News Karnataka Kannada
Sunday, May 05 2024
ಇತರೆ

ಮದ್ಯಪಾನದಿಂದ ದೂರವಿದ್ದಷ್ಟು ಜೀವನ ಸುಖಮಯ

ಮದ್ಯಪಾನ
Photo Credit : Freepik

ಮೊದಲಿಗೆ ಪಾರ್ಟಿ, ಎಂಜಾಯ್ ಗೆ ಹೀಗೆ ಖುಷಿಯಿಂದ ಆರಂಭವಾಗುವ ಕುಡಿತ ಬಳಿಕ ಬೇಸರ, ಟೆನ್ಷನ್ ಆದಾಗಲೂ ಕುಡಿಯಬೇಕೆನಿಸುತ್ತದೆ. ನಂತರ ಅದು ಚಟವಾಗಿ ಖುಷಿಯಿರಲಿ, ಬೇಸರವಿರಲಿ, ಹಣವಿರಲಿ, ಇಲ್ಲದಿರಲಿ ಕುಡಿಯಬೇಕೆನಿಸುತ್ತದೆ. ಆರಂಭದಲ್ಲಿಯೇ ಅದನ್ನು ಮಟ್ಟ ಹಾಕದೆ ಹೋದರೆ ಅದು ಚಟವಾಗಿ ಪರಿಣಮಿಸುತ್ತದೆ. ಆಗ ಕುಡಿಯದೆ ಬದುಕಲಾಗಲ್ಲ ಎಂಬ ಸ್ಥಿತಿಗೆ ವ್ಯಕ್ತಿ ಬಂದು ಬಿಡುತ್ತಾನೆ.

ಕೆಲವೊಮ್ಮೆ ಕುಡಿತದ ನಶೆಯಲ್ಲಿರುವ ವ್ಯಕ್ತಿಗೆ ತಾನೇನು ಮಾತಾಡುತ್ತಿದ್ದೇನೆ ಎಂಬುದು ಗೊತ್ತಾಗದೆ ಏನೇನೋ ಮಾತನಾಡುವುದು, ಜಗಳವಾಡುವುದು ಹೀಗೆ ವಿಚಿತ್ರವಾಗಿ ವರ್ತಿಸಿ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ. ಅಂತಹವರಿಂದ ಜನ ದೂರವಿರಲು ಬಯಸುತ್ತಾರೆ. ಅಷ್ಟೇ ಅಲ್ಲ ಅಂಥ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡಲು ಕೂಡ ಹಿಂದೇಟು ಹಾಕುತ್ತಾರೆ. ಕುಡಿತ ಎನ್ನುವುದು ಮಾರಕ ಎಂದು ಗೊತ್ತಿದ್ದರೂ ಅದರಿಂದ ಬಿಡುಗಡೆಯಾಗದೆ ಮದ್ಯವಸನಿಗಳಾಗಿ ಕೈತುಂಬಾ ಸಾಲ ಮಾಡಿಕೊಂಡು ಮನೆ, ಆಸ್ತಿ ಮಾರಾಟ ಮಾಡಿಕೊಂಡು ನಿರ್ಗತಿಕರಾದವರು ಇದ್ದಾರೆ. ಕುಟುಂಬದಲ್ಲಿ ಒಬ್ಬ ಕುಡುಕನಾದರೆ ಇಡೀ ಕುಟುಂಬವೇ ಹಾಳಾಗಿಬಿಡುತ್ತದೆ.

ಕುಡಿತ ಒಬ್ಬ ವ್ಯಕ್ತಿಯ ಸಂಸಾರವನ್ನು ಹಾಳುಮಾಡುತ್ತದೆ, ಮನಸ್ಸನ್ನು ಕೆಡಿಸುತ್ತದೆ, ಆರೋಗ್ಯವನ್ನು ಬಲಿತೆಗೆದುಕೊಳ್ಳುತ್ತದೆ. ಆದರೂ ಜನ ಕುಡಿತವನ್ನು ಬಿಡುತ್ತಿಲ್ಲ. ಕೆಲವರು ಪ್ರತಿ ದಿನ ಸ್ವಲ್ಪ ಪ್ರಮಾಣದಲ್ಲಿ ಕುಡಿದರೆ ಇನ್ನು ಕೆಲವರು ಯಾವುದಾದರು ಸಂದರ್ಭಗಳಲ್ಲಿ ಕುಡಿಯುತ್ತಾರೆ. ಇನ್ನು ಕೆಲವರು ಕುಡಿಯುತ್ತಲೇ ಇರುತ್ತಾರೆ. ಇಂತಹ ವ್ಯಕ್ತಿಗಳು ಒಂದು ಕುಟುಂಬದಲ್ಲಿದ್ದರೆ ಆ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತದೆ. ಅಂತಹವರ ಮಕ್ಕಳು ಬಲಿಪಶುಗಳಾಗಬೇಕಾಗುತ್ತದೆ. ಬಹಳಷ್ಟು ಜನರಿದ್ದಾರೆ ಅವರು ತಾವು ಮಾಡಿದ ಸಂಪಾದನೆಯನ್ನೆಲ್ಲ ಕುಡಿತಕ್ಕೆ ಸುರಿದು ಬರುತ್ತಾರೆ. ಇಂತಹವರಿಂದ ಸಂಸಾರ ನಡೆಯುವುದಾದರೂ ಹೇಗೆ? ಇಂತಹ ಸಂಸಾರಗಳಲ್ಲಿ ಜಗಳ, ಹೊಡೆದಾಟ, ಬಡಿದಾಟಗಳು ನಡೆದು ಸಂಸಾರವೇ ಛಿದ್ರವಾಗಿ ಬಿಡುತ್ತವೆ.

ನಾವು ದಿನನಿತ್ಯ ಅಲ್ಲಲ್ಲಿ ಕುಡುಕರನ್ನು ನೋಡುತ್ತಿರುತ್ತೇವೆ. ಕೆಲವರು ಕುಡಿದು ಚರಂಡಿಯಲ್ಲಿಯೋ? ರಸ್ತೆಯಲ್ಲಿಯೋ ಬಿದ್ದಿದ್ದರೆ ಇನ್ನು ಕೆಲವರು ಕುಡಿತಕ್ಕಾಗಿ ಸಿಕ್ಕವರನ್ನೆಲ್ಲ ಹಣ ಕೊಡಿ ಎಂದು ಪೀಡಿಸುತ್ತಿರುತ್ತಾರೆ. ಇನ್ನು ಸುಸಂಸ್ಕೃತ ಮನೆತನದವರೇ ಕುಡಿತದ ಚಟವನ್ನು ಹತ್ತಿಸಿಕೊಂಡು ಅದರಿಂದ ಹೊರಬರಲಾಗದೆ ಪರದಾಡುತ್ತಿರುತ್ತಾರೆ. ಅಷ್ಟೇ ಅಲ್ಲ ಹಲವು ಕಾಯಿಲೆಗಳನ್ನು ಮೈಮೇಲೆ ಎಳೆದುಕೊಂಡಿರುತ್ತಾರೆ.

ಹಾಗೆನೋಡಿದರೆ ಕುಡಿತ ಒಬ್ಬ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅತಿಯಾದ ಮದ್ಯ ಸೇವಿಸುವವರು ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಇನ್ನು ಕುಡಿತದಿಂದ ವ್ಯಕ್ತಿಯ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಎಂಬುದನ್ನು ನೋಡುವುದಾದರೆ ಮೆದುಳಿನ ನಷ್ಟವಾಗಬಹುದು, ನೆನಪಿನ ಶಕ್ತಿ ಕುಂದಬಹುದು, ಮನಸ್ಸಿನ ತುಂಬಾ ಭ್ರಮೆ ಆವರಿಸಬಹುದು, ಆಘಾತಗಳಾಗಬಹುದು, ಮಾನಸಿಕ ಹಿಂಸೆಯನ್ನು ಅನುಭವಿಸಬಹುದು.

ಇಷ್ಟು ಮಾತ್ರವಲ್ಲದೆ ಕೆಮ್ಮು, ಸ್ನಾಯು ದೌರ್ಬಲ್ಯ, ಎದೆಯಲ್ಲಿ ಸೋಂಕಿನ ಅಪಾಯ ಕಾಣಿಸಬಹುದು, ರಕ್ತದೊತ್ತಡ, ಹೃದಯಾಘಾತ, ಯಕೃತ್ ಊದಿಕೊಂಡು ಹೈಪಟೈಟಿಸ್ ಸಿರೋಸಿಸ್‌ಗೆ ದಾರಿ ಮಾಡಿಕೊಡಬಹುದು, ಹೊಟ್ಟೆಯಲ್ಲಿ ಉರಿ, ವಾಂತಿ, ಹುಣ್ಣುಗಳಾಗಬಹುದು. ಪ್ಯಾಂಕ್ರಿಯಾಟಿಟೀಸ್, ಪುರುಷರಲ್ಲಿ ದುರ್ಬಲತೆ, ಮಹಿಳೆಯರಲ್ಲಿ ಬಂಜೆತನವೂ ಕಂಡುಬರಬಹುದು. ನರಗಳು ದೌರ್ಬಲ್ಯಗೊಂಡು ಕೈಗಳಲ್ಲಿ ನಡುಕ ಹುಟ್ಟಬಹುದು. ನರಗಳು ಮರಗಟ್ಟಿದ ಅನುಭವವಾಗಬಹುದು.

ಮದ್ಯವ್ಯಸನಿಗಳು ಕುಡಿಯುತ್ತಲೇ ಇರಬೇಕು. ಕುಡಿದರೆ ಮಾತ್ರ ನಡೆದಾಡಲು, ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ಮಂಕಾಗುತ್ತಾರೆ. ಏನೋ ಕಳೆದುಕೊಂಡವರಂತೆ ಇರುತ್ತಾರೆ. ಬಹಳಷ್ಟು ಜನ ಮದ್ಯ ವ್ಯಸನಿಗಳು ಲಿವರ್ ಸೋಂಕುಗಳಿಂದ ಬಳಲುತ್ತಿರುತ್ತಾರೆ. ಅಷ್ಟೇ ಅಲ್ಲದೆ ಅದರ ತೊಂದರೆಯಿಂದಲೇ ಸಾವನ್ನಪ್ಪುತ್ತಾರೆ.

ಮೋಜು ಮಸ್ತಿಯಿಂದ ಆರಂಭವಾಗುವ ಮದ್ಯಸೇವಿಸುವ ಅಭ್ಯಾಸ ಕ್ರಮೇಣ ಚಟವಾಗಿ ಕೆಲವರಿಗೆ ಚಟ್ಟಕಟ್ಟುವವರೆಗೆ ನಿಲ್ಲದೆ ಕಾಡುತ್ತದೆ. ಕುಡಿತದಿಂದ ಎಷ್ಟೆಲ್ಲ ತೊಂದರೆಗಳಿವೆ ಎಂಬುದು ಗೊತ್ತಿದ್ದರೂ ಜನ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಬಹಳಷ್ಟು ಮಂದಿ ಕುಡಿತದ ಚಟದಿಂದ ಹೊರಬಂದು ತಮ್ಮ ಜೀವನ ಮತ್ತು ಆರೋಗ್ಯವನ್ನು ಸರಿಪಡಿಸಿಕೊಂಡಿದ್ದಾರೆ. ಅಂತಹವರನ್ನು ನೋಡಿಕೊಂಡು ಇತರರು ದೃಢ ಮನಸ್ಸು ಮಾಡಿ ಅದರಿಂದ ಹೊರಬರಬೇಕು. ಆಗ ಮಾತ್ರ ಒಂದೊಳ್ಳೆಯ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು