ಮಂಗಳೂರು: ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ವೃದ್ಧ ದಂಪತಿ ಗಂಭೀರ ಗಾಯಗೊಂಡ ಘಟನೆ ಕದ್ರಿ ಕೆಪಿಟಿ ವೃತ್ತ ಬಳಿಯ ಹೆದ್ದಾರಿಯಲ್ಲಿ ನಡೆದಿದೆ.
ಕದ್ರಿ, ಕಂಬಳ ನಿವಾಸಿಗಳಾದ ಸೂರ್ಯನಾರಾಯಣ ರಾವ್ (65) ಮತ್ತು ಪತ್ನಿ ಸವಿತಾ (61) ಗಂಭೀರ ಗಾಯಗೊಂಡವರು, ಇವರು ಸ್ಕೂಟರಿನಲ್ಲಿ ಕದ್ರಿ, ಕೆಪಿಟಿ ವೃತ್ತದಿಂದ ಮುಂದೆ ಬಂದು ಹೆದ್ದಾರಿಯಲ್ಲಿ ಎಸ್ ಕೆಎಸ್ ಪ್ಲಾನೆಟ್ ಅಪಾರ್ಟೆಂಟ್ ಎದುರಲ್ಲಿ ಯು ಟರ್ನ್ ಹೊಡೆದಿದ್ದಾರೆ. ಈ ವೇಳೆ, ಕೊಟ್ಟಾರ ಕಡೆಯಿಂದ ವೇಗವಾಗಿ ಬರುತ್ತಿದ್ದ ಈಕೋ ಕಾರು ಸ್ಕೂಟರಿಗೆ ಹಿಂದಿನಿಂದ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರಿನಲ್ಲಿದ್ದ ಪತಿ, ಪತ್ನಿ ಇಬ್ಬರೂ ನೆಲಕ್ಕೆ ಎಸೆಯಲ್ಪಟ್ಟಿದ್ದಾರೆ.
ಸೂರ್ಯನಾರಾಯಣ ರಾವ್ ಅವರ ತಲೆಗೆ ಗಂಭೀರ ಏಟು ಬಿದ್ದಿದೆ. ಪತ್ನಿಗೆ ಕೈಕಾಲುಗಳಿಗೆ ಏಟು ಬಿದ್ದಿದ್ದು ಅವರನ್ನು ಕೂಡಲೇ ಸ್ಥಳೀಯರು ಎಜೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕದ್ರಿ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಕೈಗೊಂಡಿದ್ದಾರೆ.