಯ ದಿಟ್ಟ ನಿರ್ಧಾರದ ಫಲ. ತನ್ನ ಮನೆ-ಮನಸ್ಸಿಗೆ… ತನ್ನ ಬದುಕಿನ ಹೋರಾಟದಲ್ಲಿ ತನಗೆ ಉತ್ತಮ ಜೋಡಿ ಎಂಬುವ ಕಾರಣದಿಂದ ಕೈ ಹಿಡಿಯುವವರ ಸಮಾಗಮಕ್ಕೆ ಯಾವ ದೊಣ್ಣೆನಾಯಕನ ಅಪ್ಪಣೆ ಏಕೆ?! ಜಾತಿ-ಧರ್ಮ, ಮೇಲು-ಕೀಳುಗಳೆಂಬ ಕಟ್ಟುಪಾಡುಗಳೇಕೆ? ಒಂದು ಗಂಡು ಒಂದು ಹೆಣ್ಣು ಜೊತೆಯಾಗಲು ಎರಡು ಮನಸ್ಸುಗಳ ಒಪ್ಪಿಗೆ ಬೇಕೆ ಹೊರತು ಇನ್ಯಾರದ್ದೋ ಪ್ರತಿಷ್ಠೆಯಲ್ಲ. ಆದರೆ, ಇಂದಿಗೂ ಸಮಾಜದೊಳಗೆ ಜೀವಿಸುತ್ತಿರುವ ಕೆಲವೊಂದಷ್ಟು ಕೆಟ್ಟ ಹೀನ ಮನಸ್ಸುಗಳ ಕಾರಣದಿಂದಾಗಿ ಅಂತರ್ಜಾತಿ ವಿವಾಹವಾಗುವವರ ಜೀವನವೇ ನರಕವಾಗುತ್ತಿದೆ. ಯಾರದೋ ಪ್ರತಿಷ್ಠೆ, ಮೇಲು-ಕೀಳು ಹಗ್ಗಾ-ಜಗ್ಗಾಟದಲ್ಲಿ ನೊಂದು ಬೇಯುವಂತಾಗಿದೆ. ಜಾತಿ ಸಂಕೋಲೆಗಳನ್ನೆಲ್ಲಾ ಧಿಕ್ಕರಿಸಿ ಮದುವೆಯಾದವರನ್ನು ಬಹಿಷ್ಕರಿಸುವ, ತಿರಸ್ಕಾರ ಮಾಡುವ ಕೊಳಕು ಮನಸ್ಸುಗಳು ಇಂದಿಗೂ ನಮ್ಮೊಂದಿಗೆ ಜೀವಿಸುತ್ತಿವೆ…

ಹಸಿವಿನಲ್ಲಿ ಕಂಗೆಟ್ಟಿರುವ ಜೀವಗಳಿಗೆ ತುತ್ತು ಅನ್ನ ಮುಖ್ಯವೇ ಹೊರತು ಅನ್ನ ಕೊಟ್ಟ ಕೈಗಳದ್ದು ಯಾವ ಜಾತಿ ಎಂಬುದಲ್ಲ, ತುರ್ತಿನಲ್ಲಿ ಎದುರಾಗುವ ರಕ್ತಕ್ಕೆ ಜಾತಿ ಇದೆಯೇ? ಸಹಾಯಹಸ್ತ ಚಾಚುವ ಕೈಗಳನ್ನು ಜಾತಿ ಸಂಕೋಲೆಯಲ್ಲಿ ಬಂಧಿಸಿಟ್ಟರೆ ಮನುಷ್ಯತ್ವವೇ. ಅಂದಮೇಲೆ ಪ್ರೀತಿಸುವ ಹೃದಯಗಳಿಗ್ಯಾಕೆ ಮೇಲು-ಕೀಳು ಜಾತಿ ಕಟ್ಟುಪಾಡುಗಳು. ನಿಜ ಜಾತಿ ವ್ಯವಸ್ಥೆ ನಮ್ಮ ದೇಶಕ್ಕಂಟಿದ ಕಪ್ಪು ಮಸಿ, ಅವಕಾಶ, ಗೌರವ, ಮರ್ಯಾದೆಗಳು ಸಿಗುವುದೇ ಹುಟ್ಟಿನಿಂದ… ಹುಟ್ಟಿದ ಜಾತಿಯಿಂದ ಎಂಬುದೇ ದುರ್ದೈವದ ಸಂಗತಿಯಾದರೂ ಸಾವಿರಾರು ವರ್ಷಗಳಿಂದ ನಿರ್ಮಾಣವಾಗಿರುವ ಜಾತಿ ವ್ಯವಸ್ಥೆ ದಿಢೀರನೇ ನಿರ್ಮೂಲನೆಯಾಗಿ ಬಿಡುವುದು ಅಸಾಧ್ಯದ ಮಾತೇ ಸರಿ. ಆದರೆ, ಮನಸ್ಸುಗಳು ಬದಲಾದರೆ ಕಲಿತ ವಿದ್ಯೆ ವಿವೇಕವನ್ನು ಕಲಿಸಿಕೊಟ್ಟರೆ, ಮಾನವೀಯತೆ, ಮನುಷ್ಯತ್ವ ಜಾಗೃತವಾದರೆ ಯಾವುದೂ ಅಸಾಧ್ಯವಲ್ಲ.

ಬದಲಾವಣೆ ಪ್ರಕೃತಿಯ ಸಹಜ ಧರ್ಮ. ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ಬದಲಾವಣೆ ನಡೆದೇ ತೀರುತ್ತವೆ. ಆದರೆ, ಅದಕ್ಕೆ ಎದುರಾಗುವ ವಿರೋಧಗಳು, ಸಮಾಜದೊಳಗಿನ ಅಸಹನೀಯ ಬೆಳವಣಿಗೆಗಳು, ಘಟನೆಗಳು ಬದಲಾವಣೆಗೆ ಮುಂದಾಗುವ ಮನಸ್ಸುಗಳನ್ನು ಭಯಕ್ಕೀಡು ಮಾಡುವ ಮೂಲಕ ಬದಲಾಗುವ ಮುಕ್ತ ಮನಸ್ಸಿನಿಂದ ಮುಂದಡಿಯಿಡುವ ಇತರರು ಹಿಂಜರಿಯುವಂತೆ ಮಾಡಿ ಬಿಡುತ್ತದೆ. ಆದರೂ, ಎದೆಗುಂದದ ಒಂದಷ್ಟು ಮಂದಿ ಎಲ್ಲಾ ಕಟ್ಟುಪಾಡುಗಳನ್ನು ದಾಟಿ ಅಂತರ್ಜಾತಿ ವಿವಾಹವಾಗುವ ಮೂಲಕ ಬದಲಾವಣೆಯ ಪರ್ವಕ್ಕೆ ನಾಂದಿ ಆಡುತ್ತಿರುವುದು ಸದ್ಯದ ಆಶಾದಾಯಕ ಬೆಳವಣಿಗೆ. ಅಷ್ಟೇ ಏಕೆ ಜಾತಿ ವ್ಯವಸ್ಥೆ ನಿರ್ಮೂಲನೆ ಆಗಬೇಕೆಂದು ಗಂಟೆಗಟ್ಟ ಲೇ ಭಾಷಣ ಬಿಗಿಯುವ ಅದೆಷ್ಟೋ ಮಂದಿಗೆ ಈ ಜಾತಿ ವ್ಯವಸ್ಥೆ ನಿರ್ಮೂಲನೆ ಯಾವ ಹಂತದಿಂದ ಆರಂಭಿಸಬೇಕು ಎಂದರೆ ಬಾಯಿ ತೊದಲಿಸಲಾರಂಭಿಸುತ್ತೆ. ಕಾರಣ ಯಾವ ಹಂತದಿಂದ ಈ ಜಾತಿ ವ್ಯವಸ್ಥೆಗೆ ಮುಕ್ತಿ ಕೊಡಬೇಕು ಎಂಬುದಕ್ಕೆ ಯಾರ ಬಳಿಯೂ ಸ್ಪಷ್ಟ ಉತ್ತರವಿಲ್ಲ. ಇಂತಹ ಸಮಯದಲ್ಲಿ ತಕ್ಕಮಟ್ಟಿಗೆ ಎಲ್ಲರೂ ಒಪ್ಪುವ… ಒಪ್ಪುತ್ತಿರುವ ಏಕೈಕ ಮಾರ್ಗವೆಂದರೆ ಅದು ಅಂತರ್ಜಾತಿ ವಿವಾಹ.

ಹೌದು. ಅಂತರ್ಜಾತಿ ವಿವಾಹಗಳು ನಮ್ಮ ನೆಲದ ಸಂವಿಧಾನದ ಪ್ರಕಾರ ಕಾನೂನುಬದ್ಧ. ಸಂವಿಧಾನವೇನೋ ಅಂತರ್ಜಾತಿ ವಿವಾಹವನ್ನು ಕಾನೂನೂಬದ್ಧವನ್ನಾಗಿಸಿದೆ. ಆದರೆ, ಸಮಾಜದೊಳಗಿನ ಜಾತಿ ಕಟ್ಟುಪಾಡುಗಳು ಮಾತ್ರ ಅಂತರ್ಜಾತಿ ವಿವಾಹಗಳಿಗೆ ಪದೇ-ಪದೇ ಅಡ್ಡಗಾಲಾಗುತ್ತಿದೆ. ಸ್ವಜಾತಿಯ ವಿವಾಹಗಳಿಗೆ ಸಿಗುವ ಗೌರವ, ಆದರದಲ್ಲಿ ಕನಿಷ್ಠ ಪಕ್ಷದ ಗೌರವ ಅಂತರ್ಜಾತಿ ವಿವಾಹಗಳಿಗೆ ಸಿಗುತ್ತಿಲ್ಲ. ಲಿಂಗಾಯತ-ಬ್ರಾಹ್ಮಣ, ಒಕ್ಕಲಿಗ- ಲಿಂಗಾಯತ ಸೇರಿದಂತೆ ಒಂದಷ್ಟು ಸರ್ವಣೀ್ರಯತೆಯ ಸೋಗಿನಲ್ಲಿರುವವರು ಅಂತರ್ಜಾತಿ ವಿವಾಹವಾದರೆ ಸಂಪೂರ್ಣವಲ್ಲದಿದ್ದರೂ ತಕ್ಕಮಟ್ಟಿಗೆ ಸಮಾಜ ಒಪ್ಪಿಕೊಳ್ಳಲು ಮನಸ್ಸು ಮಾಡುತ್ತೆ. ಆದರೆ, ಅದೇ ಅಂತರ್ಜಾತಿ ವಿವಾಹ ಸವರ್ಣಿಯ ಜಾತಿ ಮತ್ತು ಅಸ್ಪೃಶ್ಯ ಜಾತಿಯ ನಡುವಿನದ್ದಾದರೆ ಎಲ್ಲೋ ದೂರದ ಊರುಗಳಿಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕಾದಂತಹ ಪರಿಸ್ಥಿತಿ ಇಂದಿಗೂ ಮನೆ ಮಾಡಿದೆ ಎನ್ನುವುದೇ ದುರಂತ. ಇಂತಹ ಮನಸ್ಥಿತಿಗಳ ಪ್ರತಿಫಲವೇ ಚಾಮರಾಜನಗರದಲ್ಲಿ ಅಂತರ್ಜಾತಿ ವಿವಾಹವಾಗಿದ್ದ ಕುಟುಂಬಕ್ಕೆ 6 ಲಕ್ಷ ದಂಡ ವಿಧಿಸಿದ್ದ ಘಟನೆ. ಬಹಿಷ್ಕಾರ ಹಾಕಿದ್ದವರಿಗೆ ಇದೀಗ ಕಾನೂನಿನ ಕುಣಿಕೆಗೆ ವಿಲವಿಲ ಒದ್ದಾಡುವಂತೆ ಮಾಡಿದೆ ಎಂಬುದು ಬೇರೆ ವಿಚಾರ. ಆದರೆ, ತಮಗಿಂತ ಕೆಳ ಜಾತಿಯವರನ್ನು ಮದುವೆಯಾಗಿಬಿಟ್ಟರೆಂಬ ಏಕೈಕ ಕಾರಣಕ್ಕೆ ಊರಿನಿಂದ ಬಹಿಷ್ಕಾರ ಹಾಕಿ ದಂಡ ವಿಧಿಸಿದ್ದು ಬೇಸರದ ಸಂಗತಿಯಾದರೂ ನಮ್ಮ ನೆಲದ ಮನಸ್ಸುಗಳಲ್ಲಿ, ಸಮಾಜದಲ್ಲಿ ಹೊಲಸೆದ್ದು, ಗಬ್ಬು ನಾರುತ್ತಿರುವ ಮೇಲು-ಕೀಳು ಭಾವನೆಗಳಿಗೆ ಮದ್ದು ಅರೆಯುವುದು ಅಷ್ಟು ಸುಲಭದ ಮಾತಲ್ಲ ಎಂಬುದಂತೂ ಸತ್ಯ.
ಅಂತರ್ಧರ್ಮ, ಅಂತರ್ಜಾತಿ ವಿವಾಹಗಳಿಗೆ ಅದೆಷ್ಟೇ ವಿರೋಧವಿದ್ದರೂ ಅದೆಲ್ಲಾ ಕಟ್ಟುಪಾಡುಗಳನ್ನು ಭೇದಿಸುತ್ತಿರುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅದರಲ್ಲೂ ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿರುವ ಅನೇಕ ಸಿನಿಮಾ ನಟ-ನಟಿಯರು, ರಾಜಕಾರಣಿಗಳು, ಬಿಸಿನೆಸ್ ಮ್ಯಾನ್‌ಗಳು, ಅಧಿಕಾರಿಗಳು ಅಂತರ್ಜಾತಿ, ಅಂತರ್ಧಮ್ರ ಮದುವೆಯಾಗಿರುವುದು ಅದೆಷ್ಟೋ ಪ್ರೀತಿಸುವ ಹೃದಯಗಳಿಗೆ ಮಾದರಿಯಾದದ್ದೇ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ. ಆದರೆ, ದೊಡ್ಡವರೆನಿಸಿಕೊಂಡಿರುವವರಿಗೆ ಅವರಿರುವ ಉನ್ನತ ಸ್ಥಾನಮಾನಗಳು ಮೇಲು-ಕೀಳು ಜಾತಿ ಮನಸ್ಸುಗಳಿಗೆ ಕೈಗೆಟುಕದ ಹುಳಿದ್ರಾಕ್ಷಿ. ಆದರೆ, ಸಾಮಾನ್ಯರ ಅಂತರ್ಜಾತಿ ವಿವಾಹಗಳು ಅಷ್ಟು ಸುಲಭದ ಮಾತಲ್ಲ. ಮುಕ್ತ ಮನಸ್ಸಿನಿಂದ ಪ್ರೀತಿಸಿದ ಮಾತ್ರಕ್ಕೆ ಮದುವೆಯ ಕನಸು ಈಡೇರಿ ಬಿಡಬಹುದು ಆದರೆ, ತದನಂತರ ಬಾಳ್ವೆ ಅವಮಾನದ ಪ್ರಯಾಣವೆಂದರೆ ತಪ್ಪಲ್ಲ. ಪ್ರೀತಿಸಿ ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಇಂದಿಗೂ ಅದೆಷ್ಟೋ ಮಂದಿ ಹತ್ತಾರು ವರ್ಷಗಳಿಂದ ಹುಟ್ಟಿ ಬೆಳೆದ ಕುಟುಂಬದಿಂದ ದೂರವಾಗಿ ಸ್ನೇಹ-ಬಾಂಧವ್ಯಗಳನ್ನು ಕಡಿತಗೊಳಿಸಿಕೊಂಡು ನೆರೆ-ಹೊರೆಯವರ ಕುಹಕದಲ್ಲೇ ಬದುಕುತ್ತಿರುವ ಉದಾಹರಣೆಗಳು ಬೆಟ್ಟದಷ್ಟಿವೆ.
ಆದರೆ, ಸಮಾಜದೊಳಗೆ ಹೊದ್ದು ಮಲಗಿರುವ ಈ ಜಾಡ್ಯ ಸಾಮಾನ್ಯರನ್ನು ಹಿಂಸಿಸಿದಂತೆ ದೊಡ್ಡವರನ್ನು ಹಿಂಸಿಸಲು ಸಾಧ್ಯವಾಗಲಿಲ್ಲ. ಕಾರಣ ಅವರು ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳೆದ ದೊಡ್ಡವರು. ಅಮೀರ್ ಖಾನ್, ಹೃತಿಕ್ ರೋಷನ್, ಕರೀನಾ ಕಪೂರ್, ಶಾರುಖ್ ಖಾನ್, ಅಂಬರೀಶ್, ಯಶ್, ಅಲ್ಲು ಅರ್ಜುನ್, ರಾಮ್ ಚರಣ್, ಸುದೀಪ್ ಸೇರಿದಂತೆ ಬಾಲಿವುಡ್‌ನಿಂದ ಹಿಡಿದು ಸ್ಯಾಂಡಲ್‌ವುಡ್‌ವರೆಗೂ ಹಲವು ನಟ-ನಟಿಯರು ಅಂತರ್ಧಮೀ್ರಯ, ಅಂತರ್ಜಾತಿ ವಿವಾಹವಾಗಿದ್ದಾರೆ. ಇನ್ನು ಹಲವಾರು ಹೆಸರಾಂತ ರಾಜಕಾರಣಿಗಳು, ಅವರ ಮಕ್ಕಳು, ಮೊಮ್ಮಕ್ಕಳು ಅಂತರ್ಜಾತಿ ವಿವಾಹವಾಗಿದ್ದಾರೆ. ಆದರೆ, ಇವರ್ಯಾರಿಗೂ ಬಹಿಷ್ಕಾರ ಹಾಕುವ ತಾಕತ್ತು ಇಲ್ಲದ ಮಂದಿ ತಮ್ಮ ನಡುವೆ ಜೀವಿಸುತ್ತಿರುವ ಸಾಮಾನ್ಯರ ಮೇಲೆ ಬಹಿಷ್ಕಾರ, ತಿರಸ್ಕಾರ ಹೇರುತ್ತಿರುವುದು ನಾಚಿಕೆಗೇಡಿನ ಸಂಗತಿ.

ಬಾಳ ಸಂಗಾತಿಯ ಆಯ್ಕೆ ಅವರವರ ವೈಯಕ್ತಿಕ ಹಕ್ಕು, ಜಾತಿ, ಧರ್ಮದ ಕಾರಣಕ್ಕೋ, ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಇಬ್ಬರ ನಡುವೆ ಎಂಬ ಪ್ರತಿಷ್ಠೆಯ ಕಾರಣಕ್ಕೋ ಮೂರನೇ ವ್ಯಕ್ತಿಯ ಮೂಗು ತೂರಿಸುವುದು ಅಕ್ಷಮ್ಯ ಅಪರಾಧ. ಆದರೆ, ನಾವೂ ಎಲ್ಲರಿಗಿಂತಲೂ ಶ್ರೇಷ್ಠರೆಂಬ ಶ್ರೇಷ್ಠತೆಯ ಪರಾಕಾಷ್ಠೆಗೆ ತಲುಪಿರುವವರಿಗೆ ಇದು ಅನೈತಿಕ. ತಂತಮ್ಮ ಅಂತಸ್ಥಿಗೆ ಸರಿ ಸಮಾನವಾದವರು, ಸ್ವಜಾತಿಯವರನ್ನು ಬಿಟ್ಟರೆ ಮಿಕ್ಕವರು ಕೀಳೆಂಬ ಭಾವನೆಯಲ್ಲಿರುವವರಿಗೆ ವಿರುದ್ಧವಾದ ನಡವಳಿಕೆ ರಕ್ತ ಹರಿಸಲು ಮುಂದಾಗುವಂತೆ ಪ್ರೇರೆಪಿಸುತ್ತದೆ. ಆದರೆ, ಕೊಲ್ಲುವ ಕೈಗಳ ನಡುವೆಯೂ ಅಂತರ್ಜಾತಿ ವಿವಾಹ, ಪ್ರೇಮ ಪ್ರಕರಣಗಳಿಗೆ ತೀರಾ ಇತ್ತೀಚಿನ ದಿನಗಳಲ್ಲಿ ಅಂತಜ ರ್ಾತಿ ವಿವಾಹವಾದವರಿಗೆ ಸರ್ಕಾರ ಸಹಾಯಧನ ನೀಡುವ ಮೂಲಕ ಬದಲಾವಣೆಯ ಪರ್ವಕ್ಕೆ ಮುಂದಾದವರಿಗೆ ನೆರವಾಗುತ್ತಿವೆ.

