ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಸೂರ್ಯವಂಶಿ’ ಶುಕ್ರವಾರ ಅದ್ದೂರಿಯಾಗಿ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಂಡಿರುವ ಈ ಸಿನಿಮಾಗೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದು, ಮೊದಲ ದಿನವೇ ಬರೋಬ್ಬರಿ 26 ಕೋಟಿ ರೂ. ಕಮಾಯಿ ಮಾಡಿದೆ.
ದೇಶದ ಬಹುತೇಕ ಕಡೆಗಳಲ್ಲಿ ಇನ್ನೂ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಕ್ಕಿಲ್ಲ. ಮಹಾರಾಷ್ಟ್ರ, ಗೋವಾ, ಜಾರ್ಖಾಂಡ್, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶೇ. 50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ಇದೆ. ಈ ಪರಿಸ್ಥಿತಿಯಲ್ಲೂ ಮೊದಲ ದಿನ 26 ಕೋಟಿ ರೂ. ಬಾಚಿಕೊಂಡ ಮೊದಲ ಸಿನಿಮಾ ಎಂಬ ಖ್ಯಾತಿಗೆ ‘ಸೂರ್ಯವಂಶಿ’ ಪಾತ್ರವಾಗಿದೆ. ಆ ಮೂಲಕ ಅಕ್ಷಯ್ ಕುಮಾರ್ ಮುಡಿಗೆ ಇನ್ನೊಂದು ಗರಿ ಸೇರಿಕೊಂಡಂತಾಗಿದೆ.
ದೀಪಾವಳಿ ಹಬ್ಬದ ರಜೆಯಲ್ಲಿ ಶುಕ್ರವಾರ ಭಾರಿ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ. ಶನಿವಾರ ಕೂಡ ಬಹುತೇಕ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಭಾನುವಾರ ಸಹ ಉತ್ತಮ ಕಲೆಕ್ಷನ್ ಆಗಲಿದೆ. ಹಾಗಾಗಿ ಅತಿ ಶೀಘ್ರದಲ್ಲೇ ಈ ಸಿನಿಮಾ 100 ಕೋಟಿ ರೂ. ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗುತ್ತಿದೆ.
ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರೆ, ಅವರ ಪತ್ನಿ ಪಾತ್ರದಲ್ಲಿ ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದಾರೆ. ಅತಿಥಿ ಪಾತ್ರಗಳಲ್ಲಿ ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ನಟಿಸಿದ್ದಾರೆ.