ಕೊಚ್ಚಿ: ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ದೀಕ್ ಇಂದು ರಾತ್ರಿ (ಆಗಸ್ಟ್ 8) 9ರ ಸುಮಾರಿಗೆ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಸಿದ್ದೀಕ್ ಅವರಿಗೆ ಸೋಮವಾರ ಹೃದಯಾಘಾತವಾಗಿದ್ದು ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆಸ್ಪತ್ರೆಯ ಮೂಲಗಳ ಪ್ರಕಾರ, ಸಿದ್ದೀಕ್ ಅವರಿಗೆ ಎಕ್ಸ್ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಮಲಯಾಳಂನ ‘ರಾಮ್ಜಿ ರಾವ್ ಸ್ಪೀಕಿಂಗ್’, ‘ಇನ್ ಹರಿಹರ್ ನಗರ್’, ‘ಗಾಡ್ಫಾದರ್’, ‘ವಿಯಾಟ್ನಾಂ ಕಾಲೋನಿ’, ‘ಕಾಬೂಲಿವಾಲಾ’ ಮುಂತಾದ ಸಿನಿಮಾಗಳಿಗೆ ಸಿದ್ದೀಕ್ ನಿರ್ದೇಶನ ಮಾಡಿದ್ದಾರೆ. ಸಿದ್ದೀಕ್ ಇಸ್ಮಾಯಿಲ್ ಎಂಬುದು ಅವರ ಪೂರ್ಣ ಹೆಸರು. ನಿರ್ದೇಶನದ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಮಾಡುವ ಮೂಲಕವೂ ಪ್ರೇಕ್ಷಕರಿಗೆ ಪರಿಚಿತರಾಗಿದ್ದರು.