ಪರಿಶಿಷ್ಟ ಜಾತಿ/ಪಂಗಡದ ಗಂಡು ಸವರ್ಣೀಯ ಜಾತಿಯ ಹೆಣ್ಣನ್ನು ಮದುವೆಯಾದರೆ 2.5 ಲಕ್ಷ, ಅದೇ ಪರಿಶಿಷ್ಟ ಜಾತಿ ಪಂಗಡದ ಹೆಣ್ಣು ಸವರ್ಣೀಯ ಸಮುದಾಯದ ಗಂಡನ್ನು ಮದುವೆಯಾದರೆ 3 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ನೀಡುತ್ತಿದೆ. ಸರ್ಕಾರ ಅಂತರ್ಜಾತಿಯ ವಿವಾಹಗಳನ್ನು ಒಪ್ಪಿ ಪೋತ್ಸಾಹ ನೀಡಿದ ಮಾತ್ರಕ್ಕೆ ಸಮಾಜದೊಳಗಿನ ಕಟ್ಟುಪಾಡುಗಳು ಅಂತರ್ಜಾತಿ ವಿವಾಹಗಳನ್ನು ಒಪ್ಪಿಕೊಳ್ಳಲು ಸುತಾರಾಂ ಸಿದ್ಧವಿದ್ದಂತೆ ಕಂಡು ಬರುತ್ತಿಲ್ಲ. ಅಂತರ್ಜಾತಿಯ ಪ್ರೀತಿಯ ವಿಷಯ ಹೊರಬರುತ್ತಿದ್ದಂತೆ ಅದನ್ನು ಅಲ್ಲಿಯೇ ಚಿವುಟುವ ಮತ್ತೂ ಮುಂದುವರಿದರೆ ಮರ್ಯಾದೆಗೇಡು ಹತ್ಯೆ… ಊರಿನಿಂದ ಬಹಿಷ್ಕಾರ, ಕುಟುಂಬಸ್ಥರಿಂದ ತಿರಸ್ಕಾರದಂತಹ ಬೆಳವಣಿಗೆಗಳಿಗೆ ಎಡೆಮಾಡಿಕೊಡುತ್ತಿದೆ. ಅದೆಷ್ಟೋ ಕುಟುಂಬಗಳು ಅಂತರ್ಜಾತಿಯ ವಿವಾಹಗಳಿಗೆ ಸಮ್ಮತಿ ಸೂಚಿಸಲು ಮುಂದಾದರೂ ನೆರೆಹೊರೆ, ಬಂಧು-ಬಳಗದವರ ಕುಹಕಕ್ಕೆ ಹೆದರಿ ಅಂತರ್ಜಾತಿ ವಿವಾಹಗಳು, ಪ್ರೀತಿಯನ್ನು ಒಪ್ಪಲು ಮುಂದಾಗುತ್ತಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂತರ್ಜಾತಿ ವಿವಾಹಗಳ ಸಂಖ್ಯೆ ಏರುಗತಿಯಲ್ಲಿವೆ. ಅದಕ್ಕೆ ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳೇ ಪುಷ್ಠಿ ನೀಡುತ್ತಿವೆ.

ಬದುಕಲು ಬಿಡಿ ಸಮಾಜ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2022-23ರಲ್ಲಿ 4752 ಅರ್ಜಿಗಳು ಅಂತಜ ರ್ವತಿ ವಿವಾಹದಡಿ ಪ್ರೋತ್ಸಾಹ ಧನಕ್ಕೆ ಸಲ್ಲಿಕೆಯಾಗಿವೆ. ಬೆಂಗಳೂರು ನಗರದಲ್ಲಿ 845 ಅರ್ಜಿಗಳು ಸಲ್ಲಿಕೆಯಾಗಿರುವುದು ವಿಶೇಷ. ತದನಂತರದಲ್ಲಿ ಹಾಸನ, ಶಿವಮೊಗ್ಗ, ಮೈಸೂರು, ತುಮಕೂರು, ಬೆಳಗಾವಿ, ಕೋಲಾರದಲ್ಲಿ ತಲಾ 200 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. 2021-22ರಲ್ಲಿ 4310, 2020-21ರಲ್ಲಿ 3827, 2019 – 20 ರಲ್ಲಿ 3639, 2018-19 ರಲ್ಲಿ 3779 ಅರ್ಜಿಗಳು ಪ್ರೋತ್ಸಾಹಧನಕ್ಕಾಗಿ ಸಲ್ಲಿಕೆಯಾಗಿವೆ. ಕಳೆದ ಒಂದು ದಶಕದಿಂದೀಚೆಗೆ 20ಸಾವಿರಕ್ಕೂ ಹೆಚ್ಚು ಅಂತಜ ರ್ಇತಿ ವಿವಾಹಗಳು ಕರ್ನಾಟಕದಲ್ಲಿ ನೇರವೇರಿರುವುದು ಬದಲಾದ ಕಾಲಘಟ್ಟದಲ್ಲಿ ಆಶಾದಾಯಕ ಬೆಳವಣಿಗೆ ಆದರೆ ಬದಲಾವಣೆ ಸಮಾಜದೊಳಗಿನ ಮೇಲು-ಕೀಳೆಂಬ ಮನಸ್ಥಿತಿಗೆ ಮದ್ದು ಅರೆಯದೆ ದ್ವೇಷ ಹೆಚ್ಚಾಗಲು ಕಾರಣವಾದರೆ ಭವಿಷ್ಯದ ದಿನಗಳು ಕರಾಳತೆಗೆ ಸಾಕ್ಷಿಯಾಗುತ್ತದೆ. ಆದರಿಂದ ಬಾಳ ಸಂಗಾತಿಯ ಆಯ್ಕೆ ಅವರವರ ವೈಯಕ್ತಿಕ ಹಕ್ಕು. ತಮ್ಮ ಬದುಕಿನ ಬಂಡಿಯಲ್ಲಿ ಯಾರು ಜೊತೆಗಿದ್ದರೆ ಬದುಕು ಸಾರ್ಥಕವೆನಿಸುತ್ತಾ ಅಂತಹವರೊಂದಿಗೆ ಬದುಕಲು ಬಿಡಿ. ಭೂಮಿಯ ಮೇಲೆ ಯಾರು ಶ್ರೇಷ್ಠರಲ್ಲ… ಯಾರು ಕನಿಷ್ಠರಲ್ಲ… ಎಲ್ಲರೂ ಸರಿ ಸಮಾನರೇ…. ಅದಕ್ಕಾಗಿ ಅದ್ಭುತವೇನೂ ನಡೆಯಬೇಕಾದ ಜರೂರತ್ತಿಲ್ಲ. ಬದಲಾಗಿ ಮನುಷ್ಯ ತನ್ನಂತೆಯೇ ಇರುವ ಮತ್ತೊಬ್ಬ ಮನುಷ್ಯನನ್ನು ನೋಡುವ ದೃಷ್ಠಿಕೋನ ಬದಲಾದರೆ ಸಾಕು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು