ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿರುವ ಅಫ್ಘಾನಿಸ್ತಾನ ನಿರಾಶ್ರಿತರಿಗೆ ನೀಡಿದ್ದ ಗಡುವು ಅಂತ್ಯಗೊಂಡ ಬಳಿಕ, ಪಾಕಿಸ್ತಾನದ ಭದ್ರತಾ ಪಡೆಗಳು ನೂರಾರು ಅಫ್ಘನ್ ನಿರಾಶ್ರಿತರನ್ನು ಬಂಧಿಸಿ ಗಡಿಪಾರು ಮಾಡುವ ಕಾರ್ಯ ಆರಂಭಿಸಿದೆ.
ದಾಖಲಾಗದ ಅಥವಾ ನೋಂದಣಿಯಾಗದ ಎಲ್ಲಾ ವಿದೇಶಿಗರ ವಿರುದ್ಧ ಪಾಕಿಸ್ತಾನ ಸರ್ಕಾರ ಹೊಸದಾಗಿ ವಲಸಿಗರ ವಿರೋಧಿ ಕಾರ್ಯಾಚರಣೆ ಆರಂಭಿಸಿದ್ದು, ಅದರ ಭಾಗವಾಗಿ ಅಫ್ಘನ್ ನಿರಾಶ್ರಿತರನ್ನು ಬಲವಂತವಾಗಿ ಹೊರದಬ್ಬಲಾಗುತ್ತಿದೆ. ಇದರಿಂದ ಸುಮಾರು 20ಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ಸಂಕಷ್ಠ ಎದುರಾಗಿದೆ.
ಗಡಿಪಾರು ಕಾರ್ಯಾಚರಣೆಯು ಆರಂಭಗೊಂಡಿದೆ ಎಂದು ಪಾಕಿಸ್ತಾನದ ಹಂಗಾಮಿ ಒಳಾಡಳಿತ ಸಚಿವ ಸರ್ಫರಾಜ್ ಬುಗ್ತಿ ಖಚಿತಪಡಿಸಿದ್ದಾರೆ. ʼಇಂದು ನಾವು 64 ಅಫ್ಘನ್ ರಾಷ್ಟ್ರೀಯರಿಗೆ ಗುಡ್ ಬೈ ಹೇಳಿದ್ದೇವೆ, ಅವರು ಮನೆಗೆ ಹೋಗುವ ಪ್ರಯಾಣ ಆರಂಭಗೊಂಡಿದೆ” ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. “ಸೂಕ್ತ ದಾಖಲಾತಿಗಳಿಲ್ಲದೆ ದೇಶದಲ್ಲಿ ವಾಸಿಸುತ್ತಿರುವ ಯಾವುದೇ ವ್ಯಕ್ತಿಗಳನ್ನು ತಾಯ್ನಾಡಿಗೆ ಮರಳಿ ಕಳುಹಿಸುವ ಪಾಕಿಸ್ತಾನದ ದೃಢ ನಿರ್ಧಾರಕ್ಕೆ ಇದು ಸಾಕ್ಷಿಯಾಗಿದೆ” ಎಂದು ಅವರು ಹೇಳಿದ್ದಾರೆ.