ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೃದಯ ಸ್ತಂಭನವಾಗಿರುವ ಸುದ್ದಿ ಕೇಳಿಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ಭಾನುವಾರ (ಅ. 22) ಸಂಜೆ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಮಾಜಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸೇರಿದ ‘ಜನರಲ್ ಎಸ್ವಿಆರ್’ ಎನ್ನುವ ಟೆಲಿಗ್ರಾಂ ಚಾನಲ್ನಲ್ಲಿ ಈ ಸುದ್ದಿ ಮೊದಲು ಬಂದಿದೆ. ಆ ವರದಿ ಪ್ರಕಾರ, ಅಕ್ಟೋಬರ್ 22ರಂದು ರಾತ್ರಿ 9ಗಂಟೆಗೆ ವ್ಲಾದಿಮಿರ್ ಪುಟಿನ್ ಅವರು ತಮ್ಮ ಬೆಡ್ರೂಮ್ನಲ್ಲಿ ಮಲಗಿದ ಸ್ಥಿತಿಯಲ್ಲಿ ಸೆಕ್ಯೂರಿಟಿ ಅಧಿಕಾರಿಗಳಿಗೆ ಕಂಡಿದ್ದರು. ಆಹಾರ ಮತ್ತು ಡ್ರಿಂಕ್ಸ್ ಇದ್ದ ಟೇಬಲ್ ಕೆಳಗೆ ಬಿದ್ದಿತ್ತು.
ಅಧ್ಯಕ್ಷರು ಕೆಳಗೆ ಬಿದ್ದಾಗ ಟೇಬಲ್ಗೆ ತಾಗಿ ಅದು ಬಿದ್ದು ಶಬ್ದ ಬಂದಿರಬಹುದು. ಪುಟಿನ್ ಅವರು ನೆಲದಲ್ಲಿ ಬಿದ್ದು ಒದ್ದಾಡಿದ್ದಾರೆ. ಅಲ್ಲೇ ಪಕ್ಕದ ರೂಮುಗಳಲ್ಲಿದ್ದ ಕರ್ತವ್ಯನಿರತ ವೈದ್ಯರನ್ನು ಕೂಡಲೇ ಕರೆಸಲಾಯಿತು’ ಎಂದು ಟೆಲಿಗ್ರಾಂ ಚಾನಲ್ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆ ವರದಿ ಪ್ರಕಾರ, ವ್ಲಾದಿಮಿರ್ ಪುಟಿನ್ ಅವರನ್ನು ಅಲ್ಲೇ ವಿಶೇಷ ಕೋಣೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಐಸಿಯುಗೆ ದಾಖಲಿಸಲಾಗಿದೆ. ಸಕಾಲದಲ್ಲಿ ಚಿಕಿತ್ಸೆ ದೊರೆತ ಪರಿಣಾಮ ರಷ್ಯಾ ಅಧ್ಯಕ್ಷರ ಹೃದಯ ಬಡಿತ ಮತ್ತೆ ಶುರುವಾಗಿ, ಅವರಿಗೆ ಪ್ರಜ್ಞೆ ಮರಳಿದೆ. ಹಾಗಂತ ಜನರಲ್ ಎಸ್ವಿಆರ್ ಹೆಸರಿನ ಟೆಲಿಗ್ರಾಂ ಚಾನಲ್ನಲ್ಲಿ ತಿಳಿಸಲಾಗಿದೆ.