News Karnataka Kannada
Saturday, May 04 2024
ಲೇಖನ

ನ್ಯೂಸ್ ಪೇಪರ್ ನಿಂದ ಇ ಪೇಪರ್ ವರೆಗೆ: ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

e-paper v/s newspaper
Photo Credit : By Author

ಕಳೆದೆರಡು ದಿನಗಳ ಹಿಂದೆ ನನ್ನ ಆಪ್ತ ಗೆಳತಿಯೊಬ್ಬರು ನಮ್ಮ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ನಾನು ದಿನಪತ್ರಿಕೆಯನ್ನು ಓದುತ್ತಿದ್ದುದನ್ನು ಕಂಡು ಪ್ರತಿಕ್ರಿಯಿಸಿದ್ದು ಹೀಗಿತ್ತು. ಅಯ್ಯೋ!, ನೀವು ಈಗೂ ಪತ್ರಿಕೆ ತರ್ಸಿ ಓಡ್ತಿದೀರಾ? ಕೊರೋನಾ ಶುರುವಾದಾಗ್ಲೆ ನಾವು ಪೇಪರ್ ನಿಲ್ಸಿ, ಇ-ಪೇಪರ್ ಓದಕ್ಕೆ ಶುರು ಮಾಡಿದ್ದಿ ನೋಡಿ, ಈಗ ಅದೇ ರೂಢೀನೂ ಆಯ್ತು, ಜೊತೆಗೆ ಸ್ವಲ್ಪ ಹಣಾನೂ ಉಳಿತಾ ಇದೆ. ಅಷ್ಟೇ ಅಲ್ಲೆ ಟಿ.ವಿ ನಲ್ಲೇ 24 ಗಂಟೇನೂ ನ್ಯೂಸ್ಗಳು ಬತ್ತಾನೆ ಇರುತ್ತಲ್ವಾ. ನೀವೂ ಕೂಡ ಹಾಗೆ ಮಾಡಬಹುದು ಎಂಬ ಸಲಹೆಯನ್ನು ಕೂಡ ನೀಡಿದರು. ತಕ್ಷಣ ಅವರ ಮಾತಿಗೆ ನನಗೆ ಉತ್ತರ ತೋಚಲಿಲ್ಲ. ಆದರೆ ನಂತರ ಅವರಾಡಿದ ಮಾತುಗಳು ನನ್ನನ್ನು ಕಾಡಲಾರಂಭಿಸಿದವು. ಬೆಳಗಿನ ಕಾಫಿಯ ಸೇವನೆಯೊಂದಿಗೆ ನಾವು ಓದುವ ದಿನಪತ್ರಿಕೆ ಕೇವಲ ಜಗತ್ತಿನ ಆಗುಹೋಗುಗಳನ್ನು ತಿಳಿಸುವ ಸಾಧನವಾಗಿರದೆ ನಮ್ಮ ನಿತ್ಯದ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಪತ್ರಿಕೆ ತಲಪುವುದು ಸ್ವಲ್ಪ ವಿಳಂಬವಾದರೂ ಸಾಕು, ವಿತರಕರ ಮೇಲೆ ಸಿಡಿಮಿಡಿಗೊಳ್ಳುವ ಹಾಗಾಗುತ್ತದೆ. ಇನ್ನೂ ಅನಿವಾರ್ಯ ಕಾರಣಗಳಿಂದ ಬರದೇ ಇದ್ದರಂತೂ ಏನನ್ನೋ ಕಳೆದುಕೊಂಡ ಭಾವ ಆವರಿಸುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ದಿನಪತ್ರಿಕೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆಯೆಂದರೂ ಅತಿಶಯೋಕ್ತಿಯಾಗಲಾರದು.

ದಿನಪತ್ರಿಕೆಗಳನ್ನು ಕೈಯಲ್ಲಿ ಹಿಡಿದು ಓದಿದಾಗ ಸಿಗುವ ಸಂತೃಪ್ತಿ, ಸಂತಸಗಳು ಬೇರೆಯ ತೆರನಾದದ್ದು. ಆಗ ತಾನೇ ತಲುಪಿದ ದಿನ ಪತ್ರಿಕೆಯನ್ನು ಕುತೂಹಲದಿಂದ ಪುಟಗಳನ್ನು ತಿರುಗಿಸಿ ಒಮ್ಮೆ ಎಲ್ಲವನ್ನು ಗ್ಲಾನ್ಸ್ ಮಾಡಿದಾಗ ಆಗುವ ಮರಮರ ಶಬ್ದ ಕಿವಿಗಳಿಗೆ ಆನಂದ, ಅವುಗಳ ಹೊಸತನದಿಂದ ಹೊರಹೊಮ್ಮುವ ಒಂದು ರೀತಿಯ ಸುವಾಸನೆ ನಾಸಿಕಕ್ಕೆ ಆಹ್ಲಾದ ನೀಡುತ್ತದೆ. ಇನ್ನು ವಿವರವಾಗಿ ಪುಟಗಳನ್ನು ಬಿಡಿಸುತ್ತಾ ಓದುವಲ್ಲಿ ಸಿಗುವ ಖುಷಿಯೇ ಬೇರೆ. ಆಸಕ್ತಿದಾಯಕ ವಿಷಯಗಳನ್ನು ಮತ್ತೆ ಮತ್ತೆ ಓದುವ ಅವಕಾಶ ಹಾಗೂ ಸಂಗ್ರಹಿಸಿಡಲು ಯೋಗ್ಯವಾದವುಗಳನ್ನು ಸಂಗ್ರಹಿಸಿಡಲು ಸುಲಭವಾಗುತ್ತದೆ. ಇಲ್ಲಿ ಮತ್ತೊಂದು ನೆನೆಪಿಸಿಕೊಳ್ಳಲೇಬೇಕಾದ ಸಂಗತಿಯೆಂದರೆ ಮುದ್ರಣ ಮಾಧ್ಯಮದಲ್ಲಿ ಓದಿದ್ದು ನಮ್ಮ ಮನಸ್ಸಿನಲ್ಲಿ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆಂಬ ಅಂಶ ಗಮನಾರ್ಹವಾದದ್ದು. ಇನ್ನು ಪತ್ರಿಕೆ ಓದುವುದನ್ನು ಯಾವ ಸಮಯದಲ್ಲಾದರೂ, ಯಾವ ಭಂಗಿಯಲ್ಲಾದರೂ, ಎಲ್ಲಿಬೇಕಾದರೂ, ಎಷ್ಟು ಬೇಕಾದರೂ ಓದಬಹುದು. ಯಾವುದೇ ಅಡತಡೆಗಳಿರುವುದಿಲ್ಲ.

ವಿಜ್ಞಾನದ ನೂತನ ಆವಿಷ್ಕಾರಗಳಿಂದ ಹಾಗು ಮಾಹಿತಿ ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದಾಗಿ ದಿನಪತ್ರಿಕೆಗಳ ವಿಚಾರದಲ್ಲೂ ಬಹಳಷ್ಟು ಬೆಳವಣಿಗಳಾಗಿವೆ. ಬದಲಾದ ಬದುಕಿನಲ್ಲಿ ಬಹಳಷ್ಟು ಮಂದಿ ಮುದ್ರಿತ ದಿನಪತ್ರಿಕೆಗಳಿಗೆ ಬದಲಾಗಿ ಇ-ಪೇಪರ್ ಮತ್ತು ವೆಬ್ಸೈಟ್ಗಳಲ್ಲಿ ಲಭ್ಯವಾಗುತ್ತಿರುವ ಆನ್ಲೈನ್ ಪೇಪರ್ ಗಳನ್ನು ಓದುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿ ನೆಟ್ ವರ್ಕ್, ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್, ವಿದ್ಯುಚ್ಛಕ್ತಿಯ ಪೂರೈಕೆ ಇರಲೇಬೇಕು. ಇಂದಿನ ದಿನಗಳಲ್ಲಿ ಉದ್ಯೋಗಿಗಳು ಕೆಲಸ ನಿರ್ವಹಿಸುವ ವೇಳೆಯಲ್ಲಿ ಕಂಪ್ಯೂಟರ್ಗಳನ್ನು ಅವಲಂಬಿಸಿ ದಿನದಲ್ಲಿ 8-10 ತಾಸುಗಳಾದರೂ ಅದರೊಟ್ಟಿಗೆ ಕೆಲಸ ನಿರ್ವಹಿಸುವುದು ಅನಿವಾರ್ಯವಾಗಿರುತ್ತದೆ. ಆ ವೇಳೆಗಾಗಲೇ ನಮ್ಮ ಕಣ್ಣು, ಕುತ್ತಿಗೆ, ಬೆನ್ನು ಇವುಗಳಿಗೆ ಬಹಳಷ್ಟು ಒತ್ತಡವಾಗಿರುತ್ತದೆ. ಇನ್ನು ಇ-ಪೇಪರ್, ಆನ್ಲೈನ್ ಪೇಪರ್ಗಳನ್ನು ಓದಿದರೆ ಮತ್ತಷ್ಟು ದೇಹದ ಅದೇ ಭಾಗಗಳಿಗೆ ಒತ್ತಡ ಬೀಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಅನಿವಾರವಲ್ಲದ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ವೇಳೆಯಲ್ಲಿ ನಮ್ಮ ಸಾಂಪ್ರದಾಯಿಕ ಪತ್ರಿಕೆಗಳನ್ನು ಓದುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲವೇ.

