ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸುತ್ತಿರುವ “ಮಿಷನ್ ಮಜ್ನು’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ರಶ್ಮಿಕಾಗೆ ಮೊದಲ ಹಿಂದಿ ಚಿತ್ರ. ಈಗಾಗಲೇ “ಮಿಷನ್ ಮಜ್ನು’ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮೊದಲ ಹಂತದ ಶೂಟಿಂಗ್ ಕೂಡ ಪೂರ್ಣಗೊಂಡಿದೆ.
ಬಾಲಿವುಡ್ನಲ್ಲಿ ತಮ್ಮ ಮೊದಲ ಸಿನಿಮಾ ಪೂರ್ಣವಾಗುವ ಮೊದಲೇ, ನಟಿ ರಶ್ಮಿಕಾ ಮಂದಣ್ಣಗೆ ಮತ್ತೂಂದು ಹಿಂದಿ ಸಿನಿಮಾಕ್ಕೆ ನಾಯಕಿಯಾಗಿ ಅಭಿನಯಿಸಲು ಅವಕಾಶ ಸಿಕ್ಕಿದೆ.
ಅಮಿತಾಭ್ ಬಚ್ಚನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಗುಡ್ ಬೈ’ ಸಿನಿಮಾದಲ್ಲಿ, ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ಕೂಡ ನೆರವೇರಿದ್ದು, ಚಿತ್ರದ ಶೂಟಿಂಗ್ ಕೂಡ ಇದೇ ತಿಂಗಳು ಶುರುವಾಗಲಿದೆ ಎನ್ನಲಾಗುತ್ತಿದೆ.
“ಗುಡ್ ಬೈ’ ಸಿನಿಮಾವನ್ನು ವಿಕಾಸ್ ಭಾಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷದ ಕೊನೆಯೊಳಗೆ ರಶ್ಮಿಕಾ ಮಂದಣ್ಣ ಹಿಂದಿಯಲ್ಲಿ ಅಭಿನಯಿಸುತ್ತಿರುವ ಎರಡು ಸಿನಿಮಾಗಳು ಬಿಡುಗಡೆಯಾಗುವುದು ಬಹುತೇಕ ಪಕ್ಕ ಎನ್ನಲಾಗುತ್ತಿದೆ.