ಬಿಸಿ ಬಿಸಿ ನೀರುಳ್ಳಿ ಬಜೆ(ಈರುಳ್ಳಿ ಪಕೋಡ )ವನ್ನು ಮಾಡಿ ತಿನ್ನಲು ಇಲ್ಲಿದೆ ಸುಲಭ ವಿಧಾನ. ಈರುಳ್ಳಿ, ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಓಮದ ಕಾಳು, ಇಂಗು, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹಾಕಿ ಮಾಡಲಾಗುತ್ತದೆ.
ಬೇಕಾಗುವ ಪದಾರ್ಥಗಳು: 5 – 6 ದೊಡ್ಡ ಈರುಳ್ಳಿ, 3 ಕಪ್ ಕಡ್ಲೆ ಹಿಟ್ಟು, 1/2 ಕಪ್ ಅಕ್ಕಿ ಹಿಟ್ಟು,1 ಟೀಸ್ಪೂನ್ ಅಚ್ಚ ಖಾರದ ಪುಡಿ, 1 – 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ, 2 ಟೇಬಲ್ ಚಮಚ ಹೆಚ್ಚಿದ ಕರಿಬೇವು, 1/4 ಟೀಸ್ಪೂನ್ ಇಂಗು, 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಖಾಯಿಸಲು.
ನೀರುಳ್ಳಿ ಬಜೆ ಮಾಡುವ ವಿಧಾನ:
ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ. ಈಗ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ , ಕತ್ತರಿಸಿದ ಕರಿಬೇವಿನ ಸೊಪ್ಪು, ಓಮ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ.
2 ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ.
ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಒಂದು ಕೈ ಹಿಡಿಯಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಹಾಕಿ. ಬಜ್ಜಿಯನ್ನು ಸವಿಯಿರಿ.