ಇನ್ನು ಪತ್ರಿಕೆಗಳನ್ನು ಮುದ್ರಣ ಮಾಡುವ ಹಾಗು ವಿತರಿಸುವ ಕಾಯಕದಲ್ಲಿ ಲಕ್ಷಾಂತರ ಮಂದಿ ಕಾರ್ಯ ನಿರ್ವಹಿಸುತ್ತಾ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹೀಗಿರುವಾಗ ಬಹುಮಂದಿ ಇ-ಪೇಪರ್, ಆನ್ಲೈನ್ ಪೇಪರ್ಗಳಿಗೆ ಮೊರೆಹೋದಲ್ಲಿ ನಮ್ಮ ಸಾಂಪ್ರದಾಯಿಕ ಮುದ್ರಿತ ದಿನಪತ್ರಿಕೆಗಳು ಟೆಲಿಗ್ರಾಪ್ ಸೇವೆ, ಗ್ರೀಟಿಂಗ್ ಕಾರ್ಡ್ಸ್ಗಳು, ಅಂಚೆ ಕ್ಷೇಮ ಪತ್ರಗಳ ರೀತಿಯಲ್ಲಿ ಮುಂದೊಂದು ದಿನ ನೇಪಥ್ಯಕ್ಕೆ ಸರಿದರೆ ಅಚ್ಚರಿಯಿಲ್ಲ.

ಡಿ.ವಿ.ಜಿ ಯವರ ಕಗ್ಗದ ಸಾಲುಗಳು ಹೀಗಿವೆ:
ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು|
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ||
ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ||
ಜಸವು ಜನ ಜೀವನಕೆ ಮಂಕುತಿಮ್ಮ||

ಈ ಮುಕ್ತಕದನ್ವಯ ನಮ್ಮ ಹಿಂದಿನವರಿಂದ ಬಂದ ಆವಿಷ್ಕಾರಗಳನ್ನು ಸಾಧ್ಯವಾದಷ್ಟು ಮರೆಯಾಗದ ಹಾಗೆ ನೋಡಿಕೊಂಡು ನೂತನ ಆವಿಷ್ಕಾರಗಳೊಂದಿಗೆ ಹೆಜ್ಜೆ ಹಾಕೋಣ. ಹಳೆಯ ತಲೆಮಾರಿನವರ ಪಾಲಿಗೆ, ಗ್ರಾಮೀಣ ಮಂದಿಗೆ ಹಾಗೂ ಕಂಪ್ಯೂಟರ್, ಸ್ಮಾರ್ಟ್ ಫೋನ್ ಬಳಕೆ ಮಾಡಲು ಸಾಕಷ್ಟು ಪರಿಣತಿ ಇಲ್ಲದವರ ಪಾಲಿಗೆ ಸಂಪರ್ಕ ಸಾಧನವಾಗಿರುವ ಮುದ್ರಿತ ದಿನಪತ್ರಿಕೆಗಳು ನೇಪಥ್ಯಕ್ಕೆ ಸರಿಯದ ಹಾಗೆ ನಾವೆಲ್ಲರೂ ಜಾಗ್ರತೆ ವಹಿಸೋಣ. ತಪ್ಪದೆ ಎಲ್ಲರೂ ಪತ್ರಿಕೆಗಳನ್ನು ಕೊಂಡು ಓದೋಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು