News Karnataka Kannada
Sunday, May 19 2024
ಕ್ಯಾಂಪಸ್

ತುಮಕೂರು: ಮಾಧ್ಯಮದ ಸ್ವರೂಪ ಬದಲಾವಣೆ ನಿರಂತರ ಎಂದ ರವಿ ಹೆಗಡೆ

Ravi Hegde says the nature of the media is constantly changing
Photo Credit : News Kannada

ತುಮಕೂರು: ಎಲ್ಲ ರಂಗಗಳಲ್ಲಿ ಆಗುತ್ತಿರುವಂತೆಯೇ ಮಾಧ್ಯಮರಂಗದಲ್ಲಿಯೂ ಬದಲಾವಣೆ ನಿರಂತರ. ಅದರ ಸ್ವರೂಪ ಬದಲಾಗುವುದನ್ನು ಯಾರೂ ತಡೆಯಲಾಗದು. ಡಿಜಿಟಲ್ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಕನ್ನಡಪ್ರಭ- ಸುವರ್ಣನ್ಯೂಸ್‍ನ ಸಮೂಹ ಸಂಪಾದಕ ರವಿ ಹೆಗಡೆ ಹೇಳಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಮಾಧ್ಯಮ ಕ್ಷೇತ್ರ ಎಷ್ಟೇ ಬದಲಾದರೂ ಅದಕ್ಕೆ ಬೇಕಾದ ಪ್ರಾಥಮಿಕ ಕೌಶಲಗಳು ಬದಲಾಗುವುದಿಲ್ಲ. ಸುದ್ದಿಯನ್ನು ಗ್ರಹಿಸುವ ಸುದ್ದಿನಾಸಿಕ, ಭಾಷಾ ಕೌಶಲ, ಬರವಣಿಗೆ, ಭಾಷಾಂತರ ಜ್ಞಾನ, ವಿನ್ಯಾಸದ ತಿಳುವಳಿಕೆ, ಸಂಶೋಧನೆಯಲ್ಲಿ ಆಸಕ್ತಿ ಇವುಗಳೆಲ್ಲ ಎಲ್ಲ ಕಾಲದಲ್ಲೂ ಪತ್ರಕರ್ತರಲ್ಲಿ ಇರಬೇಕಾದ ಅರ್ಹತೆಗಳು ಎಂದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶಿನ್ ಲರ್ನಿಂಗ್, ಆಗ್ಮೆಂಟೆಡ್ ರಿಯಾಲಿಟಿ, ಮೆಟಾವರ್ಸ್ ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರವನ್ನು ಇನ್ನಷ್ಟು ಆವರಿಸಿಕೊಳ್ಳಲಿವೆ. ಇವುಗಳೆಲ್ಲ ಮಾಧ್ಯಮ ಪಠ್ಯಕ್ರಮದ ಅನಿವಾರ್ಯ ಭಾಗಗಳಾಗಬೇಕಿದೆ ಎಂದು ವಿಶ್ಲೇಷಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ವಿವಿ ನೂತನ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಮಾಧ್ಯಮ ಕ್ಷೇತ್ರ ಎಂದರೆ ಕಟ್ಟಕಡೆಯ ವ್ಯಕ್ತಿಗೂ ವಿಷಯ ತಿಳಿಸುವ ಸಾಧನವಾಗಿದೆ. ಇದು ದೇಹದ ರಕ್ತದಂತೆ, ಸಮಾಜದ ಹೃದಯವಿದ್ದಂತೆ. ಸಮಾಜದ ಆಗು-ಹೋಗುಗಳ ಕುರಿತು ಪೂರಕವಾಗಿ ಪ್ರತಿಕ್ರಿಯೆ ನೀಡುತ್ತದೆ ಎಂದರು.

ಸಮಸ್ಯೆ ಇದ್ದಲ್ಲಿ ಪರಿಹಾರ ಇದ್ದೇ ಇರುತ್ತದೆ. ಮಾಧ್ಯಮಗಳಿಂದಾಗಿ, ಅದರಲ್ಲೂ ಸಾಮಾಜಿಕ ಮಾಧ್ಯಮಗಳಿಂದಾಗಿ, ಸಮಾಜದಲ್ಲಿ ಅನೇಕ ಬಾರಿ ಗೊಂದಲ ಸೃಷ್ಟಿಯಾಗುವ ಸನ್ನಿವೇಶ ಇರುತ್ತದೆ. ಆದರೆ ಸಮಾಜದ ಉನ್ನತಿಗೆ ಮಾಧ್ಯಮಗಳ ಕೊಡುಗೆ ಗಮನಿಸಿದರೆ, ಮಾಧ್ಯಮಗಳು ಎಷ್ಟು ಅನಿವಾರ್ಯ ಎಂದು ಅರ್ಥವಾಗುತ್ತದೆ ಎಂದರು.

ಅಧ್ಯಕ್ಷೀಯ ಭಾಷಣ ಮಾಡಿದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಹಿರಿಯರ ಮಾರ್ಗದರ್ಶನದಂತೆ ನಡೆದರೆ ಯಶಸ್ಸು ಖಂಡಿತ. ತರಗತಿಯ ಪಾಠಕ್ಕಿಂತ ಕೌಶಲ್ಯ ಮುಖ್ಯವಾಗಿರಬೇಕು. ಕನ್ನಡ  ಪತ್ರಿಕೋದ್ಯಮ ಪಿತಾಮಹರಾದ ಹರ್ಮನ್ ಮೋಗ್ಲಿಂಗ್ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದರು.

ಸಾಧಕ ವಿದ್ಯಾರ್ಥಿಗಳಾದ ವೈಭವಿ ಕೃಷ್ಣ, ಉಮೇಶ ರೈತನಗರ ಹಾಗೂ ಪ್ರಣವ್ ಅನಿರುದ್ಧ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಿರ್ಮಲ್ ರಾಜು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಚಿ.ನಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಂ, ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ.ವಿ., ಉಪನ್ಯಾಸಕರಾದ ಡಾ. ಪೃಥ್ವೀರಾಜ ಟಿ., ಕೋಕಿಲ ಎಂ.ಎಸ್., ಅನನ್ಯ ಎಂ. ಮತ್ತಿತತರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು