News Karnataka Kannada
Saturday, May 04 2024
ವಿಶೇಷ

ಜಾತಿ – ಹಣ – ಪಕ್ಷ ನೋಡಿ ಮತ ಹಾಕಿದಲ್ಲಿ ದೇಶಕ್ಕೆ ಭವಿಷ್ಯವಿಲ್ಲ

Kodagu: Open for public campaigning - last game for two more days
Photo Credit : IANS

ಇಂಗ್ಲೆಂಡ್ ಪ್ರಧಾನಿ ವಿನ್ಸಂಟ್ ಚರ್ಚಿಲ್ ಅವರ ಮಾತು ಈಗ ನಿಜವೆಂದು ಮನಗಾಣುತ್ತಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜಘಾತುಕರು ಜನರ ಮುಗ್ಧತನ, ಜಾತಿ-ಹಣ-ಪಕ್ಷದ ಹೆಸರಿನಲ್ಲಿ ದುರುಪಯೋಗ ಪಡಿಸಿಕೊಂಡು ರಾಜಕೀಯ ಕ್ಷೇತ್ರಕ್ಕೆ ನುಗ್ಗಿ, ಅಟ್ಟಹಾಸದಿಂದ ಅಧಿಕಾರದಲ್ಲಿ ಮೆರೆಯುತ್ತಿದ್ದಾರೆ. ದುರಂತ ಎಂದರೆ, ಇಂತಹ ಕೆಟ್ಟ ಜನ ಬಹು ಸುಲಭವಾಗಿ ರಾಜಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಿ ವಿಜೃಂಭಿಸುತ್ತಿದ್ದಾರೆ.

ಇದರಿಂದ ದೇಶದೆಲ್ಲೆಡೆ ಅನ್ಯಾಯ-ಅಕ್ರಮ-ದೌರ್ಜನ್ಯಗಳು ನಡೆಯುತ್ತಿವೆ. ಭ್ರಷ್ಟಾಚಾರದ ಭೂತ ಇಡೀ ದೇಶದ ಆಡಳಿತ ವ್ಯವಸ್ಥೆಯನ್ನೇ ನುಂಗುತ್ತಿದೆ. ಇಂದು ಎಲ್ಲ ನೈಸರ್ಗಿಕ ಸಂಪತ್ತು ಲೂಟಿಯಾಗಿ, ದಟ್ಟದರಿದ್ರ ದೇಶವಾಗುವತ್ತ ದೇಶ ಸಾಗಿದೆ. ಹೀಗೆ ದೇಶದ ಆಡಳಿತ ವ್ಯವಸ್ಥೆ ಹಾಳಾಗಲು ಕಾರಣ ಅಯೋಗ್ಯ ಜನಪ್ರತಿನಿಧಿಗಳು, ಒಟ್ಟಾರೆ ಇಂಥ ಆಯೋಗ್ಯ ಜನಪ್ರತಿನಿಧಿಗಳನ್ನು ಆರಿಸುತ್ತಿರುವ ಮತದಾರರೆ ದೇಶದ ದುರವಸ್ಥೆಗೆ ಕಾರಣ ಎಂದರೆ ತಪ್ಪಾಗಲಾರದು.

ಜಾತಿ-ಹಣ-ಪಕ್ಷ ನೋಡಿ ಮತ ಹಾಕುವ ಕೆಟ್ಟ ಮತದಾರರು ದೇಶಕ್ಕೆ ಮಾರಕ. ಇಂಥ ಕೆಟ್ಟ ಮತದಾರರಿಂದ ಕೆಟ್ಟ ಜನಪ್ರತಿನಿಧಿ ಹುಟ್ಟಿಕೊಳ್ಳುತ್ತಾನೆಯೆ ಹೊರತು, ಜನ ಸೇವೆ ಮಾಡುವ-ದೇಶದ ಅಭಿವೃದ್ಧಿ ಬಗ್ಗೆ ಯೋಚಿಸುವ ಉತ್ತಮ ಜನಪ್ರತಿನಿಧಿ ಹುಟ್ಟಲಾರ.

ಸ್ವಾತಂತ್ರ್ಯಾ ನಂತರದಿ೦ದಲೂ ಯೋಗ್ಯ, ಅಭ್ಯರ್ಥಿಗಳನ್ನು ಗುರುತಿಸಿ, ಆರಿಸುವುದರಲ್ಲಿ ಭಾರತೀಯ ಮತದಾರರು ಸೋತಿರುವುದರಿಂದ ದೇಶದ ಸಮಸ್ಯೆಗಳು ಸರಿಪಡಿಸಲಾರದಷ್ಟು ಹದಗೆಟ್ಟು ಹೋಗಿವೆ. ಪ್ರಾಮಾಣಿಕರ ಸಂಖ್ಯೆ ಕುಸಿಯುತ್ತಾ, ಭ್ರಷ್ಟರ ಸಂಖ್ಯೆ ವಿಪರೀತವಾಗಿ ಬೆಳೆಯುತ್ತಿದೆ. ಪರಿಣಾಮವಾಗಿ ಕಷ್ಟಪಟ್ಟು ಪ್ರಾಮಾಣಿಕವಾಗಿ ದುಡಿಯುವವರಿಗಿಂತ ಭ್ರಷ್ಟಾಚಾರದಲ್ಲಿ ನಿರಾಯಾಸವಾಗಿ ಹಣ ಸಂಪಾದಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದಕ್ಕೆಲ್ಲಾ ಮೂಲ ಕಾರಣ ಪ್ರಾಮಾಣಿಕರನ್ನು ಚುನಾವಣೆಯಲ್ಲಿ ಆರಿಸದ ಮತದಾರರ ತಪ್ಪಿನಿಂದ ದೇಶಕ್ಕೆ ಸ್ವಾತಂತ್ರ, ಬಂದಾಗ ದೇಶದಲ್ಲಿ ಅನಾರಸ್ಥರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ. ಒಂದು ಹತ್ತು ವರ್ಷ ಪ್ರಜಾ ಪ್ರಭುತ್ವ ಅನುಷ್ಠಾನ ಮುಂದೂಡಬೇಕೆಂದು ಹಲವು ದೇಶ-ವಿದೇಶಗಳ ವಿದ್ವಾಂಸರು ಸಲಹೆ ನೀಡಿದ್ದರು. ಆದರೆ ಮಹಾತ್ಮ ಗಾಂಧೀಜಿ ಆ ಸಲಹೆಯನ್ನು ಒಪ್ಪಲಿಲ್ಲ, ಏಕೆಂದರೆ, ಸಾವಿರಾರು ವರ್ಷಗಳಿಂದ ವಿದೇಶಿ ಆಕ್ರಮಣಕಾರರ ಆಳ್ವಿಕೆಯಡಿ 2 ಇರುವಾಗಲೂ ಪ್ರತಿಭಟಿಸದೆ ಗುಲಾಮರಂತೆ ಬದುಕಿದ ಇತಿಹಾಸವಿರುವ ಭಾರತೀಯರು, ಸ್ವದೇಶಿ ಸರ್ವಾಧಿಕಾರಿ ವಿರುದ್ಧ ಧ್ವನಿ ಎತ್ತಿ ಧೈರ್ಯವಾಗಿ ಬದುಕುತ್ತಾರೆಯೇ ಅಂಶ ಮಹಾತ್ಮ ಗಾಂಧೀಜಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲು ಇಚ್ಚಿಸಿದ್ದರು. ಹಾಗೆಯೇ ಸಂವಿಧಾನ ರಚಿಸಿಕೊಟ್ಟ ಡಾ.ಬಿ.ಆ.೯ಅಂಬೇಡ್ಕರ್ ಸಹ ಬಡವ-ಶ್ರೀಮಂತ ಅಥವ ವಿದ್ಯಾವಂತ ಅವಿದ್ಯಾವಂತ-ಜಾತಿಧರ್ಮ ಅಂತ ಭೇದವಿಲ್ಲದೆ ಎಲ್ಲರಿಗೂ ಸಮಾನ ಮತದಾನದ ವ್ಯವಸ್ಥೆ ಕಲ್ಪಿಸಿದರು.

ದೇಶದಲ್ಲಿ ಸ್ವಾತಂತ್ರ್ಯ ಬರುವ ಮುನ್ನ ದೇಶದಲ್ಲಿ ಪ್ರಜಾ ಸರ್ಕಾರ ಇತ್ತಾದರೂ, ಈ ಸರ್ಕಾರವನ್ನ ಆರಿಸುವ ಮತದಾನದ ಅವಕಾಶ ಎಲ್ಲರಿಗೂ ಇರಲಿಲ್ಲ. ಶ್ರೀಮಂತರು ತೆರಿಗೆ ಪಾವತಿಸುವ ಆಯ್ಕೆ ಗಣ್ಯರಿಗೆ ಮಾತ್ರ ಮತದಾನದ ಅವಕಾಶವಿತ್ತು. ಆದರೀಗ ಎಲ್ಲರಿಗೂ ಸಮಾನವಾಗಿ ಮತದಾನದ ಹಕ್ಕು ನೀಡಲಾಗಿದೆ. ಇಂಥ ಪವಿತ್ರ ಮತದಾನದ ಹಕ್ಕನ್ನು ಉತ್ತಮವಾಗಿ ಬಳಸಿಕೊಂಡು ಉತ್ತಮ-ಸಭ್ಯ ನಡವಳಿಕೆಯ ಜನಪ್ರತಿನಿಧಿಗಳನ್ನು ಆರಿಸಿದ್ದರೆ ನಮ್ಮ ದೇಶದಲ್ಲಿರುವ ದಾರಿದ್ರ ಕಳೆದು, ಶ್ರೀಮಂತ ರಾಷ್ಟ್ರವಾಗಿ ಬೆಳೆಯುತಿತ್ತು.

ದೇಶದಲ್ಲಿ ಬಡತನ ಅನಕ್ಷರತೆ-ಜಾತೀಯತೆ ತೊಲಗಿ ಜನ ಸುಖ-ಶಾಂತಿ-ನೆಮ್ಮದಿಯಿಂದ ಬದುಕುತ್ತಿದ್ದರು. ಇಂದು ದೇಶದ ಜನ ತಮ್ಮ ದುರವಸ್ಥೆಯನ್ನು ತಾವೇ ತಂದುಕೊಂಡಿದ್ದಾರೆ. ಜನರ ಸಂಕಷ್ಟಕ್ಕೆ ಯೋಗ್ಯ ಅಭ್ಯರ್ಥಿಯನ್ನು ಆರಿಸದ ನಿರ್ಲಕ್ಷ್ಯವೇ ಕಾರಣವಾಗಿದೆ. ಭಾರತೀಯ ಸಂವಿಧಾನದ ಶಿಲ್ಪಿ ಎಂದೇ ಖ್ಯಾತರಾದ ಡಾ.ಬಾಬಾ ಸಾಹೇಬ್ ಅಂಬೇಡ್ಕ‌ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಸರ್ವರಿಗೂ ಸಮಾನ ಮತದಾನದ ಅವಕಾಶ ನೀಡುವ ನಿರ್ಧಾರ ಮಾಡಿದಾಗ, ಸಮಿತಿಯ ಸದಸ್ಯರಿಂದ ಮತ್ತು ಸಮಾಜ ಸೇವಾ ನಾಯಕರಿಂದ ಕೆಲ ಆಕ್ಷೇಪ ವ್ಯಕ್ತವಾಯಿತು. ಅವಿದ್ಯಾವಂತರು ಮತ್ತು ವಿಚಾರವಂತಿಕೆ ತಿಳಿಯದ ಬಡ ಮುಗ್ಧ ಮತದಾರರಿಗೆ ಕೆಟ್ಟ ಅಭ್ಯರ್ಥಿಗಳು ಹಣ ಅಥವಾ ಇತರೆ ಉಡುಗೊರೆ ಆಮಿಷ ನೀಡಿ ಮತಗಳನ್ನು ಖರೀದಿಸಬಹುದು. ಇದರಿಂದ ಪ್ರಜಾಪ್ರಭುತ್ವ ನಗೆಪಾಟಲಿಗೀಡಾಗಿ, ದೇಶ ಸಮಾಜಘಾತುಕ ಶಕ್ತಿಗಳ ಕೈವಶವಾಗಬಹುದೆಂದು ಎಚ್ಚರಿಸಿದ್ದರು.

ಈ ಸಂದರ್ಭದಲ್ಲಿ ಭಾರತೀಯ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಡಾ.ಬಾಬಾ ಸಾಹೇಬ್ ಬಿ.ಆ.೯ಅಂಬೇಡ್ಕರ್ ಹೇಳಿದ ಮಾತನ್ನು ಪ್ರತಿಯೊಬ್ಬ ಮತದಾರ ಮತ ಚಲಾಯಿಸುವ ಮುನ್ನ ನಾಪಿಸಿಕೊಳ್ಳಬೇಕು. ”ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯೆ ಅಥವ ಶ್ರೀಮಂತಿಕೆ ನೋಡಿ

ಮತದಾನದ ಹಕ್ಕನ್ನು ನೀಡಲು ಸಾಧ್ಯವಿಲ್ಲ. ಇಂಥ ಅಸಮಾನತೆಯ-ಭೇದಭಾವದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದರೂ ಒಂದೇ, ಬರದಿದ್ದರೂ ಒಂದೇ. ನಮ್ಮ ಭಾರತೀಯರಲ್ಲಿ ಬಹು ಜನರಿಗೆ ವಿದ್ಯೆ ಇಲ್ಲದಿರಬಹುದು, ಆದರೆ ಬುದ್ದಿ ಇದೆ. ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದೆಂದು ನಿರ್ಧರಿಸುವ ಗುಣವಿದೆ. ಇಂಥ ಒಳ್ಳೆ ವಿವೇಕ – ಒಳ್ಳೆ ಗುಣವಿರುವುದರಿಂದಲೇ ನಮ್ಮ ದೇಶದಲ್ಲಿ ಮಹಿಳೆಯರ ಪಾವಿತ್ರ್ಯ ಉಳಿದಿರುವುದು.

ಎಂಥ ಬಡತನವಿದ್ದರೂ ತಮ್ಮ ಮನೆಯ ಹೆಣ್ಣು ಮಕ್ಕಳ ಮಾನ ಮಾರಿ ಹಣ ಸಂಪಾದಿಸಬೇಕೆಂಬ ಅನೈತಿಕ ಬುದ್ದಿ ನಮ್ಮ ಜನರಲ್ಲಿ ಬಂದಿಲ್ಲ. ಈ ಕಾರಣದಿಂದಲೇ ನಮ್ಮ ಭಾರತೀಯರು ಹಣಕ್ಕಿಂತ ಮಾನಕ್ಕೆ ಹೆಚ್ಚು ಮಾನ್ಯತೆ ಕೊಡುತ್ತಾ ಬಂದಿದ್ದಾರೆ. ಹೀಗಿರುವಾಗ, ದೇಶವನ್ನು ಹೆತ್ತ ತಾಯಿಯಂತೆ ನೋಡುವ ಭಾರತೀಯರು, ದೇಶದ ಹಿತ ಕಾಯುವ ಚುನಾವಣಾ ಕಣವನ್ನು ಹಣಕ್ಕಾಗಿ ಅಪವಿತ್ರಗೊಳಿಸುತ್ತಾರೆಂಬ ನಂಬಿಕೆ ನನಗಿಲ್ಲ. ಮತದಾನದ ಪಾವಿತ್ರ್ಯವನ್ನು ಪ್ರತಿಯೊಬ್ಬ ಮತದಾರ ತನ್ನ ಮನೆಯ ಹೆಣ್ಣು ಮಕ್ಕಳ ಮಾನದಷ್ಟೆ ಪವಿತ್ರವಾಗಿ ಕಾಪಾಡಿಕೊಳ್ಳುತ್ತಾರೆಂಬ ವಿಶ್ವಾಸ ನನಗಿದೆ” ಎಂದು ಭಾರತೀಯ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಡಾ.ಬಾಬಾ ಸಾಹೇಬ್ ಬಿ.ಆ.೯ಅಂಬೇಡ್ಕರ್ ಸರ್ವರಿಗೂ ಸಮಾನ ಮತದಾನದ ಹಕ್ಕು ನೀಡುವಾಗ ಭಾರತೀಯರ ಗುಣ ಮೌಲ್ಯವನ್ನು ಎತ್ತಿ ಹಿಡಿದು ಸಮರ್ಥವಾಗಿ ವಾದಿಸಿದ್ದರು.

ದುರಾದೃಷ್ಟವೆಂದರೆ, ಅಂಬೇಡ್ಕರ್ ನಂಬಿಕೆಯನ್ನು ಕಾಲಾನಂತರದಲ್ಲಿ ಹಲ ಮತದಾರರು ಸುಳ್ಳು ಮಾಡುತ್ತಾ ಬಂದಿದ್ದಾರೆ. ಇಂದು ದೇಶದ ಪ್ರಜಾಪ್ರಭುತ್ವವನ್ನು ಕಾಡುತ್ತಿರುವುದು ಜಾತಿ ನೋಡಿ ಮತ ಹಾಕುವ-ಹಣ ಕೊಟ್ಟವರಿಗೆ ಮತ ನೀಡುವ ಕೆಲ ಮತದಾರರ ದುರ್ಬುದ್ದಿಯಿಂದ. ಮತದಾನದ ಪಾವಿತ್ರ್ಯತೆ ಬಗ್ಗೆ ಜನರಲ್ಲಿ ಆದ್ಯತೆ ಕಡಿಮೆಯಾಗುತ್ತಿದೆ. ಎಂಥ ಕೆಟ್ಟವನಾದರೂ ಸ್ವಜಾತಿಯವನೆಂದು ಮತ ಹಾಕುವ ಮತ್ತು ಹಣ ಕೊಟ್ಟವ ಎಂಥ ಕೇಡಿಯಾದರೂ ಅವನಿಗೇ ಮತ ಹಾಕುವ ಮತದಾರರ ದುರ್ಬುದ್ದಿಯಿಂದ ಕೆಟ್ಟ ಜನರೇ ಚುನಾವಣೆಗಳಲ್ಲಿ ವಿಜೃಂಭಿಸುತ್ತಿದ್ದಾರೆ. ಹೀಗಾಗಿ ಒಳ್ಳೆ ಸನ್ನಡತೆಯ ಜನ ಚುನಾವಣೆಗೆ ನಿಲ್ಲುತ್ತಿಲ್ಲ. ಅಧಿಕಾರಕ್ಕೆ ಬಂದ ಭ್ರಷ್ಟರು ದೇಶದ

ಹಣಕಾಸು ಬೊಕ್ಕಸ ದೋಚುತ್ತಿದ್ದಾರಲ್ಲದೆ, ನಮ್ಮ ಎಲ್ಲಾ ಪ್ರಾಕೃತಿಕ ಸಂಪತ್ತನ್ನ ಗಣಿಗಾರಿಕೆ ಹೆಸರಿನಲ್ಲಿ ನಾಶ ಮಾಡುತ್ತಿದ್ದಾರೆ. 3 ಆದ್ದರಿಂದ ನಮ್ಮನ್ನು ಕಾಪಾಡುವ ಯೋಗ್ಯ ಅಭ್ಯರ್ಥಿಯನ್ನು ಮತದಾರರೆ ಹುಡುಕಿ, ನಿಲ್ಲಿಸಿ, ಅವರಿಗೆ ಮತ ನೀಡಿ ಗೆಲ್ಲಿಸದಿದ್ದರೆ, ನಾವು ಸರ್ವ ನಾಶವಾದಂತೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು. ಭವಿಷ್ಯದಲ್ಲಿ ಭಾರತಕ್ಕೆ ಕಾದಿರುವ ಗಂಡಾಂತರದಿಂದ ಪಾರಾಗಲು ವ್ಯಾಪಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ.

ಬಹು ಮುಖ್ಯವಾಗಿ ನಮ್ಮ ಅರ್ಥ ವ್ಯವಸ್ಥೆಯನ್ನು ಸ್ವಾತಂತ್ರ್ಯಾನಂತರದಿಂದಲೂ ಕಾಪಾಡಿರುವುದು ಕೃಷಿ ಕ್ಷೇತ್ರ, ರೈತರ ಶ್ರಮ-ತ್ಯಾಗದ ಫಲದಿಂದಲೆ ದೇಶ ಆಹಾರ ಕ್ಷಾಮದಿಂದ ದೂರಾಗಿ ಪ್ರಗತಿ ಪಥದತ್ತ ಸಾಗಿತ್ತು. ದುರಾದೃಷ್ಟವಶಾತ್, 2004 ರಿಂದ 2014ರವರೆಗೆ ಪ್ರಧಾನಿಯಾಗಿದ್ದ ಮನೋಹನ್ ಸಿಂಗ್ ಮಾಡಿದ ಆರ್ಥಿಕ ಯಡವಟ್ಟಿನಿಂದ ವಿದೇಶಿ ಕಪ್ಪು ಹಣ ಎಫ್‌ಡಿಐ ಹೆಸರಿನಲ್ಲಿ ದಂಡಿಯಾಗಿ ರಿಯಲ್ ಎಸ್ಟೇಟ್ ಮೇಲೆ ಅತಿ ವೃಷ್ಟಿಯಂತೆ ಸುರಿದು ಕೃಷಿ ಕ್ಷೇತ್ರವನ್ನು ಹಾಳುಗೆಡವಿತು. ಶ್ರಮಿಕ ರೈತರಿಂದ ಹೇಗೋ ಒಂದಿಷ್ಟು ಬೆಳೆ ಬರುತಿತ್ತು.ಅದು ಹಸಿದ ಭಾರತೀಯರ ಒಡಲು ತಣಿಸುತ್ತಿತ್ತು.

ಆದರೆ, ಸುನಾಮಿ ಹಣದ ಹಾವಳಿಯಿಂದ ಲಕ್ಷಾಂತರ ಕೃಷಿ ಭೂಮಿ ಮಾರಾಟವಾಗಿ ಯಾವ ಬೆಳೆಯು ಇಲ್ಲದೆ ಹಾಳುಬಿದ್ದಿದೆ. ಇದು ಆಹಾರದ ಉತ್ಪಾದಕತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಜೊತೆಗೆ ಕೃಷಿ ಕೆಲಸ ಲಾಭದಾಯಕವಲ್ಲ ಎಂದು ಸಿಟಿ ಷೋಕಿಗೆ ಮಾರುಹೋಗಿರುವ ಗ್ರಾಮೀಣ ಯುವಕರು ನಗರದಲ್ಲಿ ಸಿಗುವ ಚಾಕರಿ ಕೆಲಸಗಳತ್ತ ಗುಳೆ ಹೊರಟಿದ್ದಾರೆ. ಕರ್ನಾಟಕ ಸೇರಿದಂತೆ ಭಾರತದ ಬಹುತೇಕ ಹಳ್ಳಿಗಳಲ್ಲಿ 30 ವರ್ಷದೊಳಗಿನ ಯುವಕರ ಸರಾಸರಿ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕೃಷಿ ಕೆಲಸ ಮಾಡಲು ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದಲೂ ಆಹಾರದ ಉತ್ಪಾದಕತೆ ಕುಸಿತ ಕಾಣುತ್ತಿದೆ. ಇದೇ ರೀತಿ ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಾ, ಆಹಾರ ಉತ್ಪಾದನೆ ಕುಸಿಯುತ್ತಾ ಸಾಗಿದರೆ ಈಗಿರುವ ಕೆ.ಜಿ.ಗೆ 40-60 ರೂಪಾಯಿ ಅಕ್ಕಿ ದರ ಮುಂದಿನ 3 ವರ್ಷದೊತ್ತಿಗೆ 100 ರೂಪಾಯಿಯಾದರೂ ಅಚ್ಚರಿ ಇಲ್ಲ. ಇದರಿಂದ ಜನ ಉಣಲು-ಉಡಲು ಕಿತ್ತಾಡಬೇಕಾದ ಪರಿಸ್ಥಿತಿ ಎದುರಾಗಬಹುದು.

ಜನ ಜಾಗೃತರಾಗಿ ಹಣ, ಜಾತಿ, ಪಕ್ಷ ಮರೆತು ಒಳ್ಳೆ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆರಿಸಿ ಭ್ರಷ್ಟ ರಾಜಕಾರಣಿಗಳಿಗೆ ಬಾಸುಂಡೆ ಬರುವಂತೆ ಬಾರಿಸಬೇಕಿದೆ. ಏಕೆಂದರೆ ಭ್ರಷ್ಟರ ಹಣವೇ ಕಪ್ಪು ಹಣವಾಗಿ ವಿದೇಶಕ್ಕೆ ಹೋಗಿ ಮತ್ತೆ ಅಲ್ಲಿಂದ ಬಿಳಿಯಾಗಿಸಿಕೊಳ್ಳುವ ಹವಾಲ ಅವಾಂತರದಿಂದಲೇ ಭಾರತದ ಅರ್ಥ ವ್ಯವಸ್ಥೆ ಕುಸಿಯುತ್ತಿದೆ. ಆದ್ದರಿಂದ ಕರ್ನಾಟಕದ ಜನ ಮೇ.10 ರಂದು ನಡೆಯುವ ವಿಧಾನಸಭಾ ಚುನಾವಣೆ ಹೊತ್ತಿನಲ್ಲಾದರೂ ಪ್ರಬುದ್ಧಶನ-ಪ್ರಚಂಡತನ ತೋರಿಸಬೇಕಿದೆ.

ಹಾಗಲ್ಲದೆ, ಎಂದಿನಂತೆ ಉದಾಸೀನತೆಯಿಂದ ವರ್ತಿಸಿದರೆ, ಈಗಿನ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳಂತೆ ಭಾರತ ಆರ್ಥಿಕವಾಗಿ ದಿವಾಳಿ ಎದ್ದು, ಪ್ರತಿ ಮನೆಮನೆಯಲ್ಲೂ ಆಹಾರಕ್ಕೆ ಹಾಹಾಕಾರ ಏಳಬಹುದು, ಎಚ್ಚರ.

-ಮಣಿಕಂಠ ತ್ರಿಶಂಕರ್, ಮೈಸೂರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
34905
ಮಣಿಕಂಠ ತ್ರಿಶಂಕರ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು