News Karnataka Kannada
Tuesday, April 30 2024
ಕ್ಯಾಂಪಸ್

ಜೀವನ ನಿರ್ವಹಣೆಗೆ ಕೃಷಿ ಅಗತ್ಯ: ಅಬ್ರಹಾಂ ಜೇಮ್ಸ್

Sdm C
Photo Credit :

ಉಜಿರೆ: ಯುವಜನತೆ ಕೃಷಿಯನ್ನು ಒಂದು ಉದ್ಯೋಗ ಮತ್ತು ಉದ್ಯಮವನ್ನಾಗಿ ತೆಗೆದುಕೊಳ್ಳಬೇಕು. ಆಗ ಕೃಷಿಯಲ್ಲಿ ಆಸಕ್ತಿ ಮೂಡುವುದಲ್ಲದೇ ಅದು ಜೀವನ ನಿರ್ವಹಣೆಯ ಮೂಲವಾಗುತ್ತದೆ ಎಂದು ಉಜಿರೆಯ ರುಡ್‌ಸೆಟ್ ಸ್ವಉದ್ಯೋಗ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಹೇಳಿದರು.

ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಮ್ಯಕ್ ದರ್ಶನ್ ಸಭಾಂಗಣದಲ್ಲಿ ರಸಾಯನ ಶಾಸ್ತ್ರ ವಿಭಾಗ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ `ನೀರು ಮತ್ತು ಮಣ್ಣಿನ ರಾಸಾಯನಿಕ ಗುಣಮಟ್ಟದ ನಿಯತಾಂಕ ಮಾಪನಗಳ ಮಾಹಿತಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಕೃಷಿಯ ಕಡೆಗೆ ಒಲವನ್ನು ಬೆಳೆಸಿಕೊಳ್ಳಬೇಕು. ಯಾವ ರೀತಿ ಉದ್ಯೋಗಕ್ಕಾಗಿಯೇ ಸಮಯವನ್ನು ನಿಗದಿಪಡಿಸಲಾಗುವುದೋ ಅದೇ ರೀತಿ ಕೃಷಿ ಚಟುವಟಿಕೆಗಳಿಗೂ ನಿರ್ದಿಷ್ಟ ಸಮಯವನ್ನು ಮೀಸಲಿಡುವುದರಿಂದ ಉತ್ತಮ ಇಳುವರಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಬದಲಾದ ಕಾಲಘಟ್ಟದಲ್ಲಿ ಕೃಷಿಯ ಜೊತೆಗೆ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕವಾಗಿದೆ. ಕೇವಲ ಏಕರೀತಿಯ ಬೆಳೆಗಳಿಗೆ ಸೀಮಿತವಾಗದೆ, ಮಿಶ್ರಬೆಳೆಗಳನ್ನು ಬೆಳೆದಾಗ ಉತ್ತಮ ಆದಾಯ ಗಳಿಸಬಹುದು ಎಂದು ಹೇಳಿದರು. ಮನುಷ್ಯನ ದೇಹಕ್ಕೆ ಪೋಷಕಾಂಶಗಳ ಅಗತ್ಯತೆ ಹೇಗೋ ಅದೇರಿತಿ ಕೃಷಿಗೂ ಪೋಷಕಾಂಶಗಳ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಮಣ್ಣಿನ ಪರೀಕ್ಷೆಯ ಮಹತ್ವವನ್ನು ತಿಳಿಸಿಕೊಡುವ ಉದ್ದೇಶವನ್ನೊಳಗೊಂಡ ಇಂತಹ ಕಾರ್ಯಕ್ರಮಗಳು ಕೃಷಿಕರ ಜೊತೆಗೆ  ವಿದ್ಯಾರ್ಥಿಗಳಲ್ಲಿಯೂ ಅರಿವು ಮೂಡಿಸುತ್ತಿದೆ ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ರಾಷ್ಟ್ರಪ್ರಶಸ್ತಿ ವಿಜೇತ ಕೃಷಿಕ ಪ್ರಭಾಕರ ಮಯ್ಯ ಸುರ್ಯ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈಯಲು ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಅಗತ್ಯವಿದೆ ಎಂದು ತನ್ನ ಜೀವನದ ಅನುಭವಗಳನ್ನು ತಿಳಿಸಿದರು. ಹಾಗೂ ಮಣ್ಣು ಮತ್ತು ನೀರಿನ ಗುಣಮಟ್ಟದ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್.ಉದಯಚಂದ್ರ ಮಾತನಾಡಿ, ನೀರು ಮತ್ತು ಮಣ್ಣಿನಲ್ಲಿರುವ ರಾಸಾಯನಿಕ ಅಂಶಗಳ ಅಧ್ಯಯನದಿಂದ ಪರಿಸರಮಾಲಿನ್ಯದ ಬಗೆಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡುತ್ತದೆ ಎಂದು ಅಭಿವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಸ್ಪಟಿಕ ಅಸೋಸಿಯೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ.ವಿಶ್ವನಾಥ. ಪಿ, ರಸಾಯನ ಶಾಸ್ತ್ರ ವಿಭಾಗದ ಹಾಗು ಬೆಳ್ತಂಗಡಿ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕಿ ನಂದಕುಮಾರಿ ಕೆ.ಪಿ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ದಿಶಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರೆ, ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕ ಡಾ. ರಾಜೇಶ್ ಎನ್ ಹೆಗಡೆ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು