Bengaluru 24°C
Ad

ಬಸವ ಗಿರಿಯ ಪೂಜ್ಯ ಶ್ರೀ ಡಾ| ಅಕ್ಕ ಅನ್ನಪೂರ್ಣತಾಯಿ ಲಿಂಗೈಕ್ಯ

Akkama

ಬೀದರ್:‌ ಲಿಂಗಾಯತ ಮಹಾಮಠ, ಬಸವ ಗಿರಿ ಇಲ್ಲಿನ ಪೂಜ್ಯ ಶ್ರೀ ಡಾ| ಅಕ್ಕ ಅನ್ನಪೂರ್ಣತಾಯಿ ಇವರು ಇಂದು (ಮೇ. 23) ಮುಂಜಾನೆ ಲಿಂಗೈಕ್ಯರಾಗಿದ್ದಾರೆ.

ನಾಳೆ (ಮೇ. 24) ಬೀದರಿನ ಬಸವಗಿರಿ ಯಲ್ಲಿ ಪೂಜ್ಯಶ್ರೀ ಡಾ| ಅಕ್ಕ ಅನ್ನಪೂರ್ಣತಾಯಿ ಅವರ ಅಂತಿಮ ಸಂಸ್ಕಾರವು ನಡೆಯಲಿದೆ ಎಂದು ಲಿಂಗಾಯತ ಮಹಾಮಠ ಬೀದರ ಪ್ರಕಟನೆ ತಿಳಿಸಿದೆ.

ಪೂಜ್ಯ ಶ್ರೀ ಡಾ| ಅಕ್ಕ ಅನ್ನಪೂರ್ಣತಾಯಿ ಅವರಿಗೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

1963 ರಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಅಕ್ಕ ಅನ್ನಪೂರ್ಣತಾಯಿ ಬಾಲ್ಯದಿಂದಲೇ ಅನುಭಾವದ ತಾತ್ವಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡವರು. ಎಂ.ಎ. ಕನ್ನಡ ಪದವಿ ಪಡೆದಿರುವ ಅವರು, ಜನಪರ ಕಾಳಜಿ, ಸಮ ಸಮಾಜ ನಿರ್ಮಾಣದ ಕನಸು ಹೊತ್ತು ಅವುಗಳನ್ನು ಸಾಕಾರಗೊಳಿಸಲು ಸತತ ಪ್ರಯತ್ನಿಸಿದವರು.

ಹತ್ತು ಹಲವು ಆಧ್ಯಾತ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ದೇಶ, ವಿದೇಶಗಳಲ್ಲಿ ಅನುಭಾವ ಗೋಷ್ಠಿಗಳನ್ನು ನೀಡಿದ್ದಾರೆ. ಬಸವ ತತ್ತ್ವ ಪ್ರಚಾರಕರಾಗಿ, ಪ್ರಬುದ್ಧ ಚಿಂತಕರಾಗಿ ಕನ್ನಡ ತತ್ವಜ್ಞಾನದ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ದೇಶದಾದ್ಯಂತ ಬಸವ ತತ್ವ ಕುರಿತು ಪ್ರವಚನ ಕೊಟ್ಟಿದ್ದಾರೆ. ನೂರಾರು ವಿಚಾರ ಸಂಕಿರಣ, ಅನುಭಾವ ಗೋಷ್ಠಿಗಳನ್ನು ನಡೆಸಿದ್ದಾರೆ. ಶೋಷಿತರು, ನಿರ್ಗತಿಕರ ಗಟ್ಟಿ ಧ್ವನಿಯಾಗಿ ಅವರಲ್ಲಿ ಜೀವನೋತ್ಸಾಹ ತುಂಬಿದ್ದಾರೆ. ಗಡಿನಾಡಿನ ಭಾಷೆ- ಧರ್ಮ ಸಮನ್ವಯದ ಶಕ್ತಿಯಾಗಿದ್ದರು.

 

Ad
Ad
Nk Channel Final 21 09 2023
Ad