ಒಬ್ಬರ ಐಡಿ ಪಾಸ್ ವರ್ಡ್ ನಲ್ಲೇ ಹಲವರು ಮಂದಿ ಒಟಿಟಿಯಲ್ಲಿ ಮನರಂಜನೆ ಅನುಭವಿಸುವ ಸೌಲಭ್ಯವನ್ನು ನೆಟ್ಫ್ಲಿಕ್ಸ್ ಸ್ಥಗಿತಗೊಳಿಸಿದೆ. ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಲಭ್ಯವಾಗುತ್ತಿದ್ದಂತೆ ನೆಟ್ಫ್ಲಿಕ್ಸ್ ಬಳಕೆದಾರರ ಸಂಖ್ಯೆಯೂ ಏರುಮುಖವಾಗಿದೆ.ಅದರಲ್ಲೂ ಸ್ನೇಹಿತರ ಅಥವಾ ಸಂಬಂಧಿಕರ ಖಾತೆಯ ಪಾಸ್ವರ್ಡ್ ಅನ್ನೇ ಬಳಸಿ ತಾವೂ ಚಿತ್ರ ಹಾಗೂ ವೆಬ್ ಸೀರೀಸ್ಗ ಮಜವನ್ನು ಸವಿಯುವ ಹಲವರ ಆಸೆಗೆ ನೆಟ್ಫ್ಲಿಕ್ಸ್ ತಣ್ಣೀರೆರಚಿದೆ.
ಯಾವುದೇ ಮುನ್ಸೂಚನೆ ನೀಡದೆ ನೆಟ್ಫ್ಲಿಕ್ಸ್ ಜಾರಿಗೆ ತಂದಿರುವ ಈ ಕ್ರಮದಿಂದಾಗಿ ಒಟಿಟಿ ವಿಕ್ಷಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ನಿರ್ಧಾರವನ್ನು ಬ್ಲಾಗ್ ಮೂಲಕ ಹಂಚಿಕೊಂಡಿರುವ ನೆಟ್ಫ್ಲಿಕ್ಸ್, ‘ತಾವು ಮಾತ್ರವಲ್ಲದೆ ಇತರರೊಂದಿಗೂ ನೆಟ್ಫ್ಲಿಕ್ಸ್ ಹಂಚಿಕೊಂಡ ಗ್ರಾಹಕರಿಗೆ ಇಂದಿನಿಂದ ಇಮೇಲ್ ಮೂಲಕ ಸಂದೇಶ ಕಳುಹಿಸಲಾಗುವುದು. ನಿಗದಿತ ಸಾಧನ ಹೊರತುಪಡಿಸಿ ಅದೇ ಖಾತೆಯಿಂದ ಬೇರೆ ಕಡೆ ನೆಟ್ಫ್ಲಿಕ್ಸ್ ತೆರೆದರೆ ಪ್ರೊಫೈಲ್ ವರ್ಗಾವಣೆ ಹಾಗೂ ಬಳಕೆಯ ನಿರ್ವಹಣೆ ಮತ್ತು ಸಾಧನ ಕುರಿತು ಮಾಹಿತಿ ಕೇಳಲಾಗುವುದು’ ಎಂದು ಹೇಳಿದೆ.