ದೆಹಲಿ: ಮನೆಯೊಂದರಲ್ಲಿರುವ ಕಪಾಟಿನಲ್ಲಿ 26 ವರ್ಷದ ಮಹಿಳೆಯ ಶವ ಪತ್ತೆಯಾದ ಘಟನೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.
ಮಹಿಳೆಯ ತಂದೆ ಕೆಲವು ದಿನಗಳಿಂದ ಮಗಳಿಗೆ ಕರೆ ಮಾಡುತ್ತಿದ್ದರು ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಪೊಲೀಸರಿಗೆ ದೂರು ನೀಡಿದ್ದರು.
ನಂತರ ದಾಬ್ರಿ ಪೊಲೀಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಶದಲ್ಲಿ ಹೇಳಿದ ಮನೆಗೆ ಹೋಗಿದ್ದಾರೆ. ಫ್ಲಾಟ್ಗೆ ತೆರಳಿದಾಗ ಆಕೆಯ ಮೃತದೇಹವು ರೂಮಿನ ಕಪಾಟಿನಲ್ಲಿ ಪತ್ತೆಯಾಗಿದೆ. ಮಹಿಳೆಯ ತಂದೆ, ತನ್ನ ಮಗಳನ್ನು ಆಕೆಯ ಲೈವ್-ಇನ್ ಸಂಗಾತಿ ವಿಪಾಲ್ ಹತ್ಯೆ ಮಾಡಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ತನ್ನ ಮಗಳು ವಿಪಾಲ್ ಜೊತೆ ಬಾಡಿಗೆ ಫ್ಲಾಟ್ನಲ್ಲಿ ವಾಸವಾಗಿದ್ದಳು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಡಿಡಿಯು ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.