ಈ ವಾರ ಬಿಡುಗಡೆಯಾಗಿರುವ ಹಾಲಿವುಡ್ನ ‘ಆಪೆನ್ಹೈಮರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಭಾರತದಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಸದ್ಯ ಚಿತ್ರಕ್ಕೆ ಹೊಸ ವಿವಾದ ಸುತ್ತಿಕೊಂಡಿದೆ. ಚಿತ್ರದಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಗೆ ಅವಮಾನ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇದು ಭಾರೀ ಚರ್ಚೆ ಹುಟ್ಟಾಕ್ಕಿದೆ.
ಖ್ಯಾತ ವಿಜ್ಞಾನಿ ಆಪೆನ್ಹೈಮರ್ ಮೇಲೆ ಹಿಂದೂ ಗ್ರಂಥಗಳ ಪ್ರಭಾವ ಹೆಚ್ಚಾಗಿ ಇತ್ತು. ಅಣುಬಾಂಬ್ ಕಂಡುಹಿಡಿಯುವ ಹಾದಿಯಲ್ಲಿ ಭಗವದ್ಗೀತೆ ತನಗೆ ಸಹಕಾರಿಯಾಗಿತ್ತು ಎಂದು ಖುದ್ದು ಆಪೆನ್ಹೈಮರ್ ಹೇಳಿದ್ದರು. ಇದೀಗ ಅವರ ಜೀವನವನ್ನಾಧರಿಸಿ ಕ್ರಿಸ್ಟೋಫರ್ ನೋಲನ್ ‘ಆಪೆನ್ಹೈಮರ್’ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ಆಪೆನ್ಹೈಮರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಐರಿಷ್ ನಟ ಕಿಲಿಯನ್ ಮರ್ಫಿ ಕೂಡ ಭಗವದ್ಗೀತೆ ಓದಿದ್ದಾಗಿ ಹೇಳಿದ್ದರು.
ಆದರೆ ಚಿತ್ರದಲ್ಲಿ ಭಗವದ್ಗೀತೆಗೆ ಅವಮಾನ ಮಾಡಿದ್ದಾರೆ, ಇದು ಆ ದೃಶ್ಯಗಳ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಿದೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ. ಚಿತ್ರದ ಮೇಲೆಭಗದ್ಗೀತೆ ಪ್ರಭಾವ ಇದೆ. ಆದರೆ ಚಿತ್ರದ ದೃಶ್ಯವೊಂದರಲ್ಲಿ ಫ್ಲಾರೆನ್ಸ್ ಪಿಗ್ಸ್ ಪಾತ್ರಧಾರಿ ಜೀನ್ ಟಾಟ್ಸ್ಲಾಕ್ ಮತ್ತು ಆಪೆನ್ಹೈಮರ್ ನಡುವಿನ ಪ್ರಣಯ ದೃಶ್ಯದಲ್ಲಿ ಆಕೆ ಭಗವದ್ಗೀತೆಯನ್ನು ಓದುತ್ತಿರುವುದನ್ನು ತೋರಿಸಲಾಗಿದೆ. ಇದೇ ವಿಚಾರ ಈಗ ವಿವಾದ ಸೃಷ್ಟಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನೆಟ್ಟಿಗರು ಸಹ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಿರ್ದೇಶಕ ನೋಲನ್ ತಮ್ಮ ಚಿತ್ರದಲ್ಲಿ ಭಗವದ್ಗೀತೆಯನ್ನು ಪ್ರಸ್ತಾಪಿಸಿರುವುದು ಒಳ್ಳೆಯದು, ಆದರೆ ಪವಿತ್ರ ಭಗವದ್ಗೀತೆಯನ್ನು ಬೋಲ್ಡ್ ದೃಶ್ಯಗಳಲ್ಲಿ ತೋರಿಸಿರುವುದ ಸೂಕ್ತವಲ್ಲ ಎನ್ನುತ್ತಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಈ ದೃಶ್ಯ ತೆಗೆದು ಹಾಕಬೇಕೆಂದು ಅಥವಾ ಭಾರತದಲ್ಲಿ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.