News Karnataka Kannada
Thursday, May 02 2024
ವಿಶೇಷ

ಶಾಲೆಯಲ್ಲಿ ಶಿಕ್ಷಕರೊಬ್ಬರು ಬಿಡಿಸಿದ ಚಿತ್ರಗಳು ಮಾಯ!

Belthangady
Photo Credit : By Author

ಬೆಳ್ತಂಗಡಿ: ತಾಲೂಕಿನ ಬೆಳಾಲು ಶಾಲೆಯಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಭವ್ಯ ಕಲಾಗ್ಯಾಲರಿಯನ್ನು ನಿರ್ಮಸಿದರೆ, ಇಲ್ಲೊಂದು ಶಾಲೆಯಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರೊಬ್ಬರು ಬಿಡಿಸಿದ ಚಿತ್ರಗಳನ್ನು ಅಳಸಿ ಹಾಕಿರುವ ವಿದ್ಯಮಾನ ನಡೆದಿದೆ.

1967ರಲ್ಲಿ ಐತ್ತೂರು ಎಂಬಲ್ಲಿನ ಶಾಲೆಯಿಂದ ವರ್ಗಾವಣೆಗೊಂಡು ಶಿಶಿಲ ಸರಕಾರಿ ಶಾಲೆಗೆ ಬಂದವರು ಶಿವರಾಮ ಅವರು. ತಮ್ಮ ವಿಶೇಷ ಬೋಧನಾ ಶೈಲಿ, ಅಪೂರ್ವ ಚಿಂತನೆ, ಶಿಸ್ತು ಮೂಲಕ ಒಂದೆರಡು ವರ್ಷಗಳಲ್ಲೇ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾದರು.

ಅವರನ್ನು ಗುರುಗಳಾಗಿ ಪಡೆದವರು ಈಗಲೂ ಧನ್ಯತೆಯನ್ನು ಕಾಣುತ್ತಾರೆ. ತಮ್ಮ ಬರವಣಿಗೆ, ಕವಿತ್ವ, ಚಿತ್ರಕಲೆಯ ಮೂಲಕ ತಾಲೂಕಿನಾದ್ಯಂತ ಅವರು ಶಿವರಾಮ ಶಿಶಿಲರೆಂದೇ ಪ್ರಸಿದ್ಧರಾದರು. ಇವರ ಕತೃತ್ವಕ್ಕೆ ಮೆಚ್ಚಿ ರಾಷ್ಟ್ರಪತಿಯವರು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಬರಿದಾದ ಶಾಲೆಯ ಗೋಡೆಯ ಮೇಲೆ ಅವರು ನೂರಕ್ಕೂ ಹೆಚ್ಚು ಬಿಡಿಸಿದ ಆಯಿಲ್ ಪೈಟಿಂಗ್ ಕಣ್ಮನ ಸೆಳೆಯುತ್ತಿತ್ತು. 80-90ರ ದಶಕದಲ್ಲಿ ಈ ಚಿತ್ರಗಳನ್ನು ಬಿಡಿಸಬೇಕಾದರೆ ಅವರು ಪಟ್ಟ ಪರಿಶ್ರಮ, ಅದಕ್ಕಾಗಿ ಮಾಡಿದ ಖರ್ಚು ಅಪಾರ. ಮೂರು ನಾಲ್ಕು ಕಿ.ಮೀ. ದೂರದ ಬರ್ಗುಳ ಎಂಬಲ್ಲಿನ ಮನೆಯಿಂದ ನಡೆದು ಕೊಂಡೇ ಬರುತ್ತಿದ್ದ ಅವರು, ಶಾಲಾ ಅವಧಿ ಮುಗಿದ ಕೂಡಲೇ ಅವರ ಕೈ ಕುಂಚ ಹಿಡಿಯುತ್ತಿತ್ತು. ಹೊತ್ತು ಮುಳುಗುವ ತನಕ ಪೈಟಿಂಗ್ ಮಾಡುತ್ತಿದ್ದರು. ಒಳಗಿನ ಹಾಗು ಹೊರಗಿನ ಗೊಡೆಯ ಸುತ್ತ ಗಾದೆ ಮಾತುಗಳು, ಅಮೃತವಚನಗಳ ಸಾಲು ಸಾಲುಗಳನ್ನು ಮೂಡಿಸಿದ್ದರು.

ಜೊತೆಗೆ ವಿವಿಧ ರೀತಿಯ ಕಣ್ಮನ ಸೆಳೆಯುವ ನೂರಕ್ಕೂ ಹೆಚ್ಚು ಚಿತ್ತಾರಗಳನ್ನು ಬಿಡಿಸಿದ್ದರು. ಇದನ್ನು ನೋಡಲೆಂದೇ ಜನ ಬರುತ್ತಿದ್ದರು. 1984ರಲ್ಲಿ ಚಿತ್ರಿಸಿದ ಶಾರದೆ ಹಾಗೂ 1994 ರಲ್ಲಿ ಬಿಡಿಸಿದ ಸಮುದ್ರ ಮಥನ ಚಿತ್ರಗಳನ್ನು ಹೊರತು ಪಡಿಸಿದರೆ ಹೆಚ್ಚು ಕಡಿಮೆ ಉಳಿದ ಎಲ್ಲಾ ವಿಶೇಷ ಚಿತ್ರಗಳು ಇದೀಗ ಶಾಲೆಗೆ ಸುಣ್ಣ-ಬಣ್ಣ ಹೊಡೆಯುವ ನೆಪದಲ್ಲಿ ಅಳಿಸಿ ಹಾಕಲಾಗಿರುವುದು ದುರಂತ.

2021ರಲ್ಲಿ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವ್ಯಕ್ಕಾಗಿ ಶಿಶಿಲಕ್ಕೆ ಆಗಮಿಸಿದಾಗ ಶಾಲಾಭಿವೃದ್ಧಿ ಸಮಿತಿ ಶಾಲಾ ದುರಸ್ತಿಯ ಬಗ್ಗೆ ಮನವಿ ಸಲ್ಲಿಸಿತು. ಅದರಂತೆ ಶಾಲೆಗೆ 7 ಲಕ್ಷ ರೂ. ಅನುದಾನ ಮಂಜೂರಾಯಿತು. ಕಟ್ಟಡ, ಮಾಡು ರಿಪೇರಿ ಆಯಿತು. ಟೈಲ್ಸ್ ಹಾಕಿದರು.

ಜೊತೆಗೆ ಗೋಡೆಗಳಿಗೆ ಬಣ್ಣವನ್ನೂ ಬಳಿದರು. ಇದರೊಂದಿಗೆ ಇನ್ನೂ ಸುಮಾರು 30 ವರ್ಷಗಳ ಕಾಲ ಅಚ್ಚಳಿಯದೆ
ರಾರಾಜಿಸುವಂತಿದ್ದ ಶಿವರಾಮ ಶಿಶಿಲರ ಚಿತ್ರಗಳು ಮಾಯವಾದವು!. ಗತ ಕಾಲದ ವೈಭವ ನೆನಪಿಗೆ ಮಾತ್ರ ಸೀಮಿತವಾಯಿತು.

ಈ ವಿದ್ಯಮಾನದಿಂದ ಶಿವರಾಮರ ಶಿಷ್ಯಂದಿರಿಗೆ ತುಂಬಾ ನೋವಾಗಿರುವುದಂತೂ ಸತ್ಯ. ಚಿತ್ರಗಳನ್ನು ಕಾಪಾಡುವ ಮೂಲಕ ಸುಣ್ಣ ಬಣ್ಣ ಬಳಿಯಬಹುದಿತ್ತು ಎಂಬ ಅಭಿಪ್ರಾಯ ಶಿಶಿಲರ ಅಭಿಮಾನಿಗಳದ್ದು. ಆದರೆ ಏನು ಮಾಡುವುದು?  ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ (ಈ ಮಾತನ್ನೂ ಶಿಶಿಲರು ಗೋಡೆಯ ಮೇಲೆ ಬರೆದಿದ್ದರು) ಎಂಬಂತೆ ಎಲ್ಲರೂ ಇಂದಿನ ವ್ಯವಸ್ಥೆಯೊಳಗೆ ಮೂಕ ಪ್ರೇಕ್ಷಕರಾಗಿದ್ದಾರೆ ಅಷ್ಟೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು