News Karnataka Kannada
Sunday, April 28 2024
ಆರೋಗ್ಯ

ನೆಮ್ಮದಿಯಿಂದ ದೈಹಿಕ ಆರೋಗ್ಯ ಸಾಧ್ಯ!

Photo Credit :

ನೆಮ್ಮದಿಯಿಂದ ದೈಹಿಕ ಆರೋಗ್ಯ ಸಾಧ್ಯ!

ಈ ನೆಲದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯ ಬದುಕಿಗಾಗಿ ಹಾತೊರೆಯುತ್ತಾನೆ. ಶ್ರೀಮಂತನಿರಲಿ, ಬಡವನಿರಲಿ ಎಲ್ಲೋ ಒಂದು ಸಂದರ್ಭದಲ್ಲಿ ಆತ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ನೆಮ್ಮದಿಗಾಗಿ ಹಲವು ಮಾರ್ಗಗಳನ್ನು ಅರಸುತ್ತಾನೆ. ಹಾಗಾದರೆ ನೆಮ್ಮದಿ ಎಂದರೇನು? ಅದನ್ನು ಪಡೆಯುವ ಮಾರ್ಗವಾದರೂ ಯಾವುದು? ಎಂಬಂತಹ ಪ್ರಶ್ನೆಗಳು ನಮ್ಮನ್ನು ಕಾಡುವುದು ಸಹಜ. ಸುಲಭವಾಗಿ ಹೇಳುವುದಾದರೆ ನೆಮ್ಮದಿ ಎಂಬುದು ಹಣ ನೀಡಿ ಪಡೆಯುವಂತಹದಲ್ಲ. ಅದನ್ನು ನಾವು ನಮ್ಮಿಂದಲೇ ಪಡೆಯಬೇಕು. ಒಂದು ವೇಳೆ ನೆಮ್ಮದಿ ನಮ್ಮಲ್ಲಿ ಇಲ್ಲವಾದರೆ ಖಂಡಿತಾ ಆರೋಗ್ಯವಾಗಿರಲು ಸಾಧ್ಯವಿಲ್ಲ.

ಜಗತ್ತಿನಲ್ಲಿ ನಾವು ಎಲ್ಲವನ್ನೂ, ಎಲ್ಲ ರೀತಿಯ ಐಭೋಗವನ್ನು ಹಣ ನೀಡಿ ತಂದು ಮನೆಯೊಳಗೆ ಕೂಡಿ ಹಾಕಿಕೊಳ್ಳಬಹುದು. ಆದರೆ ಎಲ್ಲವೂ ಇದ್ದು ನೆಮ್ಮದಿಯೇ ಇಲ್ಲದೆ ಹೋದರೆ ಬದುಕಲಾಗದು. ಹಣ ಸಂಪಾದನೆಯಿಂದ ಲೌಕಿಕ ಸುಖಗಳಿಂದ ನೆಮ್ಮದಿ ಪಡೆಯಬಹುದಾಗಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ. ಸುಖಾಪೇಕ್ಷೆಗಳನ್ನು ಬೆನ್ನು ಹತ್ತುವ ನಾವು ನಮಗರಿವಿಲ್ಲದಂತೆಯೇ ನೆಮ್ಮದಿಯನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ. ಪ್ರತಿಯೊಂದನ್ನು ಪಡೆದಾಗಲೂ ನೆಮ್ಮದಿ ಪಡದೆ ಇನ್ನಷ್ಟು ಪಡೆಯುವ ತವಕದಲ್ಲಿ ಮೊದಲು ಪಡೆದ ಸುಖವನ್ನು ಅದರಿಂದ ದೊರೆತ ನೆಮ್ಮದಿಯನ್ನು ಅನುಭವಿಸದೆ ಮುನ್ನಡೆಯುತ್ತೇವೆ.

ನಾವು ತುಳಿದ ಮಾರ್ಗ ಸುಗಮವಾಗಿದ್ದರೆ ತೊಂದರೆಯಿಲ್ಲ. ಆದರೆ ಕೆಲವೊಮ್ಮೆ ಅಡೆತಡೆಗಳು ಬಂದು ನಮ್ಮ ನೆಮ್ಮದಿಯನ್ನು ದೋಚುವುದರಿಂದ ಪರದಾಡಬೇಕಾದ ಪರಿಸ್ಥಿತಿಯೂ ಬಂದೊದಗುತ್ತದೆ.

ನೈತಿಕತೆ ಮರೆತು ಬದುಕುವವರು, ಉದ್ದೇಶಪೂರ್ವಕವಾಗಿ ಇನ್ನೊಬ್ಬರಿಗೆ ಕೆಡುಕನ್ನು ಬಯಸುವಂತಹ ಮನೋಭಾವದವರು, ಮಾದಕ ಪಾನೀಯಗಳನ್ನು ಸೇವಿಸುವವರು, ಸಮತೋಲನೆಯಿಲ್ಲದೆ ಅಥವಾ ವ್ಯವಸ್ಥಿತವಾಗಿ ಬದುಕು ಕಟ್ಟಿಕೊಳ್ಳದವರು, ಸ್ವೇಚ್ಛೆಯಾಗಿ ಕುಡಿಯುವ, ತಿನ್ನುವ, ಮಾತನಾಡುವ ಹೆಚ್ಚು ಕಾಲ ಮಲಗುವ ಅಥವಾ ನಿದ್ರೆಯನ್ನೇ ಮಾಡದಿರುವವರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗಿರುವ ವ್ಯಕ್ತಿಗಳು ನೆಮ್ಮದಿಯನ್ನು ಬಹುಬೇಗ ಕಳೆದುಕೊಳ್ಳುತ್ತಾರೆ ಇದರಿಂದ ದೈಹಿಕ ಆರೋಗ್ಯವನ್ನು ಕೂಡ ಕಳೆದುಕೊಳ್ಳುತ್ತಾರೆ.

ಇನ್ನು ತಮಗೆ ಸಂಬಂಧಿಸಿದಲ್ಲದ ನಿರರ್ಥಕವಾದ ವಿವಾದಗಳಲ್ಲಿ ತೊಡಗಿಸಿಕೊಳ್ಳುವ ಅಭ್ಯಾಸವುಳ್ಳವರು, ಇನ್ನೊಬ್ಬರ ಖಾಸಗಿ ವಿಚಾರಗಳಲ್ಲಿ ಸುಮ್ಮನೆ ತಲೆ ತೂರಿಸುವ ಅಥವಾ ಪರರ ದೋಷಗಳನ್ನು ಕೆದಕಿ ತೋರಿಸುವುದರಲ್ಲಿ ಅತ್ಯುತ್ಸಾಹ ತೋರುವ ವ್ಯಕ್ತಿಗಳು ಅಲ್ಲದೆ, ಅನಗತ್ಯವಾಗಿ ದೇಹದಂಡನೆ ಮಾಡಿಕೊಳ್ಳುವವರು ವ್ಯರ್ಥವಾದ ಉದ್ದೇಶಗಳಿಗಾಗಿ ತಮ್ಮ ಶಕ್ತಿಯನ್ನು ದುವ್ರ್ಯಯ ಮಾಡಿಕೊಳ್ಳುವವರು, ಅತಿ ಕಠಿಣವಾದ ಮೌನಾವೃತವನ್ನು ಬಲವಂತವಾಗಿ ಹೇರಿಕೊಳ್ಳುವವರು, ಸ್ವಪ್ರತಿಷ್ಠಾನಿರತರಾಗಿರುವವರು ಆಗಾಗ್ಗೆ ನೆಮ್ಮದಿಯನ್ನು ಕಳೆದುಕೊಂಡು ತೊಳಲಾಡುತ್ತಿರುತ್ತಾರೆ.

ತಮ್ಮ ಇತಿಮಿತಿಯಲ್ಲಿ ಚಾಪೆಯಿದ್ದಷ್ಟೆ ಕಾಲು ಚಾಚು ಎಂಬ ಗಾದೆಯಂತೆ ನಡೆಯದೆ ದುರಾಸೆಯ ನಡೆನುಡಿಯವರಾಗಿದ್ದು, ಇನ್ನೊಬ್ಬರ ಅಭಿವೃದ್ಧಿಯನ್ನು ಅಥವಾ ನೇರ ನಡೆಯನ್ನು ಕಂಡು ಮನಸ್ಸಿನಲ್ಲಿಯೇ ಕೊರಗುತ್ತಾ ತಮ್ಮಲ್ಲಿರುವ ನೆಮ್ಮದಿಯನ್ನು ಹಾಳು ಮಾಡಿಕೊಂಡರೆ, ಇನ್ನು ಕೆಲವರು ಅಪರಾಧಿ ಭಾವದಿಂದ ಕೀಳರಿಮೆಯಿಂದ, ಅಹಂಕಾರದಿಂದ ಬೀಗುತ್ತಾ ನೆಮ್ಮದಿಗೆ ಸಂಚಕಾರ ತಂದುಕೊಳ್ಳುತ್ತಾರೆ. ಬಹಳಷ್ಟು ಮಂದಿ ಮತ್ತೊಬ್ಬರ ವಿಷಯಕ್ಕಾಗಿಯೇ ತಮ್ಮಲ್ಲಿರುವ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ನಾವು ಮಾಡಿದ ಅಪರಾಧಗಳಿಗೆ, ಪಾಪಕರ ಕಾರ್ಯಗಳನ್ನು ನೆನೆಯುತ್ತಾ ತಕ್ಷಣದ ನೆಮ್ಮದಿಯನ್ನು ಕೊಂದು ಕೊಳ್ಳುತ್ತಾರೆ. ಹೀಗಾಗಿ ಈ ಎಲ್ಲ ಗುಣಗಳನ್ನು ಹೊಂದಿದವರು ಒಂದೆಡೆ ಕುಳಿತು ಪ್ರಾಂಜಲ ಮನಸ್ಸಿನಿಂದ ತಾಳೆ ಹಾಕಿ ನೋಡಬೇಕು. ನೆಮ್ಮದಿಗೆ ಇವುಗಳಲ್ಲಿ ಯಾವುದಾದರೊಂದು ಭಂಗ ತಂದೇ ತಂದಿರುತ್ತದೆ.

ನಮ್ಮಲ್ಲಿ ನೆಮ್ಮದಿ ನೆಲೆಸಬೇಕಾದರೆ ಮೊದಲಿಗೆ ಇದ್ದುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಮನೋಭಾವವನ್ನು ಹೊಂದಬೇಕು. ದುರಾಸೆಗಳನ್ನು ತ್ಯಜಿಸಿ ನಮ್ಮ ಮನಸ್ಸನ್ನು ಎಲ್ಲ ಬಗೆಯ ಪಾಪ ಪ್ರಜ್ಞೆಗಳಿಂದ ಮುಕ್ತಮಾಡಿಕೊಳ್ಳಬೇಕು. ನಾವು ಮಾಡಿರಬಹುದಾದ ಪಾಪಗಳನ್ನು ದೇವರಲ್ಲಿ ನಿವೇದಿಸಿಕೊಂಡು ಮತ್ತೆ ಇಂತಹ ಅಪರಾಧಗಳನ್ನು ಎಸಗದಂತೆ ದೃಢತೆಯನ್ನು ದಯಪಾಲಿಸುವಂತೆ ಸದಾ ಬೇಡಿಕೊಳ್ಳಬೇಕು.  ಪ್ರತಿಯೊಬ್ಬರು ನೆಮ್ಮದಿಯ ಬದುಕು ಬಯಸುತ್ತಾರೆ. ಹೀಗಿರುವಾಗಿ ನೆಮ್ಮದಿ ಕಳೆದುಕೊಳ್ಳುವ ವಿಚಾರವನ್ನೇಕೆ ಮೈಮೇಲೆ ಎಳೆದುಕೊಂಡು ದೈಹಿಕ ಆರೋಗ್ಯ ಹಾಳುಮಾಡಿಕೊಳ್ಳಬೇಕಲ್ಲವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು